ಕೊರೋನಗಾಗಿ ಮೀಸಲಿಟ್ಟ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ !

Update: 2020-03-24 18:10 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.24: ಕೊರೋನ ವೈರಸ್ ಸೋಂಕಿತರು ಹಾಗೂ ಶಂಕಿತರಿಗೆ ಚಿಕಿತ್ಸೆಗಾಗಿ ರಾಜ್ಯ ಸರಕಾರ ಮೀಸಲಿಟ್ಟಿರುವ ನಗರದ ವಿಕ್ಟೋರಿಯಾ ಆಸ್ಪತ್ರೆ ಇನ್ನೆರಡು ದಿನಗಳಲ್ಲಿ ಸಂಪೂರ್ಣವಾಗಿ ಕೊರೋನ ವೈರಸ್ ವಿರುದ್ಧ ಹೋರಾಡಲು ಹಣಿಗೊಳ್ಳಲಿದೆ. ಆದರೆ, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಕಾಡಲಿದೆ.

ಕೊರೋನ ವೈರಸ್ ಸೋಂಕಿತರ ಚಿಕಿತ್ಸೆಗಾಗಿ ರಾಜ್ಯ ಸರಕಾರ ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 1,700 ಬೆಡ್ ವ್ಯವಸ್ಥೆ ಮಾಡುವುದರ ಜತೆಗೆ ವೈದ್ಯಕೀಯ ಚಿಕಿತ್ಸೆಗಾಗಿ ಎಲ್ಲ ವ್ಯವಸ್ಥೆಗಳನ್ನೂ ಮಾಡಲಾಗುತ್ತಿದೆ. ಆದರೆ, ಕೊರೋನ ವೈರಸ್ ಸೋಂಕಿನ ವಿರುದ್ಧ ಹೋರಾಡಲು ನಮ್ಮ ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಎದುರಾಗಲಿದೆ ಎಂದು ಇಲ್ಲಿನ ವೈದ್ಯರು ಹೇಳುತ್ತಿದ್ದಾರೆ.

ಇದುವರೆಗೂ ಯಾವುದೇ ಕೊರೋನ ವೈರಸ್ ಸೋಂಕಿತರು ಹಾಗೂ ಶಂಕಿತರು ಇಲ್ಲಿ ಚಿಕಿತ್ಸೆ ಪಡೆಯಲು ಬಂದಿಲ್ಲ. ಆದರೆ, ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಇನ್ನೆರಡು ದಿನಗಳಲ್ಲಿ ಆಸ್ಪತ್ರೆಗೆ ಬಂದು ದಾಖಲಾಗಲಿದ್ದಾರೆ. ಅಲ್ಲದೇ ದಿನದಿಂದ ದಿನಕ್ಕೆ ಕೊರೋನ ವೈರಸ್ ಪೀಡಿತರು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅವರಿಗೆಲ್ಲ ಚಿಕಿತ್ಸೆ ನೀಡಲು ವೈದ್ಯರು ಹಾಗೂ ಸಿಬ್ಬಂದಿ ವರ್ಗದ ಅಗತ್ಯವಿದೆ. ಆದರೆ, ಸದ್ಯ ಇರುವ ಸಿಬ್ಬಂದಿ ವರ್ಗ ಕೊರೋನ ವೈರಸ್ ವಿರುದ್ಧ ಹೋರಾಡಲು ಸಾಕಾಗುವುದಿಲ್ಲ ಎನ್ನಲಾಗುತ್ತಿದೆ.

ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕ್ಷಯ ರೋಗಿಗಳು, ಅಪಘಾತಕ್ಕೊಳಗಾದ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದು, ಸಿಬ್ಬಂದಿವರ್ಗಕ್ಕೆ ಕೆಲಸದ ಒತ್ತಡ ಹೆಚ್ಚಾಗಿದೆ. ಅಕಸ್ಮಾತ್ ಹೆಚ್ಚಿನ ಸಂಖ್ಯೆಯಲ್ಲಿ ಕೊರೋನ ವೈರಸ್ ಪೀಡಿತರು ಆಸ್ಪತ್ರೆಗೆ ದಾಖಲಾದರೆ ಇರುವ ಸಿಬ್ಬಂದಿ ವರ್ಗ ಸಾಕಾಗುವುದಿಲ್ಲ ಎಂಬುದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರ ಅಭಿಪ್ರಾಯ.

ಈಗಾದರೂ ವೈದ್ಯಕೀಯ ಶಿಕ್ಷಣ ಇಲಾಖೆ ಎಚ್ಚೆತ್ತು ಹೆಚ್ಚಿನ ಸಿಬ್ಬಂದಿ ವರ್ಗದ ನೇಮಕಕ್ಕೆ ಮುಂದಾಗಬೇಕಿದೆ. ಇಲ್ಲದೇ ಹೋದರೆ ವಿಕ್ಟೋರಿಯಾ ಆಸ್ಪತ್ರೆ ರೋಗಿಗಳ ಪಾಲಿಗೆ ಯಮಸ್ವರೂಪಿಯಾಗುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಲಭ್ಯವಿರುವ ಸಿಬ್ಬಂದಿವರ್ಗ

ಕೊರೋನ ವೈರಸ್ ಸೋಂಕಿತ ವ್ಯಕ್ತಿಗಳು ಹಾಗೂ ಶಂಕಿತರಿಗಾಗಿ ಮೀಸಲಿರುವ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಸ್ತುತ ಮೂರು ತುರ್ತು ನಿಗಾ ಘಟಕಗಳಿವೆ. 5 ಶ್ವಾಸಕೋಶ ತಜ್ಞರಿದ್ದಾರೆ. 80ರಿಂದ 100 ಮಂದಿ ಪ್ಯಾರಾಮೆಡಿಕಲ್ ಸಿಬ್ಬಂದಿ ವರ್ಗವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News