ವಸತಿ ಇಲಾಖೆಗೆ 'ಮತ್ಸ್ಯೋತ್ಸವ' ಯೋಜನೆ ಹಸ್ತಾಂತರ: ಸಚಿವ ಜೆ.ಸಿ.ಮಾಧುಸ್ವಾಮಿ

Update: 2020-03-27 17:50 GMT

ಬೆಂಗಳೂರು, ಮಾ.27: ಮೀನುಗಾರರಿಗೆ ಮತ್ಸ್ಯೋತ್ಸವ ಯೋಜನೆಯಡಿ ರಾಜೀವ್‍ ಗಾಂಧಿ ವಸತಿ ನಿಗಮದಿಂದ ನಿರ್ಮಿಸಲಾಗುತ್ತಿದ್ದ ಮನೆಗಳನ್ನು ಇನ್ನು ಮುಂದೆ ವಸತಿ ಇಲಾಖೆಯ ಮೂಲಕವೆ ನಿರ್ಮಿಸಲಾಗುವುದು. ಗ್ರಾಮೀಣ ಪ್ರದೇಶದವರಿಗೆ 1.75 ಲಕ್ಷ ರೂ., ಪಟ್ಟಣ ಪ್ರದೇಶದವರಿಗೆ 2 ಲಕ್ಷ ರೂ.ಸಹಾಯಧನ ನೀಡಲು 39.63 ಕೋಟಿ ರೂ.ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ಮೈಸೂರು ಸಕ್ಕರೆ ಕಾರ್ಖಾನೆಯನ್ನು 40 ವರ್ಷದ ಗುತ್ತಿಗೆ ಆಧಾರದ ಮೇಲೆ ಕೆಲವು ಶರತ್ತುಗಳನ್ನು ವಿಧಿಸಿ ಲೀಸ್ ಮಾಡುತ್ತಿದ್ದೇವೆ. ಪ್ರಸಕ್ತ ಸಾಲಿನ ಜೂನ್ ತಿಂಗಳಿನಿಂದಲೆ ಕಬ್ಬು ಅರೆಯುವ ಕೆಲಸ ಪ್ರಾರಂಭವಾಗಬೇಕು, ವಿದ್ಯುತ್ ಉತ್ಪಾದನೆ, ಡಿಸ್ಟಿಲರಿ ಮುಂದುವರೆಯಬೇಕು ಹಾಗೂ ಭದ್ರತಾ ಠೇವಣಿ ಸೇರಿದಂತೆ ಇನ್ನಿತರ ಶರತ್ತುಗಳನ್ನು ವಿಧಿಸಿ ಟೆಂಡ್ ಕರೆದು ಖಾಸಗಿಯವರಿಗೆ ವಹಿಸಿಕೊಡುತ್ತೇವೆ ಎಂದು ಮಾಧುಸ್ವಾಮಿ ಹೇಳಿದರು.

ಕಲ್ಲುಪುಡಿ(ಕ್ರಷರ್), ಪಂಚಾಯತ್‍ ರಾಜ್ ಹಾಗೂ ಬೆಂಗಳೂರು ನಗರ ಪಾಲಿಕೆಗೆ ಸಂಬಂಧಿಸಿದ ಮೂರು ಆಧ್ಯಾದೇಶವನ್ನು ಹೊರಡಿಸಲು ನಿರ್ಧರಿಸಲಾಗಿದೆ. ಕಲ್ಯಾಣ ಕರ್ನಾಟಕ ವ್ಯಾಪ್ತಿಗೆ ಸಂಬಂಧಿಸಿದ ಉಸ್ತುವಾರಿ ಸಮಿತಿ ಇತ್ತು. ಇದೀಗ ಅದನ್ನು ವಿಭಜಿಸಿ ಪ್ರತಿಯೊಂದು ಜಿಲ್ಲೆಗೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಉಸ್ತುವಾರಿ ಸಮಿತಿಗಳನ್ನು ರಚಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.

ಕೆಪಿಎಸ್ಸಿಯಲ್ಲಿ ನೇರ ನೇಮಕಾತಿ ಮಾಡುವ ವೇಳೆ ಅಭ್ಯರ್ಥಿಗಳ ಪ್ರಮಾಣ ಪತ್ರಗಳನ್ನು ಪರಿಶೀಲನೆ ಮಾಡಲು ಪದೇ ಪದೇ ಆಹ್ವಾನಿಸಲಾಗುತ್ತಿತ್ತು. ಇದರಿಂದ, ತುಂಬಾ ಕಾಲಹರಣವಾಗುತ್ತಿತ್ತು. ಆದುದರಿಂದ, ಇನ್ನು ಮುಂದೆ ಅಭ್ಯರ್ಥಿ ಸಂದರ್ಶನಕ್ಕೆ ಹಾಜರಾದಾಗ ಮಾತ್ರ ದಾಖಲೆಗಳನ್ನು ಪರಿಶೀಲಿಸಬೇಕು. ಇನ್ನುಳಿದಂತೆ ವಿವರವಾದ ಪರಿಶೀಲನೆಯನ್ನು ಸಂಬಂಧಪಟ್ಟ ಇಲಾಖೆಗಳ ಮೂಲಕ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಹಾವೇರಿ ಜಿಲ್ಲೆಯ ಬಸಾಪುರ, ರಾಯಚೂರು ಜಿಲ್ಲೆಯ ಸಂಕನೂರು, ಕೊಪ್ಪಳ ಜಿಲ್ಲೆಯ ಲಿಂಗದಹಳ್ಳಿಯಲ್ಲಿ ಅಲ್ಪಸಂಖ್ಯಾತರ ವಸತಿ ಶಾಲೆಗಳ ನಿರ್ಮಾಣಕ್ಕೆ ತಲಾ 25 ಕೋಟಿ ರೂ. ಬಿಡುಗಡೆ ಮಾಡಲು ಆಡಳಿತಾತ್ಮಕ ಆನುಮೋದನೆ ನೀಡಲಾಗಿದೆ ಎಂದು ಮಾಧುಸ್ವಾಮಿ ತಿಳಿಸಿದರು.

ಕಾರವಾರ ಬಂದರಿನಲ್ಲಿ ತಕ್ಷಣ ಬೆಂಕಿ ಆರಿಸುವ ಉಪಕರಣ ಖರೀದಿಗೆ 19 ಕೋಟಿ ರೂ., ಚಿಕ್ಕಮಗಳೂರು-ಹಿರೇ ಮಗಳೂರುವರೆಗೆ ರಸ್ತೆ ಅಭಿವೃದ್ಧಿಗೆ 29.40 ಕೋಟಿ ರೂ.ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರರು.

ಭೀಮಾ ಏತ ನೀರಾವರಿ ಯೋಜನೆ ಮೂಲಕ ಆಂದಾಜು 6 ಟಿಎಂಸಿ ನೀರನ್ನು ಅಫ್ಝಲ್‍ಪುರದ ಸೊನ್ನ ಗ್ರಾಮದಲ್ಲಿ ಎತ್ತುವಳಿ ಮಾಡಿ 43 ಗ್ರಾಮಗಳ 24290 ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುವ 964 ಕೋಟಿ ರೂ.ಗಳ ಯೋಜನೆ, 791 ಕೋಟಿ ರೂ.ಗಳ ಪರಿಷ್ಕøತ ಅಂದಾಜಿನ ಬಂಡೂರು ನಾಲಾ ತಿರುವು ಯೋಜನೆ, ಕಳಸಾ ನಾಲದಿಂದ ಖಾನಾಪುರದ ಬಳಿ 1.7 2ಟಿಎಂಸಿ ನೀರನ್ನು ಕುಡಿಯುವ ನೀರಿನ ಉದ್ದೇಶಕ್ಕಾಗಿ ಬಳಸಲು ಎತ್ತುವಳಿ ಮಾಡುವ ಯೋಜನೆಗೆ 885.80 ಕೋಟಿ ರೂ.ಗಳ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಬಡ್ಡಿ ಮನ್ನಾ ಅವಧಿ ವಿಸ್ತರಣೆ

ರೈತರ ಬೆಳೆ ಸಾಲ, ಟ್ರಾಕ್ಟರ್ ಸಾಲ, ಟಿಲ್ಲರ್ ಸಾಲ ಹೀಗೆ ಪ್ರಸಕ್ತ ಸಾಲಿನ ಮಾ.31ರವರೆಗಿನ ಸುಸ್ತಿ ಬಡ್ಡಿಯ ಮನ್ನಾ ಅವಧಿಯನ್ನು ಜೂ.30ರವರೆಗೆ ವಿಸ್ತರಿಸಲಾಗಿದೆ. ಅಂತರಾರಾಷ್ಟ್ರೀಯ ಮಟ್ಟದ ದೊಡ್ಡ ಔಷಧಿ ಕಂಪೆನಿ ಬೇರ್ ಉಚಿತವಾಗಿ ಔಷಧಿಗಳನ್ನು ಒದಗಿಸುವುದಾಗಿ ಹೇಳಿದೆ. ನಮ್ಮ ಆರೋಗ್ಯ ಇಲಾಖೆ ಕಾರ್ಯದರ್ಶಿ ಮೂಲಕ ಅವರನ್ನು ಸಂಪರ್ಕಿಸಿ ಅಗತ್ಯ ಔಷಧಿಗಳನ್ನು ತರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ದಾನಿಗಳು, ಕೈಗಾರಿಕೋದ್ಯಮಿಗಳೂ ಸಹಕಾರ ನೀಡಬೇಕು.

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News