ಮತದಾರರ ಪಟ್ಟಿಗಳ ಪರಿಷ್ಕರಣೆಯಲ್ಲಿ ಲೋಪ: ಮೂವರು ಅಧಿಕಾರಿಗಳ ಅಮಾನತು

Update: 2021-03-12 12:30 GMT

ಬೆಂಗಳೂರು, ಮಾ.23: ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗಳ ಪರಿಷ್ಕರಣೆ ಕಾರ್ಯದಲ್ಲಿ ಲೋಪವೆಸಗಿದ ಕಾರಣ ಮೂವರು ಅಧಿಕಾರಿಗಳ ವಿರುದ್ದ ಪ್ರಜಾಪ್ರತಿನಿಧಿ ಕಾಯ್ದೆ 1950ರ ಕಲಂ 32(1)ರನ್ವಯ ಅಮಾನತುಗೊಳಿಸಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ವಿ.ಪಿ.ಇಕ್ಕೇರಿ ಆದೇಶಿಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಗ್ರೇಡ್-2 ತಹಶೀಲ್ದಾರ್ ಹಾಗೂ ನಿಯೋಜಿತ ಅಧಿಕಾರಿಯಾದ ಮಹೇಂದ್ರ, ಆನೇಕಲ್ ತಹಶೀಲ್ದಾರ ಆರ್.ದಿನೇಶ್, ಬಿಬಿಎಂಪಿ ಆರ್.ಆರ್.ನಗರದ ಕಂದಾಯ ಅಧಿಕಾರಿ ಭೈರೇಗೌಡ ಸೇವೆಯಿಂದ ಅಮಾನತ್ತುಗೊಂಡ ಅಧಿಕಾರಿಗಳು.

ಬೆಂಗಳೂರು ಶಿಕ್ಷಕರ ಕ್ಷೇತ್ರ ವ್ಯಾಪ್ತಿಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆ ಇಲ್ಲಿ ಸಾಮಾನ್ಯ ನಿವಾಸಿಯಾಗಿರುವ ಶಿಕ್ಷಕರು ತಮಗೆ ಭಾರತ ಚುನಾವಣಾ ಆಯೋಗದ ಮಾರ್ಗಸೂಚಿಗಳಂತೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಅರ್ಹತೆ ಇಲ್ಲದಿದ್ದರೂ ಮತದಾರರ ಪಟ್ಟಿಯಲ್ಲಿ ಸೇರಿಸಲು ನಮೂನೆ-19 ಅನ್ನು ದುರುದ್ದೇಶಪೂರ್ವಕವಾಗಿ ನೀಡಿದ್ದಲ್ಲಿ, ಅಂತಹವರ ವಿರುದ್ದವೂ ಪ್ರಜಾಪ್ರತಿನಿಧಿ ಕಾಯ್ದೆ, 1950ರ ಕಲಂ 31 ರನ್ವಯ ಒಂದು ವರ್ಷದ ಅವಧಿಯವರೆಗೆ ಕಾರಾಗೃಹ ವಾಸದ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ತಿಳಿಸಿರುವ ಅವರು ಬೆಂಗಳೂರು ಶಿಕ್ಷಕರ ಕ್ಷೇತ್ರದ ವ್ಯಾಪ್ತಿಯ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ದೂರು ಮತ್ತು ಸಲಹೆ/ಸೂಚನೆಗಳಿಗೆ ಇ-ಮೇಲ್ ವಿಳಾಸ: blrteacherseln2020@gmail.com ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News