ಮಾ.31ರವರೆಗೆ ದ. ಕನ್ನಡ, ಕೊಡಗು ಸೇರಿ ರಾಜ್ಯದ 9 ಜಿಲ್ಲೆಗಳು 'ಶಟ್ ಡೌನ್': ಗೃಹಸಚಿವ ಬೊಮ್ಮಾಯಿ

Update: 2020-03-22 14:33 GMT

ಬೆಂಗಳೂರು, ಮಾ.22: ಕೊರೋನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 9 ಜಿಲ್ಲೆಗಳನ್ನು ಇಂದಿನಿಂದ ಮಾ.31 ರವರೆಗೂ ಲಾಕ್‌ಡೌನ್ ಮಾಡಲಾಗುತ್ತಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ರವಿವಾರ ನಗರದ ಮುಖ್ಯಮಂತ್ರಿ ನಿವಾಸ ಧಳವಗಿರಿ ನಿವಾಸದಲ್ಲಿ ಹಿರಿಯ ಅಧಿಕಾರಿಗಳು, ಗೃಹ ಸಚಿವ, ಉಪ ಮುಖ್ಯಮಂತ್ರಿಯೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ಆಗಲಿರುವ ಜಿಲ್ಲೆಗಳಲ್ಲಿ ಎಲ್ಲವನ್ನೂ ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದರು.

ದಕ್ಷಿಣ ಕನ್ನಡ, ಕಲಬುರಗಿ, ಚಿಕ್ಕಬಳ್ಳಾಪುರ, ಕೊಡಗು, ಧಾರವಾಡ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಬೆಳಗಾವಿ ಜಿಲ್ಲೆಗಳು ಸಂಪೂರ್ಣವಾಗಿ ಬಂದ್‌ಆಗಲಿವೆ. ಈ ಜಿಲ್ಲೆಗಳಲ್ಲಿ ಸರಕಾರಿ ಕಚೇರಿಗಳು ಹಾಗೂ ಅಗತ್ಯ ವಸ್ತುಗಳು ಹೊರತುಪಡಿಸಿ ಎಲ್ಲವೂ ರದ್ಧಾಗಲಿವೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ನಾಳೆ(ಮಾ.23)ಯೂ ಸಾರ್ವಜನಿಕ ಸಾರಿಗೆ ಸೇವೆಯನ್ನು ರದ್ದು ಮಾಡಲು ತೀರ್ಮಾನಿಸಲಾಗಿದೆ. ಎಲ್ಲ ಎಸಿ ಬಸ್ಸುಗಳ ಸಂಚಾರವನ್ನು ಮಾ.31 ರವರೆಗೆ ಸ್ಥಗಿತಗೊಳಿಸಲಾಗಿದೆ. ರವಿವಾರ ರಾತ್ರಿ 9ಕ್ಕೆ ಕರ್ಫ್ಯೂ ಮುಗಿಯಲಿದ್ದು ಮಧ್ಯರಾತ್ರಿವರೆಗೂ 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಲಾಕ್‌ಡೌನ್ ಆಗಲಿರುವ ಎಲ್ಲ ಜಿಲ್ಲೆಗಳಲ್ಲಿ ವೈದ್ಯಕೀಯ, ಔಷದಿ, ದಿನಸಿ, ಕೃಷಿ ಮೊದಲಾದ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಿರ್ಭಂದಿಸಲಾಗುವುದು. ಸಾರಿಗೆ, ರೆಸ್ಟೋರೆಂಟ್, ಮೆಟ್ರೋ ಸಂಚಾರ ಬಂದ್ ಆಗಲಿದ್ದು, ಆಸ್ಪತ್ರೆ, ಔಷಧಾಲಯ, ಹಾಲು, ಹೂ ಹಣ್ಣು, ಪೇಪರ್, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಲಭ್ಯವಾಗಲಿವೆ.

ಈ ಜಿಲ್ಲೆಗಳಲ್ಲಿ ಕಾರ್ಮಿಕರು ಹೆಚ್ಚಿರುವ ಕೈಗಾರಿಕೆಗಳಲ್ಲಿ ದಿನ ಬಿಟ್ಟು ದಿನ ಅರ್ಧ ಸಂಖ್ಯೆಯಲ್ಲಿ ಕಾರ್ಮಿಕರನ್ನು ನಿಯೋಜಿಸುವುದು. ಈ ಜಿಲ್ಲೆಗಳಲ್ಲಿ ಅಂತರ್ ಜಿಲ್ಲೆಯ ಸಾರಿಗೆ ವ್ಯವಸ್ಥೆಯನ್ನು ಮಾ.31 ರವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News