ಕೊರೋನ ಭೀತಿಯಿಂದ ಬೆಂಗಳೂರು ತೊರೆದ ಜನತೆ: ರಾಜ್ಯ ರಾಜಧಾನಿ ಖಾಲಿ ಖಾಲಿ

Update: 2020-03-27 18:11 GMT

ಬೆಂಗಳೂರು, ಮಾ.27: ಕೊರೋನ ಸೋಂಕಿನ ಭೀತಿಯ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ರಾಜಧಾನಿಗೆ ಬಂದಿದ್ದವರಲ್ಲಿ ಬಹುತೇಕರು ತಮ್ಮ ತಮ್ಮ ಊರುಗಳಿಗೆ ದೌಡಾಯಿಸಿರುವ ಹಿನ್ನೆಲೆಯಲ್ಲಿ ಶೇ.50 ರಷ್ಟು ನಗರದ ಜನಸಂಖ್ಯೆ ಇಳಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.

ಜನರು ನಗರವನ್ನು ಬಿಟ್ಟು ತಮ್ಮ ತಮ್ಮ ಊರುಗಳಿಗೆ ವಾಪಸ್ಸಾಗಿದ್ದಾರೆ. ನಿತ್ಯ ಸಂಚಾರ ದಟ್ಟಣೆಯಿಂದ, ಧೂಳು, ವಾಹನ ಸಂಚಾರದ ಹೊಗೆ, ಜನರಿಂದ ಗಿಜಿಗಿಡುತ್ತಿದ್ದ ಮಾಲ್‍ಗಳು, ಸದ್ದುಗದ್ದಲದಿಂದ ಕೂಡಿರುತ್ತಿದ್ದ ರಾಜ್ಯದ ರಾಜಧಾನಿ ಇದೀಗ ಶಾಂತವಾಗಿದೆ. ಇಡೀ ದೇಶವೇ ಲಾಕ್‍ಡೌನ್ ಆಗಿರುವುದರ ಪರಿಣಾಮದಿಂದಾಗಿ ಎಲ್ಲ ಕಡೆಗಳಲ್ಲಿ ಖಾಲಿ ಖಾಲಿಯಾಗಿವೆ. ಎಲ್ಲೆಡೆ ಧೂಳಿನಿಂದಲೇ ಕಂಗೊಳಿಸುತ್ತಿದ್ದ ಕಟ್ಟಡಗಳಿಂದು ಶುಭ್ರವಾಗಿ ಕಾಣುತ್ತಿವೆ.

ಎಲ್ಲ ವರ್ಗದ ಜನ ಖಾಲಿ: ಮೊದಲಿಗೆ ಕೊರೋನ ಸೋಂಕಿತ ವ್ಯಕ್ತಿ ದೃಢವಾಗುತ್ತಿದ್ದಂತೆಯೇ ಜಾಗೃತಗೊಂಡ ಕೆಲವೊಂದು ಐಟಿ-ಬಿಟಿ ಕಂಪೆನಿಗಳು ತಮ್ಮ ಕಾರ್ಮಿಕರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದವು.

ಅನಂತರ ಸೋಂಕು ಹೆಚ್ಚಾದಂತೆ ರಾಜ್ಯವನ್ನು ಲಾಕ್‍ಡೌನ್ ಮಾಡಲು ಸರಕಾರ ತೀರ್ಮಾನ ಕೈಗೊಂಡಿತು. ಇದರ ನಡುವೆ ಬಹುತೇಕರು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದು, ಸರಕಾರಿ, ಅರೆ ಸರಕಾರಿ, ಖಾಸಗಿ, ಗುತ್ತಿಗೆ ಕಾರ್ಮಿಕರು, ವ್ಯಾಪಾರಿಗಳು ಸೇರಿದಂತೆ ಎಲ್ಲ ವರ್ಗದವರೂ ನಗರದಿಂದ ನಿರ್ಗಮಿಸಿದ್ದಾರೆ.

ಕಾಮಗಾರಿ ಸ್ಥಗಿತ, ಆಹಾರಕ್ಕಾಗಿ ಪರದಾಟ: ನಗರದಲ್ಲಿ ಕಟ್ಟಡ ನಿರ್ಮಾಣ, ರಸ್ತೆ ದುರಸ್ಥಿ ಸೇರಿದಂತೆ ಮತ್ತಿತರೆ ಕೆಲಸ ಕಾರ್ಯಗಳಲ್ಲಿ ದುಡಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರಿಗೆ ಈಗ ಕೆಲಸಗಳೇ ಇಲ್ಲದಂತಾಗಿದೆ. ಅಲ್ಲದೆ, ಅವರು ಅನ್ನ, ಆಹಾರವಿಲ್ಲದೆ ಪರದಾಡುವಂತಾಗಿದೆ.

ಕೊರೋನ ಭೀತಿಯಿಂದಲೇ ಕೆಲ ಕೂಲಿ ಕಾರ್ಮಿಕರು ನಗರವನ್ನು ಬಿಟ್ಟು ಹೋಗಿದ್ದಾರೆ. ಈಗ ಜನರು ಹೊರಗಡೆಯಿಂದ ಟ್ರಾಕ್ಟರ್‍ಗಳನ್ನು ತರಿಸಿಕೊಂಡು, ಊರುಗಳತ್ತ ಮುಖ ಮಾಡಿದ್ದಾರೆ. ಇನ್ನು ನಗರದಲ್ಲಿಯೇ ಇರುವವರ ಕಥೆ ಚಿಂತಾಜನಕವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News