ಸರಗಳ್ಳತನ ಪ್ರಕರಣ: ಮಹಿಳೆ ಸೇರಿ ಮೂವರ ಬಂಧನ

Update: 2020-03-21 18:20 GMT

ಬೆಂಗಳೂರು, ಮಾ.21: ಸಾರ್ವಜನಿಕರ ಗಮನ ಬೇರೆಡೆ ಸೆಳೆದು, ಸರಗಳ್ಳತನ ಮಾಡುತ್ತಿದ್ದ ಆರೋಪ ಪ್ರಕರಣ ಸಂಬಂಧ ಹೊರರಾಜ್ಯದ ಮಹಿಳೆ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿ, 40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.

ಈ ಕುರಿತು ಶನಿವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಮಧ್ಯಪ್ರದೇಶದ ಭೂಪಾಲ್ ನಿವಾಸಿ ಅಬುಝರ್ ಅಲಿ (42), ಅಬ್ದುಲ್ ಹುಸೇನ್ (35), ರನಿಯಾ (40) ಎಂಬುವರು ಬಂಧಿತ ಆರೋಪಿಗಳಾಗಿದ್ದು, ಇವರಿಂದ, 40 ಲಕ್ಷ ಮೌಲ್ಯದ 1 ಕೆಜಿ 35 ಗ್ರಾಂ ತೂಕದ ಚಿನ್ನದ ಸರಗಳನ್ನು ವಶಪಡಿಸಿಕೊಂಡು 23 ಸರಗಳವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದರು.

ಬಂಧಿತರು ಮಧ್ಯಪ್ರದೇಶ, ಇಂದೋರ್, ಭೂಪಾಲ್, ನಾಗ್ಪುರ, ದೆಹಲಿ, ಮುಂಬೈ, ಧಾರವಾಡ ಇನ್ನಿತರ ಕಡೆಗಳಲ್ಲಿ ಮಾನಗಳಲ್ಲಿ ಸಂಚರಿಸುತ್ತಿದ್ದು, ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಸರಗಳ್ಳತನ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ನಂತರ, ಪಂಚತಾರಾ ಹೋಟೆಲ್‌ಗಳಲ್ಲಿ ಉಳಿದುಕೊಂಡು ಶ್ರೀಮಂತರ ಸೋಗಿನಲ್ಲಿ ಓಡಾಡುತ್ತಿದ್ದ ಆರೋಪಿಗಳು, ನಿರ್ಜನ ಪ್ರದೇಶಗಳಿಗೆ ತೆರಳಿ ಒಂಟಿ ಮಹಿಳೆಯರನ್ನು ಗುರುತಿಸಿ ಸರಗಳವು ಮಾಡಿ ಪರಾರಿಯಾಗುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದರು.

ಆರೋಪಿಗಳು 2010ರಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದು, 3 ವರ್ಷಗಳ ಕಾಲ ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಹೊರ ಬಂದ ನಂತರ ಮತ್ತೆ ಸರಗಳ್ಳತನ ಕೃತ್ಯದಲ್ಲಿ ತೊಡಗಿದ್ದರು. ಇಲ್ಲಿನ ವಿವೇಕ ನಗರದಲ್ಲಿ ನಡೆದಿದ್ದ ಮಹಿಳೆಯೊಬ್ಬರ ಸರಗಳ್ಳತನ ಪ್ರಕರಣವನ್ನು ಕೈಗೆತ್ತಿಕೊಂಡ ಸಿಸಿಬಿ ಪೊಲೀಸರು, ಅಲ್ಲಿನ ಸಿಸಿಟಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಖಚಿತ ಮಾಹಿತಿಯಾಧರಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ಬಂಧನದಿಂದ ಕೆಆರ್‌ಪುರ ಮಡಿವಾಳ ಸೇರಿ ಒಟ್ಟು 23 ಸರಗಳ್ಳತನ ಕೃತ್ಯಗಳು ಪತ್ತೆಯಾಗಿವೆ ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಡಿಸಿಪಿ ಕುಲ್‌ದೀಪ್ ಕುಮಾರ್ ಜೈನ್ ಸೇರಿ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News