ಭಾರತದ ದಿನಗೂಲಿ ಕಾರ್ಮಿಕರಿಗೆ ಕೊರೋನಕ್ಕಿಂತ ಹಸಿವಿನಿಂದ ಸಾಯುವ ಭಯ

Update: 2020-03-25 09:21 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಕೊರೋನ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಭಾರತ ಸರಕಾರದ ಆದೇಶದಂತೆ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಲಾಗಿದೆ. ಜನರಿಗೆ ಮನೆಗಳಿಂದ ಹೊರಕ್ಕೆ ಬಾರದಂತೆ ಸೂಚಿಸಲಾಗಿದೆ. ಆದರೆ ಹಲವು ದಿನಗೂಲಿ ಕಾರ್ಮಿಕರಿಗೆ ಇದು ಸಾಧ್ಯವಿಲ್ಲದ ಮಾತಾಗಿದೆ.

ನೊಯ್ಡಾದ ಲೇಬರ್ ಚೌಕ್ ಪ್ರದೇಶ ಸದಾ ಜನರಿಂದ ಗಿಜಿಗಿಡುವ ಪ್ರದೇಶವಾಗಿದೆ. ಬಿಲ್ಡರುಗಳು ಇಲ್ಲಿಗೆ ಆಗಮಿಸಿ ಕಾರ್ಮಿಕರನ್ನು ಬಾಡಿಗೆಗೆ  ಗೊತ್ತು ಪಡಿಸುತ್ತಾರೆ. ಆದರೆ ಈಗ ಅಲ್ಲಿ ಹೆಚ್ಚಿನ ಕಾರ್ಮಿಕರಿಗೆ ಕೆಲಸವಿಲ್ಲದಂತಾಗಿದೆ, ಆದರೂ ಅವರು ಕೆಲಸ ದೊರೆಯಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.

''ನಾನು ದಿನಕ್ಕೆ 600 ರೂ. ಗಳಿಸುತ್ತಿದ್ದೆ. ಮನೆಯಲ್ಲಿ ಐದು ಜನ ಇದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ನಮ್ಮ ಆಹಾರ ಖಾಲಿಯಾಗಲಿದೆ. ಕೊರೋನ ವೈರಸ್ ಸಮಸ್ಯೆಯ ಬಗ್ಗೆ ತಿಳಿದಿದೆ, ಆದರೆ ನನ್ನ ಮಕ್ಕಳು ಹಸಿವಿನಿಂದ ನರಳುವುದನ್ನು ನೋಡುವುದು ಸಾಧ್ಯವಾಗುತ್ತಿಲ್ಲ'' ಎಂದು ಉತ್ತರ ಪ್ರದೇಶದ ಬಂದ ಜಿಲ್ಲೆಯ ಕಾರ್ಮಿಕ ರಮೇಶ್ ಕುಮಾರ್ ಹೇಳುತ್ತಾರೆ.

ಇವರಂತೆಯೇ ಲಕ್ಷಗಟ್ಟಲೆ ಕಾರ್ಮಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಮುಂದಿನ ಮೂರು ವಾರಗಳ ಕಾಲ ನಾವೇನು ಮಾಡುವುದು, ಹೇಗೆ ಜೀವನ ಸಾಗಿಸುವುದು ಎಂದು ಅವರಿಗೆ ತಿಳಿಯದಾಗಿದೆ.

ದೇಶದ ಕನಿಷ್ಠ ಶೇ 90ರಷ್ಟು ಉದ್ಯೋಗಿಗಳು ಅನೌಪಚಾರಿಕ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರು ಸೆಕ್ಯುರಿಟಿ ಗಾರ್ಡ್, ಕ್ಲೀನರ್, ರಿಕ್ಷಾ ಚಾಲಕರು,  ಬೀದಿ ಬದಿ ಮಾರಾಟಗಾರರು,  ಮನೆಕೆಲಸದಾಳು ಹೀಗೆ ವಿವಿಧ ವೃತ್ತಿಯಲ್ಲಿದ್ದಾರೆ. ಅವರಿಗೆ ಹೆಚ್ಚಿನ ಯಾವುದೇ ಸವಲತ್ತುಗಳಿಲ್ಲ,  ರಜೆ, ಪಿಂಚಣಿ ಹಾಗೂ ವಿಮಾ ಸೌಲಭ್ಯವಿಲ್ಲ. ಹೆಚ್ಚಿನ ಕಾರ್ಮಿಕರು ಬೇರೆ ರಾಜ್ಯದವರು. ಅಂತಹವರಿಗೆ  ಸಮುದಾಯ ಪಾಕಶಾಲೆಗಳ ಮೂಲಕ ಆಹಾರ ಸರಬರಾಜು ಮಾಡುವುದು ಅಗತ್ಯವಾಗಿದೆ ಎಂದು ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್ ಹೇಳುತ್ತಾರೆ.

ಅಲಹಾಬಾದ್ ನಲ್ಲಿ ರಿಕ್ಷಾವಾಲನಾಗಿ ಕೆಲಸ ಮಾಡುವ ಕಿಶನ್ ಲಾಲ್ ತಾನು ಕಳೆದ ಕೆಲ ದಿನಗಳಿಂದ ಏನನ್ನೂ ಗಳಿಸಿಲ್ಲ ಎಂದು ಹೇಳುತ್ತಾರೆ. ಇವರ ಹೊರತಾಗಿ ದೇಶಾದ್ಯಂತ ಸಣ್ಣ ಅಂಗಡಿಗಳನ್ನು ನಡೆಸುವವರೂ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

            ಕಿಶನ್ ಲಾಲ್ (Photo:bbc.com)

ಮಜ್ಜಿಗೆ, ಮೊಸರು ಮುಂತಾದವುಗಳಿಂದ ತಯಾರಿಸಲಾದ ಪಾನೀಯಗಳನ್ನು ದಿಲ್ಲಿಯ ಒಂದು ಪ್ರದೇಶದಲ್ಲಿ ಮಾರಾಟ ಮಾಡುವ ಮುಹಮ್ಮದ್ ಶಬೀರ್ ಮುಂದೇನು ಗತಿ ಎಂದು ಯೋಚಿಸುತ್ತಿದ್ದಾರೆ.  ಇತ್ತೀಚೆಗಷ್ಟೇ ಇಬ್ಬರನ್ನು ಕೆಲಸಕ್ಕೆ ನೇಮಿಸಿದ್ದ ಅವರು ಇದೀಗ ತಮ್ಮ ಉದ್ಯೋಗಿಗಳಿಗೂ ವೇತನ ನೀಡಲು ಸಾಧ್ಯವಾಗದೆ ತಮ್ಮ ಕುಟುಂಬವನ್ನೂ ಸಲಹಲಾಗದೆ ಕಂಗಾಲಾಗಿದ್ದಾರೆ. ''ಅಸಹಾಯಕನಾಗಿದ್ದೇನೆ.  ಕೊರೋನ ವೈರಸ್‍ಗಿಂತಲೂ ಮೊದಲು ಹಸಿವೆಯೇ ನಮ್ಮನ್ನು ಕೊಲ್ಲಬಹುದು'' ಎಂದು ಅವರು ಹೇಳುತ್ತಾನೆ.

       ಮುಹಮ್ಮದ್ ಶಬೀರ್ (Photo:bbc.com)

ಇವರೆಲ್ಲರಂತೆಯೇ ದೇಶಾದ್ಯಂತ ತಮ್ಮ ದಿನದ ಗಳಿಕೆಯಲ್ಲಿ ಜೀವನ ಸಾಗಿಸುವ ಕೋಟ್ಯಂತರ ಜನರು ಕಂಗಾಲಾಗಿದ್ದಾರೆ.

ನೀರಿನ ಬಾಟಲಿಗಳನ್ನು ಮಾರಾಟ ಮಾಡಿ ಜೀವನ ಸಾಗಿಸುವ ವಿನೋದ್ ಪ್ರಜಾಪತಿ ಪ್ರತಿಕ್ರಿಯಿಸಿ ''ನನಗೆ ಕೊರೋನ ವೈರಸ್ ಬಗ್ಗೆ ಗೊತ್ತು. ಅದು ಅಪಾಯಕಾರಿ, ಇಡೀ ದೇಶ ಒದ್ದಾಡುತ್ತಿದೆ. ನಾವು ಮನೆಯೊಳಗೆ ಇರಬೇಕೆಂದು ಹೇಳಲಾಗಿದೆ. ಆದರೆ ನಮ್ಮಂತಹ ಜನರು ಹಸಿವೆ ಹಾಗೂ ಸುರಕ್ಷತೆಯ ನಡುವೆ ಒಂದನ್ನು ಆರಿಸಬೇಕು. ನಾವು ಯಾವುದನ್ನು ಆರಿಸಬೇಕು?,'' ಎಂದು ಆತ ಮಾರ್ಮಿಕವಾಗಿ ಪ್ರಶ್ನಿಸುತ್ತಾರೆ.

ಕೃಪೆ: www.bbc.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News