ರಾಜ್ಯದಲ್ಲಿ ಪೊಲೀಸ್ ಅತಿರೇಕ ಕೊನೆಯಾಗಲಿ: ಎಸ್‌ಡಿಪಿಐ

Update: 2020-03-29 17:18 GMT

ಬೆಂಗಳೂರು, ಮಾ.29: ಲಾಕ್‌ಡೌನ್ ಸಂದರ್ಭ ಪೋಲೀಸರು ನಡೆಸುತ್ತಿರುವ ಅತಿರೇಕ ಹಾಗೂ ಕ್ರೌರ್ಯದ ಬಗ್ಗೆ ಈಗಾಗಲೇ ರಾಜ್ಯದ ಜನತೆ ಸಾಕ್ಷಿಯಾಗಿದ್ದು ರಾಜ್ಯಸರಕಾರ ಮೂಕವೀಕ್ಷಕನಾಗಿರುವುದು ಖಂಡನೀಯ ಎಂದು ಎಸ್‌ಡಿಪಿಐ ರಾಜ್ಯ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

ರವಿವಾರ ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಪೊಲೀಸರ ಏಟಿನಿಂದ ಲಚ್ಚ ನಾಯಕ್ ಎಂಬವರು ಮರಣ ಹೊಂದಿರುವುದು ಶೋಚನೀಯ. ಬೆಂಗಳೂರಿನ ಭೂಪಸಂದ್ರದ ವ್ಯಕ್ತಿಯೋರ್ವನಿಗೆ ನಕಲಿ ಎನ್‌ಕೌಂಟರ್ ಮಾಡಿದ ಪೊಲೀಸ್ ಅಧಿಕಾರಿ ಕಾನೂನನ್ನು ಕೈಗೆತ್ತಿಕೊಂಡಿದ್ದಾರೆ. ಅದೇ ಯುವಕನ ಮೇಲೆ ಸಾರ್ವಜನಿಕವಾಗಿ ದೌರ್ಜನ್ಯ ನಡೆಸಿದ ಇಬ್ಬರು ಪೊಲೀಸರ ಮೇಲೆ ಪ್ರಕರಣ ದಾಖಲಿಸದೆ ಬಿಟ್ಟಿರುವುದೂ ನ್ಯಾಯದ ಅಣಕವಾಗಿದೆ. ಹಾನಗಲ್ನಲ್ಲಿ ಹಿಟ್ಟಿಗಾಗಿ ಬಂದ ಹಿರಿಯ ವ್ಯಕ್ತಿಯ ಮೇಲೆ ಪೊಲೀಸರು ಮನಬಂದಂತೆ ಥಳಿಸಿದ್ದಾರೆ. ಯಾವುದೇ ಕಾರಣವನ್ನೂ ಕೇಳದೆ ಜನರಿಗೆ ಲಾಠಿಯಿಂದ ಥಳಿಸುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ. ಕೆಲವು ಕಡೆಗಳಲ್ಲಿ ಪೊಲೀಸರು ವಾಹನಗಳನ್ನು ಕೆಡಹುವ ಘಟನೆಗಳೂ ವರದಿಯಾಗಿವೆ.

ಈ ಎಲ್ಲಾ ಘಟನೆಗಳು ಪೊಲೀಸ್ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಅಲ್ಲದೆ ರಾಜ್ಯದ ಜನರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಕೊರೋನ ಅಪಾಯದ ನಡುವೆಯೂ ಲಾಕ್‌ಡೌನ್ ನಿರ್ವಹಿಸಲು ಶ್ರಮಿಸುತ್ತಿರುವ ಪೊಲೀಸರ ತ್ಯಾಗ, ಶ್ರಮ ಶ್ಲಾಘನೀಯವಾದರೂ, ಲಾಕ್‌ಡೌನ್ ನೆಪದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಪೊಲೀಸರ ವರ್ತನೆ ದಂಡನೀಯ. ಲಾಠಿಯನ್ನು ಬಿಟ್ಟು ಸಭ್ಯತೆಯಿಂದ ಕರ್ತವ್ಯ ನಿರ್ವಹಿಸುವಂತೆ ರಾಜ್ಯ ಸರಕಾರ ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು. ವರದಿಯಾಗಿರುವ ಪ್ರತಿಯೊಂದು ಪೊಲೀಸ್ ಅತಿರೇಕಗಳ ವಿರುದ್ಧ ರಾಜ್ಯ ಸರಕಾರ ಪ್ರಕರಣ ದಾಖಲಿಸಿ ತನಿಖೆಗೆ ಒಳಪಡಿಸಬೇಕು ಎಂದು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News