ಕೊರೋನ ವಿರುದ್ಧ ಸಮರಕ್ಕೆ ಭಾರತ ಸೇರಿ 64 ದೇಶಗಳಿಗೆ ಅಮೆರಿಕ ನೆರವು

Update: 2020-03-28 04:18 GMT

ವಾಷಿಂಗ್ಟನ್, ಮಾ.28: ಕೊರೋನ ವೈರಸ್ ಸಾಂಕ್ರಾಮಿಕ ವಿರುದ್ಧ ಸಂಘಟಿತ ಹೋರಾಟ ನಡೆಸುವ ಸಲುವಾಗಿ ಅಮೆರಿಕ 64 ದೇಶಗಳಿಗೆ 174 ದಶಲಕ್ಷ ಡಾಲರ್ ನೆರವು ಘೋಷಿಸಿದೆ. ಭಾರತದಲ್ಲಿ ಈ ಮಹಾಮಾರಿ ವಿರುದ್ಧದ ಹೋರಾಟಕ್ಕೆ 2.9 ದಶಲಕ್ಷ ಡಾಲರ್ ನೆರವನ್ನು ಅಮೆರಿಕ ಪ್ರಕಟಿಸಿದೆ. ಕಳೆದ ಫೆಬ್ರವರಿಯಲ್ಲಿ ಅಮೆರಿಕ 100 ದಶಲಕ್ಷ ಡಾಲರ್ ಸಹಾಯ ಘೋಷಿಸಿತ್ತು.

ಹೊಸದಾಗಿ ಘೋಷಿಸಿದ ನೆರವು ಅಮೆರಿಕದ ವಿಸ್ತತ ಜಾಗತಿಕ ಸ್ಪಂದನ ಪ್ಯಾಕೇಜ್‌ನ ಭಾಗವಾಗಿರುತ್ತದೆ. ರೋಗ ನಿಯಂತ್ರಣ ಮತ್ತು ತಡೆ ಕೇಂದ್ರ (ಸಿಡಿಸಿ) ಸೇರಿದಂತೆ ಹಲವು ಇಲಾಖೆಗಳಿಗೆ ಮತ್ತು ಏಜೆನ್ಸಿಗಳಿಗೆ ಈ ನೆರವು ಲಭ್ಯವಾಗಲಿದೆ. ಈ ಜಾಗತಿಕ ಮಹಾಮಾರಿಯ ಕರಾಳ ಛಾಯೆ ಕಂಡುಬಂದಿರುವ 64 ದೇಶಗಳು ಈ ನೆರವು ಪಡೆಯಲಿವೆ.

ಭಾರತದಲ್ಲಿ ಪ್ರಯೋಗಾಲಯ ವ್ಯವಸ್ಥೆ ಅಭಿವೃದ್ಧಿ, ಹೊಸ ಪ್ರಕರಣಗಳನ್ನು ಪತ್ತೆ ಮಾಡುವುದನ್ನು ಹೆಚ್ಚು ಸಕ್ರಿಯಗೊಳಿಸುವುದು ಹಾಗೂ ಘಟನೆ ಆಧರಿತ ಸರ್ವೇಕ್ಷಣೆ ಮತ್ತು ಸ್ಪಂದನ ಹಾಗೂ ಸರ್ವ ಸನ್ನದ್ಧತೆಗೆ ತಾಂತ್ರಿಕ ಪರಿಣತಿ ಒದಗಿಸುವ ಸಲುವಾಗಿ ಭಾರತಕ್ಕೆ 2.9 ದಶಲಕ್ಷ ಡಾಲರ್ ನೆರವು ನೀಡಲಾಗುತ್ತಿದೆ ಎಂದು ರಕ್ಷಣಾ ಇಲಾಖೆ ಹೇಳಿದೆ.

ಇದು ಭಾರತದಲ್ಲಿ 1.4 ಶತಕೋಟಿ ಮಂದಿಗೆ ಆರೋಗ್ಯ ನೆರವು ನೀಡಲು ತಳಹದಿ ನಿರ್ಮಿಸಲು ನೆರವಾಗಲಿದೆ. ಕಳೆದ 20 ವರ್ಷಗಳಲ್ಲಿ ಭಾರತಕ್ಕೆ ಈ ನಿಟ್ಟಿನಲ್ಲಿ ನೀಡಿದ್ದ 2.80 ಶತಕೋಟಿ ಡಾಲರ್ ನೆರವಿನ ಜತೆಗೆ ಇದೀಗ ಹೊಸ ನೆರವು ಘೋಷಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ಈ ಹೊಸ ನೆರವು ಅಮೆರಿಕದ ಜಾಗತಿಕ ಆರೋಗ್ಯ ನಾಯಕತ್ವಕ್ಕೆ ಪೂರಕವಾಗಲಿದೆ ಎಂದು ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್‌ನ್ಯಾಶನಲ್ ಡೆವಲಪ್‌ಮೆಂಟ್ (ಯುಎಸ್‌ಎಐಡಿ) ಉಪ ಆಡಳಿತಾಧಿಕಾರಿ ಬೋನ್ ಗ್ಲಿಕ್ ಬಣ್ಣಿಸಿದ್ದಾರೆ.

ಹಲವು ದಶಕಗಳಿಂದ ಅಮೆರಿಕ, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಅತಿಹೆಚ್ಚು ದ್ವಿಪಕ್ಷೀಯ ನೆರವು ನೀಡುವ ರಾಷ್ಟ್ರವಾಗಿತ್ತು. ಅಮೆರಿಕ ಜೀವಗಳನ್ನು ರಕ್ಷಿಸಿದೆ. ರೋಗದಿಂದ ಬಳಲುವ ಜನರಿಗೆ ಸುರಕ್ಷೆ ಒದಗಿಸಿದೆ. ಆರೋಗ್ಯ ಸಂಸ್ಥೆಗಳನ್ನು ನಿರ್ಮಿಸಿದೆ ಹಾಗೂ ಸಮುದಾಯ ಹಾಗೂ ದೇಶಗಳಲ್ಲಿ ಸ್ಥಿರತೆಗೆ ಬೆಂಬಲ ನೀಡಿದೆ ಎಂದು ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News