ಫ್ಯಾಕ್ಟ್ ಚೆಕ್: ಭಾರತದಲ್ಲಿ ಕೊರೋನ ಸೋಂಕು 3ನೇ ಹಂತ ತಲುಪಿದೆ ಎಂಬ ಸುದ್ದಿ ತಪ್ಪು

Update: 2020-03-28 15:24 GMT

ಭಾರತದಲ್ಲಿ ಕೊರೋನ ಸೋಂಕು ಹರಡುವಿಕೆ ಮೂರನೇ ಹಂತ ಅಂದರೆ ಸಾಮೂಹಿಕ ಹರಡುವಿಕೆಯ ಹಂತಕ್ಕೆ ತಲುಪಿದೆ ಎಂದು ಪ್ರಮುಖ ಸುದ್ದಿ ತಾಣ thequint.com ಮಾಡಿದ್ದ ವರದಿ 'ತಪ್ಪು' ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Community transmission ಅಥವಾ ಸಾಮೂಹಿಕ ಹರಡುವಿಕೆ ಅಂದರೆ ಯಾವುದೇ ಪ್ರಯಾಣ ಮಾಡದ ವ್ಯಕ್ತಿಗೆ ಸ್ಥಳೀಯ ಮೂಲಗಳಿಂದಲೇ ಕಾಯಿಲೆ ಹರಡುವುದು ಎಂದರ್ಥ. ಅಂದರೆ ಸೋಂಕಿನ ಹರಡುವಿಕೆ ತೀವ್ರ ಸ್ವರೂಪಕ್ಕೆ ತಲುಪಿದೆ ಎಂದು ಇದರ ಅರ್ಥ.

ಡಾ. ಗಿರಿಧರ್ ಗ್ಯಾನಿ ಅವರನ್ನು ಉಲ್ಲೇಖಿಸಿ thequint ಈ ವರದಿ ಮಾಡಿತ್ತು. ಡಾ. ಗಿರಿಧರ್ ಅವರು  ನೀತಿ ಆಯೋಗ ರಚಿಸಿರುವ ಕೋವಿಡ್ 19 ಹಾಸ್ಪಿಟಲ್ ಟಾಸ್ಕ್ ಫೋರ್ಸ್ ನ ಮುಖ್ಯ ವೈದ್ಯ ಎಂದು thequint ಹೇಳಿತ್ತು. ಆ ವರದಿಯ ಪ್ರಕಾರ ಈಗಾಗಲೇ ದೇಶದಲ್ಲಿ ಮೂರನೇ ಹಂತ ಅಂದರೆ ಸಾಮೂಹಿಕ ಹರಡುವಿಕೆ ಶುರುವಾಗಿದೆ. ಆದರೆ ಅದನ್ನು ಸರಕಾರ ಬಹಿರಂಗಪಡಿಸುತ್ತಿಲ್ಲ.

ಈ ಬಗ್ಗೆ ani ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಡಾ. ಗಿರಿಧರ್ ತನ್ನ ಹೇಳಿಕೆಯನ್ನು thequint ವೈಭವೀಕರಿಸಿ ವರದಿ ಮಾಡಿದೆ. ಲಭ್ಯ ವರದಿಗಳ ಪ್ರಕಾರ ಭಾರತ ಇನ್ನೂ ಮೂರನೇ ಹಂತಕ್ಕೆ ತಲುಪಿಲ್ಲ ಎಂದು ನಾನು ಹೇಳಿದ್ದೆ. ಅದೃಷ್ಟವಶಾತ್ ಇಂದಿನವರೆಗೂ ಸೋಂಕಿತರ ಸಂಖ್ಯೆಯಲ್ಲಿ ಸಾಮೂಹಿಕ ಹರಡುವಿಕೆಯಲ್ಲಿ ಆಗುವಂತೆ ಭೌಗೋಳಿಕವಾಗಿ ಅಥವಾ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಇನ್ನೂ ವಿಶೇಷ ಎಂದರೆ, ಡಾ. ಗಿರಿಧರ್ ಗ್ಯಾನಿ ಅವರು ವೃತ್ತಿಯಿಂದ ವೈದ್ಯರಲ್ಲ. ಅವರು ಇಲೆಕ್ಟ್ರಿಕ್ ಇಂಜಿನಿಯರಿಂಗ್ ಪದವೀಧರ ಹಾಗು ಮ್ಯಾನೇಜ್ಮೆಂಟ್ ನಲ್ಲಿ ಪಿಎಚ್ಡಿ ಮಾಡಿ ಈಗ ಅಸೋಸಿಯೇಷನ್ ಆಫ್ ಹೆಲ್ತ್ ಕೇರ್ ಪ್ರೊವೈಡರ್ಸ್ ( ಇಂಡಿಯಾ) ಇದರ ಮಹಾ ನಿರ್ದೇಶಕರಾಗಿದ್ದಾರೆ.

ಈ ಬಗ್ಗೆ   ಅಸೋಸಿಯೇಷನ್ ಆಫ್ ಹೆಲ್ತ್ ಕೇರ್ ಪ್ರೊವೈಡರ್ಸ್ ( ಇಂಡಿಯಾ) ಕೂಡ ಟ್ವೀಟ್ ಮಾಡಿ thequint ಮಾಡಿರುವ ವರದಿ ಸರಿಯಿಲ್ಲ. ಡಾ ಗಿರಿಧರ್ ಅವರು " ಭಾರತ ಇನ್ನೂ ಮೂರನೇ ಹಂತಕ್ಕೆ ತಲುಪಿಲ್ಲ, ಆದರೆ ಅದಕ್ಕಾಗಿ ತಯಾರಿ ಮಾಡಿಕೊಂಡರೆ ಉತ್ತಮ" ಎಂದಷ್ಟೇ ಹೇಳಿದ್ದರು ಎಂದು ಅದು ಟ್ವೀಟ್ ನಲ್ಲಿ  ಹೇಳಿದೆ.

ನೀತಿ ಆಯೋಗ ರಚಿಸಿರುವ ಆರೋಗ್ಯ ತಜ್ಞರ ಸಮಿತಿಯಲ್ಲೂ ಡಾ. ಗಿರಿಧರ್ ಅವರು ಇಲ್ಲ.

ಈ ಸ್ಪಷ್ಟೀಕರಣಗಳು ಬಂದ ಬಳಿಕ thequint ಕೂಡ ತನ್ನ ವರದಿಯ ಶೀರ್ಷಿಕೆಯನ್ನು India May be in Stage 3: COVID-19 Hospital Task Force Convener ( ಭಾರತ ಕೋವಿಡ್  ಮೂರನೇ ಹಂತಕ್ಕೆ ತಲುಪಿರಬಹುದು : ಹಾಸ್ಪಿಟಲ್ ಟಾಸ್ಕ್ ಫೋರ್ಸ್ ಸಂಚಾಲಕ ) ಎಂದು ಬದಲಾಯಿಸಿದೆ.

thequint ಸುದ್ದಿಯನ್ನು ಉಲ್ಲೇಖಿಸಿ 'ವಾರ್ತಾ ಭಾರತಿ' ಈ ಬಗ್ಗೆ ವರದಿ ಮಾಡಿತ್ತು. ಅದರ ಶೀರ್ಷಿಕೆಯನ್ನೂ  ಈಗ ಬದಲಾಯಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News