ವೈದ್ಯರು, ಆರೋಗ್ಯ ಸಿಬ್ಬಂದಿಗೆ ಕಿರುಕುಳ ಆರೋಪ: ಮನೆ ಮಾಲಕರ ವಿರುದ್ಧ ಕಠಿಣ ಕ್ರಮ- ಸರಕಾರ ಎಚ್ಚರಿಕೆ

Update: 2020-03-26 13:03 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.26: ಕೊರೋನ ಸೋಂಕು ಹಿನ್ನೆಲೆ ಆಸ್ಪತ್ರೆಗಳಲ್ಲಿ ಅತ್ಯವಶ್ಯಕ ಸೇವೆ ಸಲ್ಲಿಸುತ್ತಿರುವ ವೈದ್ಯರು ಸೇರಿದಂತೆ ಆರೋಗ್ಯ ವಲಯದ ಸಿಬ್ಬಂದಿಗಳು ವಾಸ ಮಾಡುತ್ತಿರುವ ಬಾಡಿಗೆ ಮನೆಗಳನ್ನು ಕೂಡಲೇ ಖಾಲಿ ಮಾಡುವಂತೆ ಕಿರುಕುಳ ಆರೋಪ ಕೇಳಿಬಂದಿದ್ದು, ತಪ್ಪಿತಸ್ಥ ಮನೆ ಮಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ರಾಜ್ಯ ಸರಕಾರ ಮುಂದಾಗಿದೆ.

ಈ ಸಂಬಂಧ ಗುರುವಾರ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಬಿಬಿಎಂಪಿ ಆಯುಕ್ತರಿಗೆ ಹಾಗೂ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಕೊರೋನ ವೈರಸ್ ವ್ಯಾಪಿಸುತ್ತಿದ್ದು, ಎಲ್ಲ ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ನರ್ಸ್‍ಗಳು, ಆಸ್ಪತ್ರೆ ಸಿಬ್ಬಂದಿಗಳು ಶಂಕಿತರ ತಪಾಸಣೆ, ಸೋಂಕಿತರ ಚಿಕಿತ್ಸೆಯಲ್ಲಿ ನಿರತರಾಗಿದ್ದಾರೆ. ಎಲ್ಲ ಫಾರ್ಮಾಸಿಟಿಕಲ್ ಸಿಬ್ಬಂದಿ ಔಷಧ ವಿತರಣೆಯಲ್ಲಿ ತೊಡಗಿದ್ದಾರೆ. ಆದರೆ, ಇಂತಹ ಆರೋಗ್ಯ ವಲಯದ ಸಿಬ್ಬಂದಿಗಳು ವಾಸ ಮಾಡುತ್ತಿರುವ ಬಾಡಿಗೆ ಮನೆಗಳ ಮಾಲಕರು, ನೀವು ಸೋಂಕಿತರೊಂದಿಗೆ ಇದ್ದು ಬರುತ್ತೀರಾ, ನಮಗೂ ಸೋಂಕು ತಗುಲಬಹುದು. ನಮ್ಮ ಮನೆ ಖಾಲಿ ಮಾಡಿ ಎಂದು ತಕರಾರು ತೆಗೆಯುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ಇಂತಹ ವಸತಿ ಮಾಲಕರ ವಿರುದ್ಧ ಕರ್ನಾಟಕ ಸಾಂಕ್ರಾಮಿಕ ಕಾಯಿಲೆ (ಕೋವಿಡ್ -19) ಕಾಯ್ದೆ- 2020ಯಡಿ ಕೂಡಲೇ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳು, ಬಿಬಿಎಂಪಿ ಆಯುಕ್ತರು, ಪಾಲಿಕೆಗಳ ಆಯುಕ್ತರು, ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News