ಬೆಂಗಳೂರು: ನಗರದ 31ಕಡೆಗಳಲ್ಲಿ ಫೀವರ್ ಕ್ಲಿನಿಕ್ ಪ್ರಾರಂಭ

Update: 2020-03-29 13:45 GMT

ಬೆಂಗಳೂರು, ಮಾ.29: ಕೊರೋನ ಸೋಂಕನ್ನು ಪರಿಣಾಮಕಾರಿಯಾಗಿ ತಡೆಯುವ ನಿಟ್ಟಿನಲ್ಲಿ ನಗರದ 31 ಕಡೆಗಳಲ್ಲಿ ಫೀವರ್ ಕ್ಲಿನಿಕ್‍ಗಳು ಇಂದಿನಿಂದ ಪ್ರಾರಂಭಗೊಂಡಿದ್ದು, ಬೆಳಗ್ಗೆ 9ರಿಂದ ಸಂಜೆ 4.30ರವರೆಗೆ ಕಾರ್ಯನಿರ್ವಹಿಸಲಿವೆ.

ಈ ಫೀವರ್ ಕ್ಲಿನಿಕ್‍ಗಳಲ್ಲಿ ಜ್ವರ, ಕಫ ಹಾಗೂ ಸ್ಕ್ರೀನಿಂಗ್ ಟೆಸ್ಟ್ ಮಾಡಿಸಲು ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ಕ್ಲಿನಿಕ್‍ನಲ್ಲೂ ವೈದ್ಯಾಧಿಕಾರಿ, ಶುಶ್ರೂಷಕಿ, ಹಿರಿಯ ಹಾಗೂ ಕಿರಿಯ ಆರೋಗ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಫೀವರ್ ಕ್ಲಿನಿಕ್‍ಗಳಲ್ಲಿ ನೇರವಾಗಿ ರೋಗಿಗಳ ಪರೀಕ್ಷೆ ಮಾಡುವವರಿಗೆ ಪಿಪಿಇ ಕಿಟ್ ನೀಡಲಾಗಿದೆ. ತಲೆಯಿಂದ ಕಾಲಿನವರೆಗೂ ಸುರಕ್ಷಾ ಕವಚದಂತಿರುವ ಡ್ರೆಸ್ ಒದಗಿಸಲಾಗಿದ್ದು, ಇದನ್ನು ಧರಿಸಿಯೇ ರೋಗಿಗಳಿಗೆ ಪರೀಕ್ಷೆ ಮಾಡುವುದು ಕಡ್ಡಾಯ. ಕೊರೋನ ಅಲ್ಲದೆ ಬೇರೆ ಸಣ್ಣ ಪುಟ್ಟ ಖಾಯಿಲೆಗಳಿಗೂ ಜನತೆ ಫೀವರ್ ಕ್ಲಿನಿಕ್‍ಗೆ ಬರಬಹುದಾಗಿದೆ.

ಕ್ಲಿನಿಕ್‍ಗೆ ಬರುವ ರೋಗಿಗಳಿಗೆ ಜ್ವರ ಇದ್ದಾಗ ಅವರಿಗೆ ಅಗತ್ಯವಾದ ಪ್ಯಾರಾಸಿಟಮಾಲ್, ಓಆರ್ ಎಸ್ ಮತ್ತು ನೆಗಡಿ ಔಷಧಿಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ. ಸಾಮಾನ್ಯ ಜ್ವರವಾದರೆ ಈ ಔಷಧಿಗಳನ್ನು ನೀಡಿ ಸ್ವಲ್ಪ ದಿನ ಕಾದು ನೋಡುವಂತೆ ಸೂಚಿಸಲಾಗುವುದು. ಇದೇ ಸಮಯದಲ್ಲಿ ಆ ರೋಗಿಯ ಸಂಪೂರ್ಣ ವಿವರ ಪಡೆಯಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News