ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು, ನಿರ್ಗತಿಕರ ಪರದಾಟ: ಯುವಕರಿಂದ ಬಿಸ್ಕೆಟ್, ಕುಡಿಯುವ ನೀರು ವಿತರಣೆ

Update: 2020-03-22 18:22 GMT

ಬೆಂಗಳೂರು, ಮಾ.21: ಕೊರೋನ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ಕರೆ ನೀಡಿದ್ದ ಒಂದು ದಿನದ ಜನತಾ ಕರ್ಫ್ಯೂ ವೇಳೆ ನಗರದ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಇತರೆ ಜಿಲ್ಲೆ ಹಾಗೂ ಹೊರರಾಜ್ಯಗಳಿಗೆ ತೆರಳಬೇಕಾದ ಪ್ರಯಾಣಿಕರು ಹಾಗೂ ರಸ್ತೆಗಳ ಬದಿಯಲ್ಲಿ ವಾಸಿಸುವ ನಿರ್ಗತಿಕರು ಹಸಿವಿನಿಂದ ಪರದಾಡುವಂತಾಯಿತು.

ಕಲಬುರಗಿಯ ಗುರುನಾಥ್‌ಯೆಂಬ ಪ್ರಯಾಣಿಕ ರಕ್ತ ಪರೀಕ್ಷೆಯ ವರದಿ ಪಡೆಯಲು ನಿಮ್ಹಾನ್ಸ್‌ಗೆ ಶನಿವಾರ ಬಂದಿದ್ದರು. ಇಂದು ಅವರು ತಮ್ಮ ಜಿಲ್ಲೆಗೆ ತೆರಳಬೇಕಿಗಿತ್ತು. ಆದರೆ, ಬಸ್ ಸ್ಥಗಿತದ ಹಿನ್ನೆಲೆಯಲ್ಲಿ ಊರಿಗೆ ಹೋಗಲಾರದೆ ಮೆಜೆಸ್ಟಿಕ್‌ನಲ್ಲಿ ಕಾಯುತ್ತಾ ಕುಳಿತಿದ್ದರು. ಆದರ್ಶ ಎಂಬ ತರುಣ, ಎಚ್‌ಎಎಲ್‌ಗೆ ಸಂದರ್ಶನಕ್ಕೆ ಬಂದು ಬಸ್ ನಿಲ್ದಾಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.

ಮಹಿಳೆಯ ಕಣ್ಣೀರು: ತಮಿಳುನಾಡು ಮೂಲಕ ಮಹಿಳೆಯೊಬ್ಬರು, ನಮ್ಮ ಊರಿಗೆ ಹೋಗಲು ಬಸ್ ವ್ಯವಸ್ಥೆಯಿಲ್ಲ. ಹೊಟೇಲ್‌ಗಳಿಲ್ಲದೆ ಊಟವೂ ಇಲ್ಲದೆ ಹಸಿವಾಗುತ್ತಿದೆ. ಇಲ್ಲಿ ಯಾವ ಹೋಟೆಲ್ ತೆಗೆದಿಲ್ಲ. ಯಾರಾದರು ನಮಗೆ ಊಟ ಹಾಗೂ ನೀರಿನ ವ್ಯವಸ್ಥೆ ಮಾಡಬಾರದೆ ಎಂದು ಕಣ್ಣೀರಿಟ್ಟರು. ಕೇರಳದ ಸುರೇಶ್‌ ಕುಮಾರ್ ಎಂಬುವವರು ಮುಂಗಡ ಟಿಕೆಟ್ ಕಾಯ್ದಿರಿಸಿದ್ದರೂ ರೈಲ್ವೆ ಇಲಾಖೆ ಟಿಕೆಟ್‌ನ್ನು ರದ್ದು ಪಡಿಸಿದ ಕಾರಣ ರಾತ್ರಿಯಿಂದಲೇ ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿಯೇ ಕಾಲ ಕಳೆಯುವಂತಾಗಿದೆ. ಹೀಗೆ ತಮಿಳುನಾಡು, ಆಂಧ್ರಪ್ರದೇಶ, ಕೇರಳಕ್ಕೆ ಹೋಗಬೇಕಾದ ಪ್ರಯಾಣಿಕರು ಹಸಿವಿನಿಂದ ಕಾಲ ಕಳೆಯುವಂತಹ ಪ್ರಸಂಗ ಎದುರಾಯಿತು.

ಇನ್ನು ನಗರದಲ್ಲಿ ಮನೆಯಿಲ್ಲದೆ ಬೀದಿ ಬದಿಯಲ್ಲಿ ಸಾವಿರಾರು ನಿರ್ಗತಿಕರು ವಾಸಿಸುತ್ತಿದ್ದಾರೆ. ಇವರಿಗೆ ಪ್ರತಿದಿನ ದೇವಸ್ಥಾನ, ಮಸೀದಿ, ಚರ್ಚ್‌ಗಳು ಹಾಗೂ ಬಸ್‌ನಿಲ್ದಾಣಗಳಲ್ಲಿ ಊಟದ ವ್ಯವಸ್ಥೆ ಸಿಗಲಿದೆ. ಆದರೆ, ಇಂದು ಕರ್ಫ್ಯೂ ಇದ್ದ ಕಾರಣ ಊಟ ಇಲ್ಲದೆ ಪರದಾಡಿದರು.

ಬಿಸ್ಕೆಟ್, ನೀರು ವಿತರಣೆ: ಬಸ್ ನಿಲ್ದಾಣಗಳಲ್ಲಿ ಬಸ್, ರೈಲು ಸಿಗದ ಪರದಾಡುತ್ತಿದ್ದ ಪ್ರಯಾಣಿಕರಿಗೆ ಹಾಗೂ ಬೀದಿ ಬದಿಯ ನಿಗರ್ತಿಕರಿಗೆ ನಗರದ ಕೆಲವು ಸ್ವಯಂ ಸೇವಕರು ಬಿಸ್ಕೆಟ್ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿದರು.

ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಹೊರ ಜಿಲ್ಲೆ ಹಾಗೂ ರಾಜ್ಯದ ಪ್ರಯಾಣಿಕರು ಊಟ ಇಲ್ಲದೆ ಪರದಾಡುತ್ತಿದ್ದಾರೆ ಎಂಬ ವಿಷಯ ತಿಳಿಯಿತು. ಹೀಗಾಗಿ ಸ್ನೇಹಿತರ ಜೊತೆಗೂಡಿ ಬಿಸ್ಕೆಟ್ ಹಾಗೂ ಕುಡಿಯುವ ನೀರು ನೀಡಿದೆವು.

-ಮುಹಮ್ಮದ್ ನಿಯಾಝ್, ವಕೀಲ

ಸ್ನೇಹಿತರ ಜೊತೆಗೂಡಿ ರಸ್ತೆಯಲ್ಲಿ ಹೋಗುವಾಗ ನಗರದ ವಿವಿಧೆಡೆ ನಿಗರ್ತಿಕರು ರಸ್ತೆಯ ಪಕ್ಕದಲ್ಲಿ ಹಸಿವಿನಿಂದ ಬಳಲುತ್ತಿದ್ದ ದೃಶ್ಯಗಳನ್ನು ನೋಡಿದೆ. ಹೀಗಾಗಿ ಸ್ನೇಹಿತರೊಂದಿಗೆ ಬಿಸ್ಕೆಟ್, ಬ್ರೆಸ್, ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆವು.

-ಅರುಣ್‌ಕುಮಾರ್, ಶಂಕರ್ ಕ್ಯಾನ್ಸರ್ ಆಸ್ಪತ್ರೆ ಉದ್ಯೋಗಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News