3 ತಿಂಗಳು ಇಎಂಐ ಕಟ್ಟದಿದ್ದರೆ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆಯೇ?

Update: 2020-03-27 18:37 GMT

ದೇಶದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ಆರ್ಥಿಕ ಪರಿಣಾಮವನ್ನು ಎದುರಿಸುವ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ವಹಿವಾಟು ಸಂಸ್ಥೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್‍ ಗವರ್ನರ್ ಶಕ್ತಿಕಾಂತ ದಾಸ್‍ ಅವರು ಶುಕ್ರವಾರ ಹಲವು ನೆರವುಗಳನ್ನು ಘೋಷಿಸಿದ್ದಾರೆ.

ಮೂರು ತಿಂಗಳು ಎಲ್ಲ ಸಾಲಗಳ ಮೇಲಿನ ಇಎಂಐ ಸ್ಥಗಿತ ಕ್ರಮದಿಂದ ಹಿಡಿದು, ರೆಪೊ ದರ ಮತ್ತು ರಿವರ್ಸ್‍ ರೆಪೊ ದರವನ್ನು ಗಣನೀಯವಾಗಿ ಕಡಿಮೆ ಮಾಡುವವರೆಗಿನ ಆರ್ ಬಿಐ ಕ್ರಮಗಳನ್ನು 'ದೊಡ್ಡ ಕೊಡುಗೆ' ಮತ್ತು 'ಆರ್ಥಿಕ ಪುನಃಶ್ಚೇತನಕ್ಕೆ ಅಗತ್ಯವಾಗಿದ್ದ ಮುಲಾಮು' ಎಂದು ಬಣ್ಣಿಸಲಾಗುತ್ತಿದೆ. ಆರ್ ಬಿಐ ಕ್ರಮದ ಬಗ್ಗೆ ನಿಮಗಿರುವ ಪ್ರಶ್ನೆಗಳ ಸಂದೇಹವನ್ನು ಪರಿಹರಿಸಲು thequint.com ಪ್ರಕಟಿಸಿದ ಕೆಲವೊಂದು ಪ್ರಶ್ನೋತ್ತರಗಳು ಈ ಕೆಳಗಿವೆ.

ಪ್ರಶ್ನೆ: ನನ್ನ ಇಎಂಐ ಪಾವತಿಯನ್ನು ನನ್ನ ಖಾತೆಯಿಂದ ಕಡಿತಗೊಳಿಸುವುದಿಲ್ಲವೇ?

ಇಲ್ಲಿ ಒಂದು ಅಂಶವಿದೆ. ಆರ್‍ಬಿಐ ಘೋಷಣೆಯ ಪ್ರಕಾರ, ಎಲ್ಲ ಇಎಂಐ ಪಾವತಿಗಳನ್ನು ಮೂರು ತಿಂಗಳ ಕಾಲ ಮುಂದೂಡಲು ಬ್ಯಾಂಕ್‍ ಗಳಿಗೆ ಅವಕಾಶ ನೀಡಲಾಗಿದೆ. ಆದರೆ ಪ್ರತ್ಯೇಕ ಬ್ಯಾಂಕ್‍ ಗಳು ನಿಮ್ಮ ಖಾತೆಯಿಂದ ಇಎಂಐ ಕಡಿತಗೊಳಿಸುವುದನ್ನು ನಿಲ್ಲಿಸಲು ಒಪ್ಪಿಗೆ ನೀಡಬೇಕಿವೆ.

ಪ್ರಶ್ನೆ: ಈ ತಾತ್ಕಾಲಿಕ ತಡೆಹಿಡಿಯುವಿಕೆ ಸೌಲಭ್ಯವನ್ನು ನಮಗೆ ನೀಡಲಾಗುತ್ತದೆಯೇ ಎಂದು ಬ್ಯಾಂಕ್‍ ಗಳು ಯಾವಾಗ ತಿಳಿಸುತ್ತವೆ?

ಇದು ವಾಸ್ತವವಾಗಿ ಕಾರ್ಯನಿರ್ವಹಿಸುವುದು ಹೀಗೆ: ಬ್ಯಾಂಕ್‍ ಗಳು ಈ ಬಗ್ಗೆ ಸಮಾಲೋಚನೆ ನಡೆಸುತ್ತವೆ ಹಾಗೂ ಆಯಾ ಬ್ಯಾಂಕ್‍ ಗಳ ಆಡಳಿತ ಮಂಡಳಿಗಳ ಅನುಮೋದನೆ ಬಳಿಕ ಈ ತಾತ್ಕಾಲಿಕ ತಡೆಹಿಡಿಯುವಿಕೆಯನ್ನು ಅನುಷ್ಠಾನಗೊಳಿಸುತ್ತವೆ. ಇದಾದ ಬಳಿಕ ತಮ್ಮ ನಿರ್ಧಾರದ ಬಗ್ಗೆ ಮಾಹಿತಿ ನೀಡುವ ಸಂದೇಶ ಅಥವಾ ಇ-ಮೇಲ್ ನಿರೀಕ್ಷಿಸಬಹುದು. ಬಹುಶಃ ನಿಮಗೆ ಈ ಒಳ್ಳೆಯ ಸುದ್ದಿ ನೀಡಬಹುದು!

ಒಂದು ವೇಳೆ ಬ್ಯಾಂಕಿನಿಂದ ಯಾವ ಸಂದೇಶವೂ ಬಾರದಿದ್ದಲ್ಲಿ, ಬ್ಯಾಂಕ್‍ ಜತೆ ಸಂಪರ್ಕ ಇಟ್ಟುಕೊಂಡು ನಿಮ್ಮ ಇಎಂಐ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆಯೇ? ಇಲ್ಲವೇ ಎಂಬ ಬಗ್ಗೆ ವಿಚಾರಿಸಿಕೊಳ್ಳಬೇಕು.

ಪ್ರಶ್ನೆ: ಈ ತಾತ್ಕಾಲಿಕ ತಡೆಹಿಡಿಯುವಿಕೆ ನಿರ್ಧಾರವನ್ನು ಕೈಗೊಳ್ಳಲು ಯಾವ ಬ್ಯಾಂಕ್‍ ಗಳಿಗೆ ಅವಕಾಶ ನೀಡಲಾಗಿದೆ?

ಎಲ್ಲ ವಾಣಿಜ್ಯ ಬ್ಯಾಂಕ್‍ಗಳು (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳು, ಸಣ್ಣ ಫೈನಾನ್ಸ್ ಬ್ಯಾಂಕ್‍ಗಳು ಮತ್ತು ಸ್ಥಳೀಯ ಪ್ರದೇಶ ಬ್ಯಾಂಕ್‍ಗಳು ಸೇರಿ), ಸಹಕಾರ ಬ್ಯಾಂಕ್‍ ಗಳು, ಅಖಿಲ ಭಾರತ ಹಣಕಾಸು ಸಂಸ್ಥೆಗಳು ಮತ್ತು ಎನ್‍ಬಿಎಫ್‍ಸಿಗಳಿಗೆ (ಹೌಸಿಂಗ್ ಫೈನಾನ್ಸ್ ಕಂಪನಿ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸೇರಿದಂತೆ) 2020ರ ಮಾರ್ಚ್ 1ಕ್ಕೆ ಬಾಕಿ ಇರುವ ಅವಧಿ ಸಾಲದ ಮೊತ್ತಕ್ಕೆ ಮೂರು ಇಎಂಐಗಳನ್ನು ಮುಂದೂಡಲು ಅವಕಾಶ ನೀಡಲಾಗಿದೆ.

ಪ್ರಶ್ನೆ: ನನ್ನ ಬ್ಯಾಂಕ್ ಇಎಂಐ ತಾತ್ಕಾಲಿಕವಾಗಿ ತಡೆಹಿಡಿದರೆ, ಅದು ನಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆಯೇ?

ಇಲ್ಲ

ಪ್ರಶ್ನೆ: ನನ್ನ ಇಎಂಐ ಮನ್ನಾ ಮಾಡಲಾಗುತ್ತದೆಯೇ ಅಥವಾ ವಿಳಂಬ ಮಾಡಲಾಗುತ್ತದೆಯೇ?

ಇದು ಅತ್ಯಂತ ಪ್ರಮುಖ ಪ್ರಶ್ನೆ. ದಯವಿಟ್ಟು ಗಮನಿಸಬೇಕಾದ ಅಂಶವೆಂದರೆ ಇದು ಮನ್ನಾಅಲ್ಲ; ಕೇವಲ ತಾತ್ಕಾಲಿಕ ತಡೆ ಅಥವಾ ವಿಳಂಬವಷ್ಟೇ. ಆರ್‍ ಬಿಐ ವಾಸ್ತವವಾಗಿ ಹೇಳಿರುವುದೇನೆಂದರೆ, ನಿಮ್ಮ ಮರುಪಾವತಿಯ ವೇಳಾಪಟ್ಟಿಯನ್ನು ಮೂರು ತಿಂಗಳು ಹಿಂದಕ್ಕೆ ತಳ್ಳಲಾಗುತ್ತದೆ. ನೀವು ವಾಸ್ತವವಾಗಿ ಪಾವತಿಸಬೇಕಾದ ಮೊತ್ತವನ್ನೇ ಪಾವತಿಸಬೇಕಾಗುತ್ತದೆ. ಆದರೆ ನಿಮ್ಮ ಬ್ಯಾಂಕ್ ಅವಕಾಶ ನೀಡಿದರೆ ಮುಂದಿನ ಮೂರು ತಿಂಗಳು ನೀವು ಅದನ್ನು ಪಾವತಿಸುವ ಅಗತ್ಯವಿಲ್ಲ.

ಪ್ರಶ್ನೆ: ಈ ನಡೆಯಲ್ಲಿ ಯಾವೆಲ್ಲ ಬಗೆಯ ಸಾಲವನ್ನು ಸೇರಿಸಲಾಗಿದೆ?

ಇದು ಎಲ್ಲ ಅವಧಿ ಸಾಲಕ್ಕೆ ಅನ್ವಯವಾಗುತ್ತದೆ. ಅಂದರೆ ವೈಯಕ್ತಿಕ ಸಾಲ, ಶಿಕ್ಷಣ ಸಾಲ, ಗೃಹ ಸಾಲ, ಗ್ರಾಹಕ ವಸ್ತು ಸಾಲ ಮತ್ತು ನಿಗದಿತ ಅವಧಿಯ ಯಾವುದೇ ಬಗೆಯ ಸಾಲಗಳು ಇದರಲ್ಲಿ ಸೇರುತ್ತವೆ.

ಪ್ರಶ್ನೆ: ಈ ನಡೆಯು ಕೇವಲ ಬಡ್ಡಿ ಪಾವತಿಗೆ ಅನ್ವಯಿಸುತ್ತದೆಯೇ ಅಥವಾ ಮೂಲ ಮರುಪಾವತಿಗೆ ಅನ್ವಯಿಸುತ್ತದೆಯೇ?

ಇದು ಮೂಲ ಮೊತ್ತ ಮತ್ತು ಬಡ್ಡಿ ಎರಡಕ್ಕೂಅನ್ವಯಿಸುತ್ತದೆ.

ಪ್ರಶ್ನೆ: ನನ್ನ ಕ್ರೆಡಿಟ್‍ ಕಾರ್ಡ್ ಪಾವತಿಯ ಮೇಲೆಯೂ ನನಗೆ ಈ ತಾತ್ಕಾಲಿಕ ತಡೆ ಅನ್ವಯಿಸುತ್ತದೆಯೇ?

ಇಲ್ಲ. ಕ್ರೆಡಿಟ್‍ ಕಾರ್ಡ್ ಪಾವತಿಗಳು ಅವಧಿ ಸಾಲದ ವರ್ಗದಲ್ಲಿ ಸೇರುವುದಿಲ್ಲ ಹಾಗೂ ತಾತ್ಕಾಲಿಕ ತಡೆ ಇದಕ್ಕೆ ಅನ್ವಯಿಸುವುದಿಲ್ಲ.

ಪ್ರಶ್ನೆ: ವಹಿವಾಟು ಸಂಸ್ಥೆಗಳು ಪಡೆದ 'ಕಾರ್ಯನಿರ್ವಹಣೆ ಬಂಡವಾಳ' ಸಾಲದ ಭವಿಷ್ಯ ಏನು?

ಇಲ್ಲಿ ಆರ್ ಬಿಐ ಸ್ಪಷ್ಟಪಡಿಸಿರುವುದೇನೆಂದರೆ, ನಗದು ಸಾಲ/ ಓವರ್‍ ಡ್ರಾಫ್ಟ್ ವಿಧಾನದಲ್ಲಿ ಮಂಜೂರು ಮಾಡಲಾದ ಕಾರ್ಯನಿರ್ವಹಣೆ ಬಂಡವಾಳ ಸೌಲಭ್ಯಕ್ಕೆ ಸಂಬಂಧಿಸಿದಂತೆ, 2020ರ ಮಾರ್ಚ್ 1ರಂದು ಬಾಕಿ ಇರುವ ಎಲ್ಲ ಇಂತಹ ಕಾರ್ಯನಿರ್ವಹಣೆ ಬಂಡವಾಳ ಸಾಲಕ್ಕೆ ಸಂಬಂಧಿಸಿ ಸಾಲ ನೀಡಿಕೆ ಸಂಸ್ಥೆಗಳು ಮೂರು ತಿಂಗಳ ಅವಧಿಗೆ ಬಡ್ಡಿ ಮರುಪಾವತಿಯನ್ನು ಮುಂದೂಡಲು ಅವಕಾಶ ನೀಡಬಹುದಾಗಿದೆ.

ಮೂಲಭೂತವಾಗಿ, ಎಲ್ಲ ಕಾರ್ಯನಿರ್ವಹಣೆ ಬಂಡವಾಳ ಸಾಲದ ಬಡ್ಡಿ ಪಾವತಿಯ ಮೇಲೆ ಮೂರು ತಿಂಗಳ ತಾತ್ಕಾಲಿಕ ತಡೆಯುವಿಕೆಗೆ ಸಾಲ ನೀಡಿಕೆ ಸಂಸ್ಥೆಗಳಿಗೆ ಅನುಮತಿ ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News