ಬೆಂಗಳೂರು: ಮಾ.31ವರೆಗೆ ಮೆಟ್ರೋ ಸೇವೆ ಸ್ಥಗಿತ

Update: 2020-03-22 14:47 GMT

ಬೆಂಗಳೂರು, ಮಾ.22: ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಮೆಟ್ರೋ ಅನ್ನು ಮಾ.31 ರವರೆಗೂ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಸ್ಥಗಿತಗೊಳಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. 

ಅಗತ್ಯ ಸೇವೆಗಳನ್ನು ಒದಗಿಸುವವರು ಮತ್ತು ತೀರಾ ಅಗತ್ಯವಿರುವವರಿಗೆ ಪ್ರಯಾಣಕ್ಕೆ ಅವಕಾಶ ಕೊಡಲಾಗುವುದು. ರೈಲಿನಲ್ಲಿ ಪ್ರಯಾಣಿಕರ ನಡುವೆ ಸೂಕ್ತ ಅಂತರವನ್ನು ಕಾಪಾಡಿಕೊಳ್ಳಬೇಕಾಗಿರುವುದರಿಂದ ಪ್ರತಿ ರೈಲಿನಲ್ಲಿ 150 ಪ್ರಯಾಣಿಕರಿಗೆ ಮಾತ್ರ ಆಸನಗಳು ಸೀಮಿತವಾಗಿರುತ್ತವೆ.

ಪರ್ಯಾಯ ಆಸನಗಳನ್ನು ಖಾಲಿ ಬಿಡಬೇಕು ಮತ್ತು ಯಾರೇ ಆಗಲಿ ನಿಂತು ಪ್ರಯಾಣಿಸುವಂತಿಲ್ಲ. ಪ್ರತಿ ನಿಲ್ದಾಣದಲ್ಲಿ ಗರಿಷ್ಠ ಎರಡು ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಇರುತ್ತವೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಹೇಳಿದೆ.

ಬಂದ್: ಮೆಟ್ರೊ ನಿಲ್ದಾಣಗಳಲ್ಲಿರುವ ಎಲ್ಲ ವಾಣಿಜ್ಯ ಮಳಿಗೆಗಳು, ಹೋಟೆಲ್‌ಗಳು ಮತ್ತು ವಾಹನ ನಿಲುಗಡೆ ಸ್ಥಳವನ್ನು ಮಾ.31ರವರೆಗೆ ಸಂಪೂರ್ಣವಾಗಿ ಮುಚ್ಚಲಾಗುವುದು ಎಂದು ನಿಗಮ ತಿಳಿಸಿದೆ.

ವೇಳಾಪಟ್ಟಿಯಲ್ಲಿ ಬದಲಾವಣೆ: ಮಾ.23 ರಿಂದ ಮಾ.31ರವರೆಗೆ ನಿಗಮವು ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆ ಮಾಡಿದೆ. ಬೆಳಗ್ಗೆ 6 ರಿಂದ ಬೆಳಿಗ್ಗೆ 8 ಗಂಟೆಯವರೆಗೆ 10 ನಿಮಿಷಗಳ ಅಂತರದಲ್ಲಿ ಅಗತ್ಯ ಸೇವೆಗಳಿಗೆ ಕೆಲಸ ಮಾಡುವ ವ್ಯಕ್ತಿಗಳಿಗೆ ಪ್ರಯಾಣಿಸಲು ಅವಕಾಶವಿರುತ್ತದೆ. ಬೆಳಗ್ಗೆ 8 ರಿಂದ 10 ರವರೆಗೆ ಐದು ನಿಮಿಷಗಳ ಅಂತರದಲ್ಲಿ ಅನಿವಾರ್ಯ ಮತ್ತು ಅಗತ್ಯವಿರುವ ಪ್ರಯಾಣಿಕರಿಗೆ ಅವಕಾಶ ನೀಡಲಾಗುತ್ತದೆ.

ಸಂಜೆ 4ರಿಂದ 5ರವರೆಗೆ 10 ನಿಮಿಷಗಳ ಅಂತರದಲ್ಲಿ, ಸಂಜೆ 5ರಿಂದ 7ರವರೆಗೆ ಐದು ನಿಮಿಷಗಳ ಅಂತರದಲ್ಲಿ, ಸಂಜೆ 7ರಿಂದ ರಾತ್ರಿ 8ರವರೆಗೆ 10 ನಿಮಿಷಗಳ ಅಂತರದಲ್ಲಿ ಮೆಟ್ರೊ ಸೇವೆ ಇರಲಿದೆ. ರಾತ್ರಿ 8ರಿಂದ ಮರುದಿನ ಬೆಳಗ್ಗೆ 6ರವರೆಗೆ ಮೆಟ್ರೊ ರೈಲು ಸಂಚಾರ ಇರುವುದಿಲ್ಲ.

ಯಾರು ಪ್ರಯಾಣಿಸಬಹುದು?: ವೈದ್ಯಕೀಯ, ಸಾರ್ವಜನಿಕ ಆರೋಗ್ಯ, ಪೊಲೀಸ್ ಮತ್ತು ಇತರೆ ಭದ್ರತಾ ಸೇವೆಗಳನ್ನು ಒದಗಿಸುವವರು. ನೀರು, ವಿದ್ಯುತ್, ಸಾರಿಗೆ, ಪುರಸಭೆ, ಸರಕಾರಿ ಸೇವೆಗಳಂತಹ ಸೇವೆಗಳನ್ನು ನಿರ್ವಹಿಸುವ ವ್ಯಕ್ತಿಗಳು ಇಲಾಖೆ ನೀಡಿರುವ ಗುರುತಿನ ಚೀಟಿ ತೋರಿಸಿದರೆ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News