×
Ad

ಬೆಂಗಳೂರು: ನಗರದಲ್ಲಿ ಓಡಾಡಿದ ಕ್ವಾರಂಟೈನ್‌ ಸೀಲ್ ಹಾಕಿದ್ದ ವ್ಯಕ್ತಿ; ಸಾರ್ವಜನಿಕರಲ್ಲಿ ಆತಂಕ

Update: 2020-03-22 21:23 IST

ಬೆಂಗಳೂರು, ಮಾ.22: ದುಬೈನಿಂದ ಹಿಂದಿರುಗಿದ್ದ ಕೊರೋನ ವೈರಸ್ ಸೋಂಕು ಶಂಕಿತ ವ್ಯಕ್ತಿಯೊಬ್ಬ ನಗರದ ಕೆಂಪೇಗೌಡ ಕೇಂದ್ರ ಬಸ್ ನಿಲ್ದಾಣದಲ್ಲಿ ಮನಸೋ ಇಚ್ಛೆ ಸಂಚರಿಸಿ ಪೊಲೀಸರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ ಘಟನೆ ನಡೆದಿದೆ.

ಕೊರೋನಾ ವೈರಸ್ ಶಂಕಿತ ವ್ಯಕ್ತಿಯು ಮಾ.21ರಂದು ದುಬೈನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ. ಅಲ್ಲಿಯೇ ಆತನ ಕೈ ಮೇಲೆ ಕ್ವಾರಂಟೈನ್ ಸೀಲ್ ಹಾಕಿ ಮಾ.31ರ ವರೆಗೆ ಗೃಹ ಬಂಧನದಲ್ಲಿ ಇರುವಂತೆ ಸೂಚಿಸಲಾಗಿತ್ತು.

ಕ್ವಾರಂಟೈನ್ ಸೀಲ್ ಹಾಕಿದ್ದರೂ ಈತ ಬಿಎಂಟಿಸಿ ಬಸ್‌ನಲ್ಲಿ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಬಂದು ಇಳಿದಿದ್ದ. ನಂತರ ಕೆಂಪೇಗೌಡ ಕೇಂದ್ರ ಬಸ್ ನಿಲ್ದಾಣದ ಹತ್ತಿರದ ಲಾಡ್ಜ್‌ವೊಂದರಲ್ಲಿ ತಂಗಿದ್ದ ಎಂದು ಹೇಳಲಾಗಿದೆ.

ಚೆನೈಗೆ ತೆರಳಲು ರೈಲ್ವೆ ವ್ಯವಸ್ಥೆ ರದ್ದಾದ ಹಿನ್ನೆಲೆಯಲ್ಲಿ ಲಾಡ್ಜ್‌ನಿಂದ ಕೆಂಪೇಗೌಡ ಕೇಂದ್ರ ಬಸ್ ನಿಲ್ದಾಣಕ್ಕೆ ಯಾವುದೇ ಮುಂಜಾಗೃತ ಕ್ರಮ ಕೈಗೊಳ್ಳದೇ ಓಡಾಡಿಕೊಂಡಿದ್ದ. ನಂತರ ಈತನನ್ನು ಮಾಧ್ಯಮ ಪ್ರತಿನಿಧಿಗಳು ನಿಲ್ಲಿಸಿ ಮಾತನಾಡಿಸಿದ ಬಳಿಕ ತಾನು ದುಬೈನಿಂದ ಇಲ್ಲಿಗೆ ಬಂದಿದ್ದೇನೆ. ನಾನು ಚೆನ್ನೈಗೆ ಹೋಗಬೇಕಿತ್ತು. ನಾನು ತೆರಳಬೇಕಿದ್ದ ರೈಲು ರದ್ದಾಗಿದೆ. ಆದ್ದರಿಂದ ನಾನು ಇಲ್ಲಿಯೇ ಲಾಡ್ಜ್‌ನ ಕೊಠಡಿಯಲ್ಲಿ ಉಳಿದುಕೊಂಡಿದ್ದೇನೆ. ನನಗೆ ಸದ್ಯ ಊಟವೂ ಸಿಗುತ್ತಿಲ್ಲ. ಇಲ್ಲಿ ಎಲ್ಲಾದರೂ ಊಟ ಸಿಗುತ್ತದೆಯೋ ಎಂದು ನೋಡಲು ಬಂದಿದ್ದೇನೆ ಎಂದು ಆತ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾನೆ.

ಅನಂತರ ಆತನ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಉಪ್ಪಾರಪೇಟೆ ಠಾಣಾ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಆತನ ಕೈ ಮೇಲಿದ್ದ ಕ್ವಾರಂಟೈನ್ ಸೀಲ್ ಗಮನಿಸಿದ ಕೂಡಲೇ ಆತನನ್ನು ವಶಕ್ಕೆ ಪಡೆದು ಆ್ಯಂಬುಲೆನ್ಸ್ ಮೂಲಕ ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಈತನ ಜೊತೆಗೆ ಇನ್ನೂ ಮೂವರು ಇದ್ದರು ಎನ್ನಲಾಗಿದ್ದು, ಸದ್ಯ ಅವರೆಲ್ಲರೂ ನಾಪತ್ತೆಯಾಗಿದ್ದಾರೆ. ಹೀಗಾಗಿ ಅವರಿಗಾಗಿಯೂ ಹುಡುಕಾಟ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News