ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆ: ಡಾ.ಕೆ.ಸುಧಾಕರ್

Update: 2020-03-23 16:39 GMT

ಬೆಂಗಳೂರು, ಮಾ.23: ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 33ಕ್ಕೆ ಏರಿಕೆಯಾಗಿದ್ದು, ಈ ಪೈಕಿ ಐದು ಜನರು ಗುಣಮುಖರಾಗಿದ್ದಾರೆ. ಅವರಿಗೆ ಮತ್ತೊಂದು ಸುತ್ತಿನ ತಪಾಸಣೆಗೊಳಪಡಿಸಲಾಗಿದ್ದು, ಅದರಲ್ಲಿಯೂ ಗುಣಮುಖರಾದರೆ ಮನೆಗಳಿಗೆ ಕಳುಹಿಸಿಕೊಡುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸೋಮವಾರ ವಿಧಾನಸಭೆಯಲ್ಲಿ ಕೊರೋನ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ ಅವರು, ಮಾರ್ಚ್ ತಿಂಗಳಲ್ಲಿ ಬೆಂಗಳೂರು ಹಾಗೂ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 1,22,532 ಮಂದಿ ಪ್ರಯಾಣಿಕರು ಬಂದಿಳಿದಿದ್ದಾರೆ. ಅವರಿಗೆಲ್ಲ ಸ್ಕ್ರೀನಿಂಗ್ ಮಾಡಲಾಗಿದೆ ಎಂದರು. ನಮ್ಮ ರಾಜ್ಯವು ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಹಾಗೂ ಗೋವಾ ರಾಜ್ಯಗಳಿಂದ ಸುತ್ತುವರಿಯಲ್ಪಟ್ಟಿದೆ. ಆದುದರಿಂದ, ಗಡಿ ಭಾಗಗಳನ್ನು ಬಂದ್ ಮಾಡಲು ತೀರ್ಮಾನಿಸಲಾಯಿತು. ಮಹಾರಾಷ್ಟ್ರದಲ್ಲಿ 67 ಹಾಗೂ ಕೇರಳದಲ್ಲಿ 67 ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ ಎಂದು ಅವರು ಹೇಳಿದರು.

ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿರುವ ಅಮೆರಿಕ, ಜರ್ಮನಿ, ಫ್ರಾನ್ಸ್ ನಂತಹ ದೇಶಗಳೆ ಈ ವೈರಾಣುವಿನಿಂದ ತಲ್ಲಣಗೊಂಡಿವೆ. ಇಡೀ ದೇಶದಲ್ಲಿ ಈ ಸೋಂಕು ಪತ್ತೆ ಹಚ್ಚಲು 51 ಪ್ರಯೋಗಾಲಯಗಳಿವೆ. ಈ ಪೈಕಿ 7 ಪ್ರಯೋಗಾಲಯಗಳು ನಮ್ಮ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ. ಸರಕಾರ ಎಲ್ಲಿಯೂ ಮೈಮರೆತು ಕೂತಿಲ್ಲ, ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದರು.

ಟ್ರೇಸ್(ಪತ್ತೆಹಚ್ಚಿ), ಟೆಸ್ಟ್(ಪರೀಕ್ಷಿಸಿ), ಟ್ರೀಟ್‌ಮೆಂಟ್(ಚಿಕಿತ್ಸೆ) ಸೂತ್ರದಡಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ಈಗಾಗಲೆ ನಮ್ಮ ರಾಜ್ಯದಲ್ಲಿ 1200 ಮಂದಿಯ ಗಂಟಲಿನ ದ್ರವದ ಪರೀಕ್ಷೆ ಮಾಡಲಾಗಿದೆ. ಪ್ರತಿಯೊಂದು ಪ್ರಯೋಗಾಲಯದಲ್ಲಿ ಒಂದು ದಿನಕ್ಕೆ 80-100 ಪರೀಕ್ಷೆ ಮಾಡಬಹುದು. ಅದಕ್ಕೆ ಬೇಕಾದ ಸಾಧನ ಜರ್ಮನಿಯಿಂದ ಬರಬೇಕು. ಆದುದರಿಂದ, ಕಡಿಮೆ ಪ್ರಮಾಣದಲ್ಲಿ ಪರೀಕ್ಷೆ ನಡೆಯುತ್ತಿದೆ ಎಂದು ಸುಧಾಕರ್ ಹೇಳಿದರು.

ಜನರಲ್ಲಿ ಈ ಸೋಂಕಿನ ಕುರಿತು ಜಾಗೃತಿ ಮೂಡಿಸಲು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ ಸೇರಿದಂತೆ ಇನ್ನಿತರರನ್ನು ಒಳಗೊಂಡ ಜಿಲ್ಲಾ ಟಾಸ್ಕ್‌ಫೋರ್ಸ್‌ಗಳನ್ನು ರಚನೆ ಮಾಡಿದ್ದೇವೆ ಎಂದು ಅವರು ಹೇಳಿದರು.

ಸದ್ಯದ ಪರಿಸ್ಥಿತಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಈ ಸೋಂಕಿನ ವಿರುದ್ಧ ಹೋರಾಡುವ ಏಕೈಕ ವಿಧಾನವಾಗಿದೆ. ಪರೀಕ್ಷೆಗೆ ಅಗತ್ಯವಿರುವ ಸಾಧನ ನಮಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಲಭ್ಯವಾದರೆ ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಸುಧಾಕರ್ ತಿಳಿಸಿದರು.

10 ಮಂದಿ ಹಿರಿಯ ಐಎಎಸ್ ಅಧಿಕಾರಿಗಳನ್ನು ಈ ‘ಆರೋಗ್ಯ ವಲಯದ ತುರ್ತು ಪರಿಸ್ಥಿತಿ’ಯನ್ನು ಯಾವ ರೀತಿಯಲ್ಲಿ ಎದುರಿಸಬೇಕು ಎಂಬುದರ ಕುರಿತು ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರ ಆರೋಗ್ಯ ರಕ್ಷಣೆ ನಮ್ಮ ಆದ್ಯ ಕರ್ತವ್ಯ ಎಂದು ಅವರು ಹೇಳಿದರು.

ವೆಂಟಿಲೇಟರ್, ಮಾಸ್ಕ್, ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು 33 ಕೋಟಿ ರೂ.ಬಿಡುಗಡೆ ಮಾಡಲಾಗಿದ್ದು, ಇನ್ನೆರಡು ದಿನಗಳಲ್ಲಿ ಎಲ್ಲವೂ ಲಭ್ಯವಾಗಲಿದೆ.ಕ್ವಾರಂಟೈನ್‌ಗೆ ಒಳಪಡುವವರು ಕಡ್ಡಾಯವಾಗಿ ಮನೆಯಲ್ಲಿ ಪ್ರತ್ಯೇಕವಾಗಿರಬೇಕು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯ ನೆರವನ್ನು ಪಡೆಯಲಾಗಿದೆ ಎಂದು ಸುಧಾಕರ್ ತಿಳಿಸಿದರು.

ಬಿಎಂಟಿಸಿ ಬಸ್ಸುಗಳ ಸಂಚಾರವನ್ನು ಮಾ.24ರಿಂದ ರದ್ದುಗೊಳಿಸಲಾಗಿದೆ. ದಿನಗೂಲಿ ನೌಕರರಿಗೆ ಎರಡು ತಿಂಗಳ ಪಡಿತರವನ್ನು ವಿತರಿಸಲಾಗಿದೆ. ದಿನನಿತ್ಯದ ಯಾವುದೇ ಅಗತ್ಯ ಸಾಮಗ್ರಿಗಳ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News