ಬಿಬಿಎಂಪಿ ಬಜೆಟ್ ಮಂಡನೆ ಮುಂದೂಡಿಕೆ, ಕರಗ ರದ್ದು

Update: 2020-03-29 17:20 GMT

ಬೆಂಗಳೂರು, ಮಾ.29: ಕೊರೋನ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿಯು 2020-21ನೇ ಸಾಲಿನ ಬಜೆಟ್ ಮಂಡನೆಯನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಮೇಯರ್ ಗೌತಮ್ ಕುಮಾರ್ ತಿಳಿಸಿದ್ದಾರೆ.

ಕೊರೋನ ವೈರಸ್ ಸೋಂಕು ನಿಯಂತ್ರಣವೊಂದೇ ನಮ್ಮ ಆದ್ಯತೆ. ಈ ಸೋಂಕು ಹರಡುವಿಕೆ ಹತೋಟಿಗೆ ಬರುವವರೆಗೂ ಪಾಲಿಕೆ ವತಿಯಿಂದ ನಡೆಯಬೇಕಾದ ಎಲ್ಲ ಕಾರ್ಯಕ್ರಮಗಳನ್ನೂ ರದ್ದುಪಡಿಸಲು ನಿರ್ಧರಿಸಿದ್ದೇವೆ. ತಿಂಗಳ ಅಂತ್ಯದಲ್ಲಿ ನಡೆಯಬೇಕಾಗಿದ್ದ ನಗರದ ಐತಿಹಾಸಿಕ ಕರಗ ಮಹೋತ್ಸವವನ್ನೂ ರದ್ದು ಪಡಿಸಲು ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

ಮಾ. 30ರಂದು ಬಿಬಿಎಂಪಿ ಬಜೆಟ್ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದೆವು. ಈ ಸಭೆ ನಡೆಸಲು ಕೌನ್ಸಿಲ್ ಸಭೆಯಲ್ಲಿ ಮೂರನೇ ಎರಡರಷ್ಟು ಸದಸ್ಯರು ಹಾಜರಿರಬೇಕು. ಸದ್ಯದ ಪರಿಸ್ಥಿತಿಯಲ್ಲಿ ಅಷ್ಟೊಂದು ಜನರನ್ನು ಒಂದೇ ಕಡೆ ಸೇರಿಸಿ ಸಭೆ ನಡೆಸುವುದು ಅಸಾಧ್ಯ. ಕೊರೋನ ಸೋಂಕು ಹಬ್ಬುವುದು ಹತೋಟಿಗೆ ಬಂದ ಬಳಿಕ ಬಜೆಟ್ ಮಂಡಿಸಲಿದ್ದೇವೆ ಎಂದು ತಿಳಿಸಿದರು.

ತಜ್ಞರ ಸಮಿತಿ ಸಭೆ ನಡೆಸಲು ಸಾಧ್ಯವಾಗಿಲ್ಲ. ಕೆಂಪೇಗೌಡ ದಿನಾಚರಣೆಯನ್ನು ನಿಗದಿತ ದಿನದಂದು ನಡೆಸಲು ಸಾಧ್ಯವಿಲ್ಲ. ಕೊರೊನ ನಿಯಂತ್ರಣಕ್ಕೆ ಬಂದ ಬಳಿಕ ಈ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳಲಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಬಿಬಿಎಂಪಿ ಆಯುಕ್ತ ಬಿ. ಹೆಚ್ ಅನಿಲ್ ಕುಮಾರ್ ಮಾತನಾಡಿ, ಬಜೆಟ್ ಮಂಡನೆ ಮುಂದೂಡುವುದು ಅನಿವಾರ್ಯ. ಇದರಿಂದ ಪಾಲಿಕೆಯ ಸಿಬ್ಬಂದಿಗೆ ಸಂಬಳ ಪಾವತಿಗೆ ಯಾವುದೇ ತೊಡಕು ಉಂಟಾಗದು ಎಂದು ತಿಳಿಸಿದರು.

ಇಂದಿನ ಪರಿಸ್ಥಿತಿಯಲ್ಲಿ ಲಕ್ಷಾಂತರ ಜನರು ಒಂದೇ ಕಡೆ ಸೇರುವಂತಹ ಕರಗ ಮಹೋತ್ಸವವನ್ನು ಹಮ್ಮಿಕೊಳ್ಳಲು ಸಾಧ್ಯವೇ ಇಲ್ಲ. ಹಾಗಾಗಿ ಉತ್ಸವವನ್ನು ರದ್ದುಪಡಿಸಲು ಕ್ರಮ ಕೈಗೊಂಡಿದ್ದೇವೆ ಎಂದರು.

ಕೆಂಪೇಗೌಡ ದಿನಾಚರಣೆ ಮುಂದೂಡಿಕೆ...

ಎ.8ರಂದು ನಡೆಯುವ ಕರಗ ಮಹೋತ್ಸವದ ದಿನವೇ ಈ ಬಾರಿ ನಾಡಪ್ರಭು ಕೆಂಪೇಗೌಡ ದಿನಾಚರಣೆ ನಡೆಸಲು ಪಾಲಿಕೆ ನಿರ್ಧರಿಸಿತ್ತು. ಅಂದು ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಬೇಕಿತ್ತು. ಅರ್ಹರ ಆಯ್ಕೆ ಸಲುವಾಗಿ ಮೇಯರ್ ಅವರು ತಜ್ಞರ ಸಮಿತಿಯನ್ನೂ ರಚಿಸಿದ್ದರು. ಆದರೆ ಕೊರೋನ ವೈರಸ್ ಸೋಂಕು ಹರಡುವಿಕೆ ಕಾರಣದಿಂದಾಗಿ ಈ ಸಮಾರಂಭವನ್ನೇ ಬಿಬಿಎಂಪಿ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News