ಆರ್ಥಿಕ ಹಿಂಜರಿತ 2009ಕ್ಕಿಂತಲೂ ಭೀಕರ : ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ

Update: 2020-03-24 04:51 GMT

ವಾಷಿಂಗ್ಟನ್: ಇಡೀ ವಿಶ್ವವನ್ನು ಬೆಚ್ಚಿ ಬೀಳಿಸಿರುವ ಕೊರೋನ ಸಾಂಕ್ರಾಮಿಕ ವಿಶ್ವ ಆರ್ಥಿಕತೆಗೆ ತೀವ್ರ ಹಾನಿ ಮಾಡುತ್ತಿದ್ದು, ವಿಶ್ವದಲ್ಲಿ 2009ರಲ್ಲಿ ಕಂಡುಬಂದದ್ದಕ್ಕಿಂತಲೂ ಭೀಕರ ಆರ್ಥಿಕ ಹಿಂಜರಿತ ಸಂಭವಿಸಲಿದೆ. ಇದಕ್ಕೆ ಇಡೀ ವಿಶ್ವ ಅದ್ಭುತವಾಗಿ ಸ್ಪಂದಿಸಬೇಕಾದ ಅಗತ್ಯವಿದೆ ಎಂದು ಐಎಂಎಫ್ ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ.

ಮುಂದುವರಿದ ದೇಶಗಳು ಕಡಿಮೆ ಆದಾಯದ ದೇಶಗಳಿಗೆ ಹೆಚ್ಚಿನ ಬೆಂಬಲ ನೀಡುವ ಅಗತ್ಯವಿದೆ. ಕಡಿಮೆ ಆದಾಯದ ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಬಂಡವಾಳದ ಹೊರಹರಿವು ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ಟ್ರಿಲಿಯನ್ ಸಾಲ ಸಾಮರ್ಥ್ಯಕ್ಕೆ ಐಎಂಎಫ್ ಸಜ್ಜಾಗಿದೆ ಎಂದು ವಿವರಿಸಿದ್ದಾರೆ.

ವಿಶ್ವಾದ್ಯಂತ ಸಾಮೂಹಿಕ ದಿಗ್ಬಂಧನ ಕಂಡುಬರುತ್ತಿದ್ದು, 2020ರ ಪ್ರಗತಿ ಭವಿಷ್ಯ ಋಣಾತ್ಮಕವಾಗುವ ಎಲ್ಲ ಸಾಧ್ಯತೆಯೂ ಇದೆ. ಇದು ಜಾಗತಿಕ ಹಣಕಾಸು ಸಂಕಷ್ಟದ ಪರಿಸ್ಥಿತಿಗಿಂತಲೂ ಭೀಕರ ಎಂದು ಅವರು ಜಿ-20 ದೇಶಗಳ ಹಣಕಾಸು ಸಚಿವರಿಗೆ ಎಚ್ಚರಿಕೆ ನೀಡಿದ್ದಾರೆ.

2008ರಲ್ಲಿ ಕಂಡುಬಂದ ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದಾಗಿ 2009ರಲ್ಲಿ ಜಾಗತಿಕ ಆರ್ಥಿಕತೆ ಶೇಕಡ 0.6ರಷ್ಟು ಕುಸಿತ ಕಂಡಿತ್ತು. ಆದರೆ ಉದಯೋನ್ಮುಖ ಮಾರುಕಟ್ಟೆಗಳಾದ ಚೀನಾ ಹಾಗೂ ಭಾರತದಲ್ಲಿ ಈ ಅವಧಿಯಲ್ಲಿ ಅದ್ಭುತ ಪ್ರಗತಿ ದಾಖಲಾಗಿತ್ತು. ಆದರೆ ಕೊರೋನ ವೈರಸ್ ಸಾಂಕ್ರಾಮಿಕ ವಿಶ್ವಾದ್ಯಂತ ಆರ್ಥಿಕವಾಗಿ ಹಾಗೂ ಮನುಕುಲದ ಜೀವಹಾನಿಗೆ ಕಾರಣವಾಗಲಿದ್ದು, ವಿಶ್ವ ಆರ್ಥಿಕತೆ ಶೇಕಡ 1.5ರಷ್ಟು ಸಂಕುಚಿತಗೊಳ್ಳುವ ನಿರೀಕ್ಷೆ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಮನುಕುಲಕ್ಕೆ ಕೊರೋನ ಸಾಂಕ್ರಾಮಿಕ ಮಾಡಿರುವ ಹಾನಿ ಅಪಾಯ. ಜನರ ರಕ್ಷಣೆಗಾಗಿ ಮತ್ತು ಆರ್ಥಿಕ ಹಾನಿಯನ್ನು ಕನಿಷ್ಠಗೊಳಿಸುವ ಸಲುವಾಗಿ ಎಲ್ಲ ದೇಶಗಳು ಜತೆಯಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಉದಯೋನ್ಮುಖ ಮಾರುಕಟ್ಟೆಗಳು ಮತ್ತು ಕಡಿಮೆ ಆದಾಯದ ದೇಶಗಳು ದೊಡ್ಡ ಸವಾಲು ಎದುರಿಸುತ್ತಿದ್ದು, ಇವುಗಳಿಗೆ ಹೆಚ್ಚಿನ ಸಾಲದ ಬೆಂಬಲ ಹಾಗೂ ಸಾಲ ಮನ್ನಾದಂಥ ನೆರವಿನ ಅಗತ್ಯವಿದೆ. ಹೂಡಿಕೆದಾರರು ಈಗಾಗಲೇ ಉದಯೋನ್ಮುಖ ಮಾರುಕಟ್ಟೆಗಳಿಂದ 83 ಶತಕೋಟಿ ಡಾಲರ್ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ. ಬಂಡವಾಳ ಹೊರಹರಿವು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದಾಖಲಾಗಿರುವುದು ಇದೇ ಮೊದಲು. ಈಗಾಗಲೇ 80 ದೇಶಗಳು ತುರ್ತು ನೆರವಿಗೆ ಮನವಿ ಸಲ್ಲಿಸಿದೆ ಎಂದು ಜಾರ್ಜಿವಾ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News