ಚಿಕ್ಕಬಳ್ಳಾಪುರದಲ್ಲಿ ನೂರು ಹಾಸಿಗೆಗಳ ಐಸೋಲೇಷನ್ ಆಸ್ಪತ್ರೆ: ಡಾ.ಅಶ್ವಥ್ ನಾರಾಯಣ

Update: 2020-03-21 16:44 GMT

ಬೆಂಗಳೂರು, ಮಾ. 21: ಕೊರೋನ ವೈರಸ್ ತಡೆಗೆ ಚಿಕ್ಕಬಳ್ಳಾಪುರದಲ್ಲಿ ನೂರು ಹಾಸಿಗೆಗಳ ಪ್ರತ್ಯೇಕ ನಿಗಾ ವ್ಯವಸ್ಥೆ(ಐಸೊಲೇಷನ್) ಆಸ್ಪತ್ರೆ ನಿರ್ಮಿಸಲು ಜಿಲ್ಲಾಡಳಿತ ತಯಾರಾಗಿದ್ದು, 25 ವೆಂಟಿಲೇಟರ್ಸ್ ಹಾಗೂ ಆಕ್ಸಿಜನ್ ಸೌಲಭ್ಯವುಳ್ಳ 50 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ತಿಳಿಸಿದ್ದಾರೆ.

ಶನಿವಾರ ವಿಧಾನಸೌಧದಲ್ಲಿ ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲಾಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದ ಅವರು, ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಒಬ್ಬರಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಸುದೀರ್ಘ ಚರ್ಚೆ ನಡೆಸಿದರು.

ಕೊರೋನ ವೈರಸ್ ಶಂಕೆ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 129 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಆ ಪೈಕಿ ಕೆಲವರು ಅವಧಿ ಮುಗಿಸಿ ಯಾವುದೇ ಸಮಸ್ಯೆ ಇಲ್ಲದೆ ಹೊರಬಂದಿದ್ದಾರೆ. ಗೌರಿಬಿದನೂರು ಒಬ್ಬರಿಗೆ ಸೋಂಕು ಪತ್ತೆಯಾಗಿದ್ದು, ಆಶಾ ಕಾರ್ಯಕರ್ತೆಯರೇ ಇದನ್ನು ಪತ್ತೆಹಚ್ಚಿದ್ದಾರೆ ಎಂದು ತಿಳಿಸಿದರು.

ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಎಲ್ಲ ಅಧಿಕಾರಿಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೊರೋನ ಬಗ್ಗೆ ಮಾಹಿತಿ ನೀಡಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆದಿವೆ. ಜನ ಗುಂಪಾಗಿ ಒಟ್ಟಿಗೆ ಸೇರದಂತೆ ತಡೆಯುವ ಮೂಲಕ ಆರೋಗ್ಯ ಕಾಪಾಡುಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಕೊರೋನ ಸೋಂಕು ತಡೆ ಕ್ರಮಗಳ ಜತೆಗೆ ಸೋಂಕು ಪತ್ತೆಯಾದ ಸಂದರ್ಭದಲ್ಲಿ ಅದನ್ನು ಎದುರಿಸಲು ಯಾವ ರೀತಿ ಮುನ್ನೆಚ್ಚರಿಕೆ ಕೈಗೊಳ್ಳಬೇಕೆಂಬುದನ್ನು ಪರಿಶೀಲಿಸಲಾಗಿದೆ ಎಂದ ಅವರು, ಜನ ಸಾಮಾನ್ಯರು ಆತಂಕಪಡುವ ಅಗತ್ಯವಿಲ್ಲ ಎಂದರು.

ಮೇಕ್‌ಶಿಫ್ಟ್ ಆಸ್ಪತ್ರೆ: ರಾಮನಗರ-ಬೆಂಗಳೂರು ನಡುವೆ ಸಂಚರಿಸುವವರ ಸಂಖ್ಯೆ ಹೆಚ್ಚು. ಅಲ್ಲದೆ, ಇದು ಪ್ರವಾಸಿ ಸ್ಥಳ. ಹೀಗಾಗಿ, ಜಿಲ್ಲೆಯಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಲಾಗಿದೆ. ಸದ್ಯ ಇಲ್ಲಿ 50 ಹಾಸಿಗೆಯ ಆಸ್ಪತ್ರೆ ಇದ್ದು, 250 ಹಾಸಿಗೆಗಳ ಆಸ್ಪತ್ರೆ ಕಟ್ಟಡದ ನಿರ್ಮಾಣ ಕಾರ್ಯನಡೆಯುತ್ತಿದೆ. ಕಟ್ಟಡವನ್ನು ಉಪಯೋಗಿಸಲು ಅನುಕೂಲವಾಗುವಂತೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ.

ಇದನ್ನು ಐಸೋಲೇಷನ್ ಆಸ್ಪತ್ರೆಯನ್ನಾಗಿ ಬಳಸಲು ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ, ತಾತ್ಕಾಲಿಕವಾಗಿ ಹಾಸ್ಟೆಲ್‌ಗಳನ್ನು ಕ್ವಾರಂಟೈನ್ ಹಾಗೂ ಐಸೋಲೇಷನ್ ವಾರ್ಡ್‌ಗಳಾಗಿ ಮಾಡಿ ಚಿಕಿತ್ಸೆಗೆ ಬಳಸಿಕೊಳ್ಳಲು ಸೂಚಿಸಿದ್ದೇನೆ. ಈ ಹಾಸ್ಟೆಲ್‌ಗಳನ್ನು ಮೇಕ್‌ಶಿಫ್ಟ್ ಆಸ್ಪತ್ರೆಗಳನ್ನಾಗಿಸಲು ಎಲ್ಲ ಅಗತ್ಯ ಮೂಲ ಸೌಕರ್ಯ ಕಲ್ಪಿಸಲಾಗುತ್ತದೆ. ಸಂಕಷ್ಟದ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ನೆರವಾಗಲು ಮುಂದಾಗಿರುವ ರಾಜರಾಜೇಶ್ವರಿ ಮೆಡಿಕಲ್ ಕಾಲೇಜ್ ಜಿಲ್ಲೆಗೆ ಅಗತ್ಯ ವೆಂಟಿಲೇಟರ್ ವ್ಯವಸ್ಥೆ ಒದಗಿಸಲು ಒಪ್ಪಿದೆ. ಪರಿಸ್ಥಿತಿ ಗಂಭೀರವಾಗುವ ಮೊದಲೇ ಮುನ್ನೆಚ್ಚರಿಕೆ ವಹಿಸುವುದರ ಜತೆಗೆ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗುವಂತೆ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದರು. ರಾಮನಗರ ಜಿಲ್ಲಾಧಿಕಾರಿ ಡಾ.ಎಂ.ಎಸ್.ಅರ್ಚನಾ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ ಹಾಗೂ ಹಿರಿಯ ಅಧಿಕಾರಿಗಳು ವೀಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News