ಕೊರೋನ ತಡೆಗಟ್ಟುವ ನಿಟ್ಟಿನಲ್ಲಿ ಮುಸ್ಲಿಮರ ಸಹಕಾರ ನಮಗೆ ದೊಡ್ಡ ಶಕ್ತಿ: ಸಿಎಂ ಯಡಿಯೂರಪ್ಪ

Update: 2020-03-27 18:00 GMT

ಬೆಂಗಳೂರು, ಮಾ.27: ಕೊರೋನ ಸೋಂಕು ಹರಡುವುದನ್ನು ತಡೆಯಲು ಕೈಗೊಂಡಿರುವ ಅಗತ್ಯ ಮುಂಜಾಗ್ರತಾ ಕ್ರಮಗಳ ಬಗ್ಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಪರಿಸ್ಥಿತಿ ನಿಯಂತ್ರಿಸುವಂತೆ ಸೂಚಿಸಲಾಗಿದೆ ಎಂದು ಮುಖ್ಯಮಂತಿ. ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ತುರ್ತು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 9.30ಕ್ಕೆ ದೂರವಾಣಿ ಮೂಲಕ ನನ್ನ ಜೊತೆ ಮಾತನಾಡಿ ರಾಜ್ಯದಲ್ಲಿ ಲಾಕ್‍ಡೌನ್ ಆಗಿದ್ದರೂ, ಜನ ಓಡಾಟ ಮಾಡುತ್ತಿದ್ದು, ಅದನ್ನು ತಡೆಯಲು ಸೂಚನೆ ನೀಡಿದ್ದಾರೆ ಎಂದರು.

ಕೊರೋನ ಸೋಂಕು ಇರುವುದು ದೃಢಪಟ್ಟಿದರೂ ಶೇ.99ರಷ್ಟು ಗುಣಮುಖವಾಗುವ ಸಾಧ್ಯತೆಗಳಿವೆ. ಆದರೆ, ಸೋಂಕಿತರು ಈ ವಿಚಾರದಲ್ಲಿ ಗಾಬರಿಯಾಗುತ್ತಿದ್ದಾರೆ. ಅದೇ ರೀತಿ ಮಾಧ್ಯಮಗಳಲ್ಲಿಯೂ ಬಿಂಬಿಸಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಸೋಂಕಿತರು ಸಂಪೂರ್ಣವಾಗಿ ಗುಣಮುಖವಾಗಲು ಅವಕಾಶವಿದೆ ಎಂದು ಅವರು ಹೇಳಿದರು.

ಸೋಂಕಿತರಿಗೆ ಔಷಧಿಗಳ ಕೊರತೆಯಾಗದಂತೆ ಕ್ರಮ ವಹಿಸಲಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಇಂದಿರಾ ಕ್ಯಾಂಟೀನ್‍ನಲ್ಲಿ ಬೇರೆಯವರ ಸಹಕಾರದೊಂದಿಗೆ ಬಡವರು, ನಿರ್ಗತಿಕರಿಗೆ ಉಚಿತವಾಗಿ ಆಹಾರದ ಪ್ಯಾಕೇಟ್‍ಗಳನ್ನು ಪೂರೈಸುತ್ತೇವೆ ಎಂದು ಮುಖ್ಯಮಂತಿ ಹೇಳಿದರು.

ಸಚಿವರಾದ ಆರ್.ಅಶೋಕ್, ಬಸವರಾಜ ಬೊಮ್ಮಾಯಿ ನಿನ್ನೆ ಮುಸ್ಲಿಮ್ ಮುಖಂಡರ ಜೊತೆ ಚರ್ಚೆ ನಡೆಸಿದ ಸಂದರ್ಭದಲ್ಲಿ ಅವರೆಲ್ಲರೂ ನಮಾಝ್‍ಗಳನ್ನು ಮನೆಗಳಲ್ಲಿ ಮಾಡುತ್ತೇವೆ. ಮಸೀದಿಗಳಲ್ಲಿ ಸಾಮೂಹಿಕವಾಗಿ ನಮಾಝ್ ಮಾಡಿ ಬೇರೆಯವರಿಗೆ ತೊಂದರೆ ಮಾಡುವುದಿಲ್ಲ ಎಂದಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.

ಈ ಸಂಕಷ್ಟದ ಸಂದರ್ಭದಲ್ಲಿ ರಾಜ್ಯ ಸರಕಾರ ಅಗತ್ಯ ವಸ್ತುಗಳಾದ ಆಹಾರ ಧಾನ್ಯಗಳು, ಬೇಳೆ ಕಾಳುಗಳು, ಎಣ್ಣೆ, ಮಾಂಸ, ಹಾಲು, ಹಣ್ಣುಗಳು, ತರಕಾರಿಗಳ ಕೊರತೆ ಆಗದಂತೆ ಗಮನ ಹರಿಸಿದೆ. ರೈತರಿಂದ ಖರೀದಿಸಿ ಗೋದಾಮುಗಳಿಗೆ, ಗೋದಾಮುಗಳಿಂದ ಚಿಲ್ಲರೆ ವಹಿವಾಟು ಅಂಗಡಿಗಳಿಗೆ ಸುಲಲಿತವಾಗಿ ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಅಗತ್ಯ ವಸ್ತುಗಳನ್ನು ಪೂರೈಸುವ ಕಾಯಕದಲ್ಲಿ ತೊಡಗಿರುವವರ ಅವಿಶ್ರಾಂತ ಪರಿಶ್ರಮವನ್ನು ನಾನು ಸ್ವಾಗತಿಸುತ್ತೇನೆ. ಕೇಂದ್ರ ಸರಕಾರದ ನಿರ್ದೇಶನದಂತೆ ಅಗತ್ಯ ವಸ್ತುಗಳನ್ನು ನಾವು ಪೂರೈಸುತ್ತೇವೆ. ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಅಗತ್ಯ ವಸ್ತುಗಳನ್ನು ದುಬಾರಿ ಬೆಲೆಗೆ ಮಾರಾಟ ಮಾಡಿ ಜನರ ಸುಲಿಗೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಚ್ಚರಿಕೆ ನೀಡಿದರು.

ಸರಕಾರಕ್ಕೆ ಮುಸ್ಲಿಮರ ಸಹಕಾರ

ಕೊರೋನ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಲ್ಪಸಂಖ್ಯಾತ ಮುಸ್ಲಿಮರು ಕೊಡುತ್ತಿರುವ ಸಹಕಾರವು, ನಮಗೆ ಬಹಳ ದೊಡ್ಡ ಶಕ್ತಿ ಕೊಟ್ಟಂತಾಗಿದೆ. ಅದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸರಕಾರವು ಸದಾ ಅವರ ಜೊತೆ ಇರುತ್ತದೆ.

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News