'ಫ್ರೀ ಕಾಶ್ಮೀರ' ಭಿತ್ತಿಪತ್ರ ಪ್ರದರ್ಶನ: ಯುವತಿ ಆರ್ದ್ರಾಗೆ ಜಾಮೀನು

Update: 2020-03-24 17:30 GMT

ಬೆಂಗಳೂರು, ಮಾ.24: 'ಫ್ರೀ ಕಾಶ್ಮೀರ' ಎಂಬ ಫಲಕ ಹಿಡಿದ ಆರೋಪದಲ್ಲಿ ಜೈಲು ಸೇರಿದ್ದ ಯುವತಿ ಆರ್ದ್ರಾಗೆ ನಗರದ 56ನೇ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ಷರತ್ತುಬದ್ದ ಜಾಮೀನು ನೀಡಿದೆ.

ಜಾಮೀನು ಕೋರಿ ಆರ್ದ್ರಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಕೆ.ನಾರಾಯಣ ಪ್ರಸಾದ್ ಜಾಮೀನು ನೀಡಿದ್ದಾರೆ ಎಂದು ವರದಿಯಾಗಿದೆ.

ಆರ್ದ್ರಾ ಪರ ವಾದ ಮಂಡಿಸಿದ ವಕೀಲ ಬಿ.ಎನ್.ಜಗದೀಶ್, ಅರ್ಜಿದಾರರ ವಿರುದ್ಧ ದಾಖಲಾಗಿರುವುದು ಮೂರು ವರ್ಷ ಶಿಕ್ಷೆಯಾಗುವಂತಹ ಪ್ರಕರಣವಾಗಿದ್ದು, ಗಂಭೀರ ಆರೋಪವಲ್ಲ. ಅಲ್ಲದೆ, ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ನೀಡಬಹುದಾದ ಪ್ರಕರಣವಾಗಿದೆ ಎಂದರು. ಪ್ರಾಸಿಕ್ಯೂಷನ್ ಪರ ವಾದ ಮಂಡಿಸಿದ ವಕೀಲರು, ಪ್ರಕರಣ ಅತ್ಯಂತ ಗಂಭೀರವಾಗಿದೆ. ಅಲ್ಲದೆ, ಪ್ರಕರಣ ಸಂಬಂಧ ವಿಚಾರಣೆ ಇನ್ನೂ ಮುಂದುವರೆದಿದ್ದು, ಜಾಮೀನು ನೀಡಬಾರದು ಎಂದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಜಾಮೀನು ನೀಡಿದರು.

50 ಸಾವಿರ ರೂ.ಗಳ ವೈಯಕ್ತಿಕ ಬಾಂಡ್, ಇಬ್ಬರು ಶ್ಯೂರಿಟಿ, ಆರೋಪಿ ಇನ್ನು ಮುಂದೆ ಇದೇ ರೀತಿಯ ಘಟನೆಗಳನ್ನು ಪುನರಾವರ್ತಿಸಬಾರದು, ರಾಷ್ಟ್ರೀಯ ಹಿತಾಸಕ್ತಿ ಹಾಗೂ ಐಕ್ಯತೆಗೆ ಧಕ್ಕೆಯಾಗುವಂತಹ ಮತ್ತು ಯಾವುದೇ ಸಮುದಾಯದ ವಿರುದ್ಧ ಮಾಧ್ಯಮಗಳ ಮುಂದೆ ಹೇಳಿಕೆ ನೀಡಬಾರದು. ತನಿಖೆಗೆ ಸಹಕರಿಸಬೇಕು. ಸಾಕ್ಷಗಳ ನಾಶಕ್ಕೆ ಮುಂದಾಗಬಾರದು. ತಿಂಗಳ ಕೊನೆ ಶನಿವಾರ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು. ನ್ಯಾಯಾಲಯದ ಅನುಮತಿ ಇಲ್ಲದೆ ನಗರವನ್ನು ಬಿಟ್ಟು ಹೋಗಬಾರದು ಎಂದು ಷರತ್ತು ವಿಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News