ಪ್ರಧಾನಿ ಕರೆಗೆ ಓಗೊಟ್ಟು ಚಪ್ಪಾಳೆ ತಟ್ಟಿದ ಸಿಎಂ ಬಿಎಸ್‌ವೈ, ರಾಜ್ಯಪಾಲ ಸೇರಿ ಹಲವು ಗಣ್ಯರು

Update: 2020-03-22 13:39 GMT

ಬೆಂಗಳೂರು, ಮಾ.22: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂ ಬೆಂಬಲಿಸಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ರಾಜ್ಯಪಾಲ ವಜುಭಾಯಿ ವಾಲಾ ಸೇರಿದಂತೆ ಪ್ರಮುಖ ಗಣ್ಯರು, ರವಿವಾರ ಸಂಜೆ 5 ಗಂಟೆ ಸುಮಾರಿಗೆ ಚಪ್ಪಾಳೆ ತಟ್ಟುವ ಮೂಲಕ ಕೊವಿಡ್ 19 ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಇಲ್ಲಿನ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಮನೆಯ ಬಾಲ್ಕನಿಯಿಂದ ಬಿ.ಎಸ್.ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥರು ಚಪ್ಪಾಳೆ ತಟ್ಟಿದರು. ಅದೇ ರೀತಿ, ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ, ಸಚಿವರಾದ ಈಶ್ವರಪ್ಪ, ಬಿ.ಸಿ.ಪಾಟೀಲ್, ಬಿಬಿಎಂಪಿ ಮೇಯರ್ ಗೌತಮ್‌ ಕುಮಾರ್ ಸೇರಿದಂತೆ ಹಲವು ಮಂದಿ ಚಪ್ಪಾಳೆ ತಟ್ಟಿ ಶ್ರಮಿಕರಿಗೆ ಗೌರವ ಆರ್ಪಿಸಿದರು.

ಕೃತಜ್ಞತೆ: ಕೊರೋನ ವೈರಸ್ ಹರಡುವಿಕೆಯನ್ನು ತಡೆಯಲು ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಅಗತ್ಯವಿದೆ. ಇದಕ್ಕಾಗಿ ಸ್ವಯಂ ನಿರ್ಬಂಧ ಹೇರಿಕೊಳ್ಳುವ ಮೂಲಕ ಜನತಾ ಕರ್ಫ್ಯೂ ಅನ್ನು ಬೆಂಬಲಿಸಿದ ಎಲ್ಲ ನಾಗರಿಕರಿಗೂ ಕೃತಜ್ಞತೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.

ಜನರ ಚಪ್ಪಾಳೆ: ಸಂಜೆ ಆಗುತ್ತಿದ್ದಂತೆಯೇ, ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆ ಜನರು ಮನೆಯಿಂದ ಹೊರಬಂದು ಚಪ್ಪಾಳೆ ತಟ್ಟುವ, ಶಂಖನಾದ ಮಾಡುವ ಮೂಲಕ ಆರೋಗ್ಯ ಸೈನಿಕರಿಗೆ ಗೌರವ ಸಲ್ಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News