ವೈದ್ಯರಿಗೆ ಅಗತ್ಯವಿರುವ ಸೌಲಭ್ಯವನ್ನು ಆದ್ಯತೆ ಮೇರೆಗೆ ಕಲ್ಪಿಸಿ: ಸಿದ್ದರಾಮಯ್ಯ

Update: 2020-03-23 17:07 GMT

ಬೆಂಗಳೂರು, ಮಾ.23: ವೈದ್ಯರಿಗೆ ಅಗತ್ಯವಿರುವ ಗೌನ್, ಮಾಸ್ಕ್, ಸ್ಯಾನಿಟೈಸರ್ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯವನ್ನು ರಾಜ್ಯ ಸರಕಾರ ಆದ್ಯತೆ ಮೇರೆಗೆ ಕಲ್ಪಿಸುವ ವ್ಯವಸ್ಥೆ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಸೋಮವಾರ ವಿಧಾನಸಭೆಯಲ್ಲಿ ಕೊರೋನ ಸೋಂಕಿನ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನೀಡಿದ ಉತ್ತರದ ಕುರಿತು ಸ್ಪಷ್ಟೀಕರಣ ಕೇಳಿ ಅವರು ಮಾತನಾಡಿದರು.

ಉತ್ತರ ಪ್ರದೇಶದಲ್ಲಿ 16.5 ಲಕ್ಷ ದಿನಗೂಲಿ ನೌಕರರು ಹಾಗೂ 20.37 ಲಕ್ಷ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಒಂದು ಸಾವಿರ ರೂ.ಗಳನ್ನು ಒದಗಿಸುವ ಪ್ಯಾಕೇಜ್ ಅನ್ನು ಘೋಷಿಸಲಾಗಿದೆ. ಅದೇ ರೀತಿ, ಕೇರಳ ಸರಕಾರವು 20 ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಿಸಿದೆ ಎಂದು ಅವರು ಹೇಳಿದರು. ಕೇರಳ ಸರಕಾರ ಸಾಮಾಜಿಕ ಭದ್ರತಾ ಯೋಜನೆಯಡಿ ನೀಡುವ ಪಿಂಚಣಿಯ ಎರಡು ಕಂತುಗಳನ್ನು ಮುಂಗಡವಾಗಿ ನೀಡಿದೆ. ನಮ್ಮ ರಾಜ್ಯದಲ್ಲಿಯೂ ದಿನಗೂಲಿ ನೌಕರರು ಹಾಗೂ ಬಡವರಿಗೆ ಅಗತ್ಯವಾದ ನೆರವು ನೀಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಮೈಸೂರಿನಲ್ಲಿ ಓರ್ವ ಸೋಂಕಿತ ವ್ಯಕ್ತಿಯನ್ನು ಐಸೋಲೇಷನ್ ವಾರ್ಡ್‌ನಲ್ಲಿ ಇರಿಸದೆ, ಖಾಸಗಿಯವರು ಬಿಟ್ಟು ಕಳುಹಿಸಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬೇಜವಾಬ್ದಾರಿಯ ನಡವಳಿಕೆ ಸರಿಯಲ್ಲ. ಅತ್ಯಂತ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನಾವು ಎದುರಿಸಬೇಕಿದೆ ಎಂದು ಅವರು ಹೇಳಿದರು.

132 ಕೋಟಿ ಜನಸಂಖ್ಯೆಯನ್ನು ಹೊಂದಿರುವ ನಮ್ಮ ದೇಶ, ಯಾವುದೇ ಕಾರಣಕ್ಕೂ ಇಟಲಿ, ಚೀನಾ, ಸ್ಪೇನ್‌ನಂತೆ ಆಗಬಾರದು. ಈ ವೈರಾಣು ವಿರುದ್ಧದ ಹೋರಾಟಕ್ಕೆ ಸರಕಾರಕ್ಕೆ ಅಗತ್ಯ ಸಹಕಾರವನ್ನು ನಾವು ನೀಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಬಿಜೆಪಿ ಸದಸ್ಯ ಅರಗ ಜ್ಞಾನೇಂದ್ರ ಮಾತನಾಡಿ, ನಿನ್ನೆ ಸಂಜೆಯವರೆಗೆ ನನ್ನ ಮತ ಕ್ಷೇತ್ರದ ತಾಲೂಕು ಆಸ್ಪತ್ರೆಗೆ ಮಾಸ್ಕ್, ಗೌನ್, ಸ್ಯಾನಿಟೈಸರ್ ಸೇರಿದಂತೆ ಯಾವ ಸೌಲಭ್ಯವು ತಲುಪಿಲ್ಲ. ಆರೋಗ್ಯ ಕಾರ್ಯಕರ್ತರು ಸೋಂಕಿತರಿಗೆ ಚಿಕಿತ್ಸೆ ನೀಡಲು ಭಯಪಡುವ ವಾತಾವರಣವಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಸದಸ್ಯ ದಿನೇಶ್ ಗುಂಡೂರಾವ್ ಮಾಡಿದ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಾಮಾಜಿಕ ಭದ್ರತಾ ಯೋಜನೆಯಡಿ ಬರುವ ವಿಧವಾ ವೇತನ, ಅಂಗವಿಕಲರ ವೇತನ ಸೇರಿದಂತೆ ಬಾಕಿ ಇರುವ ಎಲ್ಲವನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡುವ ಸಂಬಂಧ ಈ ಕೂಡಲೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News