ವಾಯು ವಿಹಾರಕ್ಕೆ ತೆರಳಿದ ವೈದ್ಯನ ವಿರುದ್ಧ ಎಫ್‍ಐಆರ್: ಕಾರಣ ಏನು ಗೊತ್ತೇ ?

Update: 2020-03-24 16:33 GMT

ಬೆಂಗಳೂರು, ಮಾ.24: ವಿಮಾನ ನಿಲ್ದಾಣದಲ್ಲಿ ಕೈಗೆ ಹಾಕಿದ್ದ ಮುದ್ರೆ ಇದ್ದರೂ, ವಾಯು ವಿಹಾರಕ್ಕೆ ತೆರಳಿದ್ದ ವೈದ್ಯನ ವಿರುದ್ಧ ಇಲ್ಲಿನ ಬಸವೇಶ್ವರ ನಗರ ಠಾಣಾ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.

ಬಸವೇಶ್ವರನಗರದ 70 ವರ್ಷದ ವೈದ್ಯ, ಲಂಡನ್‍ನಿಂದ ಮಾ.19ರಂದು ನಗರಕ್ಕೆ ಬಂದಿದ್ದರು. ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಿದ್ದರೂ ಸಹ ವೈದ್ಯ, ಬೆಳಗ್ಗೆ 6.30ರ ಸುಮಾರಿಗೆ ಬಸವೇಶ್ವರ ನಗರದ ಸಮೀಪದ ಕುವೆಂಪು ಕ್ರೀಡಾಂಗಣದಲ್ಲಿ ವಾಯು ವಿಹಾರಕ್ಕೆ ತೆರಳಿದ್ದರು ಎನ್ನಲಾಗಿದೆ.

ಆಗ ಸಾರ್ವಜನಿಕರು, ವೈದ್ಯರ ಕೈ ಮೇಲಿನ ಸೀಲ್ ಗಮನಿಸಿ ಪೊಲೀಸರಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು, ಸಾರ್ವಜನಿಕವಾಗಿ ಓಡಾಡದೆ ಆರೋಗ್ಯ ಇಲಾಖೆ ಸೂಚನೆಯಂತೆ ಮನೆಯಲ್ಲೇ ಕ್ವಾರಂಟೈನ್‍ನಲ್ಲಿರುವ ವೈದ್ಯರಿಗೆ ತಾಕೀತು ಮಾಡಿ ಅಲ್ಲಿಂದ ಕಳುಹಿಸಿದ್ದಾರೆ.

ಕ್ವಾರಂಟೈನ್ ಉಲ್ಲಂಘಿಸಿದ ವೈದ್ಯರ ವಿರುದ್ಧ ಬಸವೇಶ್ವರ ನಗರ ಠಾಣೆಯಲ್ಲಿ ಐಪಿಸಿ 269 ಹಾಗೂ 271 ರಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುವತಿ: ವಿದೇಶದಿಂದ ಬಂದಿದ್ದ ಯುವತಿಯೊಬ್ಬಳು ವಿಮಾನ ನಿಲ್ದಾಣದಲ್ಲಿ ಕೈಗೆ ಹಾಕಿದ್ದ ಮುದ್ರೆಯನ್ನೇ ಭಾಗಶಃ ಅಳಿಸಿಕೊಂಡು ಓಡಾಡಿದ್ದು, ಆಕೆಯನ್ನು ಪತ್ತೆ ಹಚ್ಚಿದ ಪೊಲೀಸರು ವಶಕ್ಕೆ ಪಡೆದು ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಸುಬ್ರಹ್ಮಣ್ಯನಗರದಲ್ಲಿ ವಾಸವಿರುವ ಯುವತಿ, ಹೋಮ್ ಕ್ವಾರಂಟೈನ್‍ನಲ್ಲಿ ಇರಬೇಕಾಗಿತ್ತು. ಆದರೆ, ಎಲ್ಲೆಂದರಲ್ಲಿ ಓಡಾಡುತ್ತಿದ್ದಳು. ಇದನ್ನು ಕಂಡ ಸ್ಥಳೀಯರು ಮಾಹಿತಿ ನೀಡಿದ್ದರು. ಆಕೆ ಮನೆಗೆ ಹೋಗಿ ಎಚ್ಚರಿಕೆ ನೀಡಿ ವಶಕ್ಕೆ ಪಡೆದೆವು ಎಂದು ಸುಬ್ರಹ್ಮಣ್ಯ ನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News