ಕೊರೋನ ಮತ್ತು ಮಾಧ್ಯಮದ ಕೋಮುವಾದಿ ನಡೆ

Update: 2020-03-29 17:47 GMT

ಕೊನೆಯಲ್ಲಿ ಒಂದು ಆಶಯ

ಎಲ್ಲವನ್ನು ಕೋಮುವಾದಿ ಕಣ್ಣುಗಳಿಂದ ನೋಡುತ್ತ ಜನರನ್ನು ವಿಭಜಿಸುವ ಕಾರ್ಯಗಳು ಪತ್ರಿಕೆಗಳಿಂದ ಮುಂದುವರಿಯದಿರಲೆಂದು ನಾನಂತು ಬಯಸುತ್ತೇನೆ. ಜೊತೆಗೆ ಒಳ್ಳೆಯ ಜನ ಈ ಸಂದರ್ಭದಲ್ಲಿ ಮೌನ ಮುರಿಯದೇ ಹೋದರೆ ಮುಂದಿನ ದಿನಗಳು ಇನ್ನಷ್ಟು ಕರಾಳವಾಗಲಿವೆ. 


ಶಾಂತಿ ಜಪಿಸುವ ತುಟಿಗಳು ಬಂದೂಕು ಎದುರು ಕ್ಷಣ ಕಂಪಿಸಿದವು, ನೆಲದ ಮೇಲಿನ ರಕ್ತ ನೋಡಿ ತಲೆ ಎತ್ತಿ ಶಾಂತಿ ಹಾಡು ಗುನುಗಿದವು. ಸುದ್ದಿ ಪತ್ರಿಕೆಗಳಿಗೆ ಒಂದು ಸಾಮಾಜಿಕ ಜವಾಬ್ದಾರಿ ಇರುತ್ತದೆ, ಇರಬೇಕು ಕೂಡ. ಆ ಕಾರಣದಿಂದಲೇ ಪತ್ರಿಕಾ ನೀತಿ ಸಂಹಿತೆ ರೂಪುಗೊಂಡಿದೆ. ಯಾವಾಗಲೂ ಪತ್ರಿಕೆಗಳಿಗೆ ಜನರು, ಅವರ ಬದುಕು-ಭವಿಷ್ಯವೇ ಮುಖ್ಯವಾಗಬೇಕು. ಆದರೆ ಇಂದು ಅವು ಉಳ್ಳವರ ಸ್ವತ್ತಾಗಿವೆ. ಅವುಗಳಿಗೆ ಸಾಮಾಜಿಕ ಜವಾಬ್ದಾರಿಗಿಂತ ಪ್ರಭುತ್ವದ ಬಾಲ ಬಡಿಯುವುದೇ ಮುಖ್ಯವಾಗಿದೆ. ಅದಕ್ಕಾಗಿಯೇ ತಾವೇ ಮುಂದೆ ನಿಂತು ಸಾಮಾಜಿಕ ಸ್ವಾಸ್ಥ್ಯ ಕದಡುವ ಕಾರ್ಯಗಳಿಗೆ ಕೈಹಾಕತೊಡಗಿವೆ. ಈ ನೀತಿಯಿಂದಾಗಿಯೇ ಮತೀಯ ವಿಷ ಹರಡುವ ಕಾರ್ಯಗಳು ಮಹತ್ವ ಪಡೆಯುತ್ತಿವೆ. ಇದಕ್ಕೆ ಕನ್ನಡದ ಕೆಲ ಪತ್ರಿಕೆಗಳೂ ಹೊರತಾಗಿಲ್ಲದಿರುವ ದುರಂತ ನಮ್ಮ ಎದುರಿಗೆ ಇದೆ. ಇದು ಕೆಲವು ವರ್ಷಗಳ ಹಿಂದಿನ ಮಾತು. ವಿಶ್ವೇಶ್ವರ ಭಟ್ ಅವರು ವಿಜಯ ಕರ್ನಾಟಕ ದಿನಪತ್ರಿಕೆಯ ಸಂಪಾದಕರಾಗಿದ್ದ ಕಾಲ ಅದು. ಒಂದಿನ ಒಂದಿಡೀ ಪುಟವನ್ನು ಫೋಟೊಗಳು ತುಂಬಿಕೊಂಡಿದ್ದವು. ಪತ್ರಿಕೆಯ ಛಾಯಾಚಿತ್ರಗಾರ ಕ್ಲಿಕ್ಕಿಸಿದ ಚಿತ್ರಗಳು ಅವು. ಈ ಫೋಟೊಗಳ ವಿಶೇಷ ಇಷ್ಟು. ಉತ್ತರ ಕರ್ನಾಟಕದ ಕೂಲಿ ಕಾರ್ಮಿಕ ಕುಟುಂಬವೊಂದು ಬೆಂಗಳೂರಿಗೆ ವಲಸೆ ಬಂದಿದೆ.

ಈ ಕಡೆಯ ಕುಟುಂಬಗಳು ವಲಸೆ ಹೋಗುವಾಗ ಕೆಲವು ದಿನಗಳಿಗೆ ಆಗುವಷ್ಟು ಬುತ್ತಿಗಂಟು ಕಟ್ಟಿಕೊಂಡು ಬರುತ್ತವೆ. ಆ ಕುಟುಂಬ ಬೆಂಗಳೂರಿಗೆ ಬಂದು ನಡು ಮಧ್ಯಾಹ್ನ ತಮ್ಮ ಎಲ್ಲ ಸಾಮಾನುಗಳನ್ನು ತಲೆಬುಡ ಇಟ್ಟುಕೊಂಡು ರೈಲ್ವೆ ನಿಲ್ದಾಣದಲ್ಲಿ ನಿದ್ದೆ ಹೋಗಿದೆ. ಅಲ್ಲಿಗೆ ಬಂದ ನಾಯಿಯೊಂದು ಕಳ್ಳತನದಿಂದ ನಿದ್ದೆಯಲ್ಲಿದ್ದ ಅವರಿಗೆ ಗೊತ್ತಾಗದ ಹಾಗೆ ಬಲು ಚಾಲಾಕಿತನದಿಂದ ಬುತ್ತಿಗಂಟು ಎಳೆದುಕೊಂಡು ತಿನ್ನುತ್ತಿರುವ ಚಿತ್ರಗಳನ್ನು ಆ ಛಾಯಾಚಿತ್ರಗಾರ ಸೆರೆ ಹಿಡಿದಿದ್ದ. ನಾಯಿ ಬಂದದ್ದು, ಬುತ್ತಿಗಂಟು ಎಳೆಯುತ್ತಿರುವುದು, ಸ್ವಲ್ಪ ದೂರ ಎಳೆತಂದು ತಿನ್ನುತ್ತಿರುವ ದೃಶ್ಯಗಳ ಫೋಟೊ. ಫೋಟೊಗ್ರಫಿ ಎಷ್ಟೇ ಚೆನ್ನಾಗಿದ್ದರೂ ಪ್ರಕಟಿಸಿದ ಸಂಪಾದಕನ ಅಭಿರುಚಿ ಅತ್ಯಂತ ಕೆಳಮಟ್ಟದಾಗಿದ್ದರಿಂದ ಅವು ಪ್ರಕಟವಾಗಿದ್ದವು ಎಂದೂ ನನಗೆ ಅನಿಸಿತು. ಅಂತಹ ಫೋಟೊ ತಂದು ಮುಂದಿಟ್ಟಾಗ ಒಂದು ಕ್ಷಣ ಅವಕ್ಕಾಗಿ ಎಂತಹ ಕೆಲಸ ಮಾಡಿಬಿಟ್ಟೆ ನೀನು? ಇವನ್ನು ಫೋಟೊ ಕ್ಲಿಕ್ ಮಾಡುವ ಬದಲು ಬಡಪಾಯಿ ಕುಟುಂಬದ ಬುತ್ತಿಗಂಟು ತಿನ್ನಲು ಬಂದ ನಾಯಿಯನ್ನು ಹೊಡೆದು ಆಚೆಗಟ್ಟಿ ಆ ಕುಟುಂಬದವರನ್ನು ಎಬ್ಬಿಸಿ ಅವರ ಬದುಕಿನ ತುತ್ತು ಉಳಿಸಿಬರಬೇಕಿತ್ತು ಎಂದು ಹೇಳಬೇಕಿತ್ತು. ಆದರೆ ಅದೊಂದು ಸಾಹಸ ಮತ್ತು ಅದ್ಭುತ ಪ್ರತಿಭಾವಂತಿಕೆ ಎಂದು ಭಾವಿಸಿದರೇನೋ ಭಟ್ಟರು. ಆ ನಾಯಿ ಬುತ್ತಿಗಂಟು ಎಳೆದು ತಿನ್ನುವ ಕ್ರಿಯೆಗಳ ಪ್ರತಿಕ್ಷಣದ ಫೋಟೊಗಳನ್ನು ಇಡೀ ಪುಟದಲ್ಲಿ ಅಚ್ಚಾಗುವಂತೆ ನೋಡಿಕೊಂಡಿದ್ದರು.

ನನಗೆ ಆ ಪತ್ರಿಕೆ ಬಗ್ಗೆ ವಾಕರಿಕೆ ಅನ್ನಿಸಿದ್ದು ಆಗಲೇ. ಇಥಿಯೋಪಿಯದಲ್ಲಿ ಹಸಿವೆಯಿಂದ ಬಳಲುವ ಮಗುವೊಂದನ್ನು ಹದ್ದು ಕುಕ್ಕಿ ತಿನ್ನುವ ಚಿತ್ರವನ್ನು ಕೆವಿನ್ ಕಾರ್ಟರ್ ಸೆರೆ ಹಿಡಿದಿದ್ದು, ಆ ಫೋಟೊಗ್ರಫಿಗೆ ಪ್ರಶಸ್ತಿ ಬಂದದ್ದು, ಮುಂದೆ ಕುಕ್ಕಿ ತಿನ್ನುವ ಹದ್ದನ್ನು ಓಡಿಸದೆ ಪೋಟೊಗ್ರಫಿ ಮಾಡಿದ ಕಾರ್ಟರ್‌ಗೆ ಪಾಪಪ್ರಜ್ಞೆ ಕಾಡಿ ಆತ್ಮಹತ್ಯೆಗೆ ಶರಣಾಗಿದ್ದು ನನ್ನ ಪೀಳಿಗೆಯ ಗೆಳೆಯರಲ್ಲಿ ಅಚ್ಚೊತ್ತಿತ್ತು. ಎಷ್ಟೋ ಬಾರಿ ನಮ್ಮ ಚರ್ಚೆಯಲ್ಲಿ ಹಾದು ಹೋಗುತ್ತಿತ್ತು. ಆ ದಿನದ ಫೋಟೊಗಳನ್ನು ನೋಡಿ ನನಗೆ ನೆನಪಾಗಿತ್ತು. ಸಾಮಾಜಿಕ ಜವಾಬ್ದಾರಿ,ಮನುಷ್ಯತ್ವ ಮರೆತವರಿಂದ ಮಾತ್ರ ಇಂತಹ ಬೇಜವಾಬ್ದಾರಿಗಳು ಸಂಭವಿಸುತ್ತಿರುತ್ತವೆ. ವಿಮಾನದಲ್ಲಿ ಬ್ಲಾಕ್ ಬಾಕ್ಸ್ ಇರುತ್ತದೆ. ದುರಂತ ಸಂಭವಿಸಿದಾಗ ಬ್ಲ್ಯಾಕ್ ಬಾಕ್ಸ್ ಆ ದುರಂತದ ಚಿತ್ರಗಳನ್ನು ಸೆರೆ ಹಿಡಿಯುತ್ತದೆ. ಕಲಾವಿದನ ಕೆಲಸ ಬರೀ ದುರಂತದ ಚಿತ್ರಗಳನ್ನು ಸೆರೆ ಹಿಡಿಯುವುದಲ್ಲ. ಸಾಧ್ಯವಿದ್ದಷ್ಟು ಆ ದುರಂತದಲ್ಲಿ ಸಿಲುಕಿದವರನ್ನು ಪಾರು ಮಾಡುವು ದಾಗಬೇಕು. ಬದುಕಿನ ಕಲಾತತ್ವ ಎಂದರೆ ಇದು.

ಕುಷ್ಟರೋಗ ಹತ್ತಿದ ಎದೆಯಂತೆ ಕಾಣುವ ವಿಜಯ ಕರ್ನಾಟಕ ಪತ್ರಿಕೆಯ ಇವತ್ತಿನ ಸುದ್ದಿಯೊಂದು ನನಗೆ ಈ ಸನ್ನಿವೇಶ ನೆನಪಾಗುವುದಕ್ಕೆ ಕಾರಣವಾಯಿತು. ಇಡೀ ಪ್ರಪಂಚವೇ ಕೊರೋನ ಭೀತಿಯಲ್ಲಿದೆ. ಯಾವ ದೇಶವನ್ನೂ ಬಿಡದೆ ಆ ರೋಗ ವ್ಯಾಪಿಸಿದೆ. ಧರ್ಮ, ಲಿಂಗ ಯಾವುದೂ ಈ ರೋಗದ ಮುಂದೆ ಲೆಕ್ಕಕ್ಕಿಲ್ಲ. ರೋಗದ ಬಗೆಗಿನ ಆತಂಕ ಮತ್ತು ಎಚ್ಚರ ಎರಡೂ ಸರ್ವವ್ಯಾಪಕವಾಗಿವೆ. ರೋಗದ ತೀವ್ರತೆಗೊಳಗಾದ ಎಲ್ಲ ದೇಶಗಳು ದಿಗ್ಬಂಧನ ಹೇರಿವೆ. ಹತ್ತು ಸಾವಿರಕ್ಕೂ ಹೆಚ್ಚು ಸಾವು ಕಂಡ ಇಟಲಿ ಹೆಚ್ಚು ಕಮ್ಮಿ ಅಸಹಾಯಕ ಸ್ಥಿತಿಗೆ ತಲುಪಿದೆ. ಕ್ಯೂಬಾದಂತಹ ಚಿಕ್ಕ ದೇಶ ತನ್ನ ತಜ್ಞ ವೈದ್ಯರ ನೆರವು ಕೊಡಲು ಮುಂದಾದ ಸಂಗತಿ ಕೂಡ ಈ ಹೊತ್ತು ತುಂಬ ಮುಖ್ಯವೇ. ಎಲ್ಲ ದೇಶಗಳು ಅಂತರ್‌ರಾಷ್ಟ್ರೀಯ ವಿಮಾನ ಸಂಚಾರ ನಿಲ್ಲಿಸಿವೆ. ದೇಶದ ಒಳಗಡೆಯೂ ಎಲ್ಲ ಸ್ಥಗಿತವಾಗಿದೆ. ಜನ ಮನೆ ಹಿಡಿದು ಕೂತಿದ್ದಾರೆ. ಇಂತಹ ಭೀಕರತೆ ಭಾರತದ ಬಾಗಿಲು ತಟ್ಟಿರುವಾಗ ಎಲ್ಲವನ್ನು ತೆರೆದ ಕಣ್ಣಿನಿಂದ ನೋಡಬೇಕಾದ ಜವಾಬ್ದಾರಿ ಮಾಧ್ಯಮಗಳಿಗೆ ಇದೆ. ಈ ಪತ್ರಿಕೆ ರೋಗ ಸೋಂಕಿತರಿಗೆ ಮತೀಯ ಬಣ್ಣ ಬಡೆದು ಸುದ್ದಿ ಮಾಡಿ ಕನ್ನಡಿಗರನ್ನು ಅವಮಾನಿಸಿದೆ ಮತ್ತು ಆ ಸುದ್ದಿಯನ್ನು ಮುಖಪುಟದಲ್ಲಿ ಬೇರೆ ಹಾಕಿದೆ. ಕೊರೋನದಿಂದ ಕರ್ನಾಟಕದಲ್ಲಿ ಸತ್ತ ಮೂರು ಜನರು ಒಂದು ಸಮುದಾಯಕ್ಕೆ ಸೇರಿದವರು ಎಂದು ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ವಿಚಾರಕ್ಕೆ ಒತ್ತು ನೀಡಿದೆ.

ಎಲ್ಲೋ ಒಂದು ಹಳ್ಳಿಯಲ್ಲಿ ಬಾಗಿಲು ಹಾಕಿಕೊಂಡು ನಮಾಜು ಮಾಡುತ್ತಿದ್ದರೆಂಬ ಸುದ್ದಿಗೆ ಒತ್ತು ನೀಡಿ ಕೋಮುವಾದಿ ಬಣ್ಣದಲ್ಲಿ ಅದ್ದುವ ಕೆಲಸ ಮಾಡಿದೆ. ಇಂತಹ ಸುದ್ದಿ ಪ್ರಕಟಿಸುವಾಗ ಪತ್ರಿಕೆಗಳಿಗೆ ಇರಬೇಕಾದ ನೈತಿಕ ಎಚ್ಚರವನ್ನು ಈ ವಿ ಕ ಏಕೆ ಮರೆಯಿತು? ಸಮಗ್ರ ದೃಷ್ಟಿಕೋನದಿಂದ ನೋಡದೆ ಪತ್ರಿಕಾ ಧರ್ಮವನ್ನು ಯಾಕೆ ಮರೆಯಿತು? ಎಂಬ ವಿಚಾರಗಳು ಕಾಡುತ್ತಿವೆ. ಆ ಪತ್ರಿಕೆಯ ಆರೋಗ್ಯ ಇಷ್ಟೊಂದು ಹದಗೆಟ್ಟಿದೆ ಎಂದು ನನಗೆ ಗೊತ್ತಿರಲಿಲ್ಲ. ಇಂತಹ ಸುದ್ದಿ ಪ್ರಕಟಿಸುವಾಗ ಹತ್ತಾರು ಸಲ ಯೋಚಿಸಬೇಕಿತ್ತು. ಮತೀಯತೆಗೆ ಬಲಿಯಾದ ರೋಗ ಪೀಡಿತ ಪೀತ ಕಣ್ಣು ಈ ಸಂದರ್ಭದಲ್ಲಿ ತೆರೆಯಬಾರದಿತ್ತು. ನಮ್ಮ ಕಡೆ ಒಂದು ಗಾದೆ ಮಾತಿದೆ: ಉಚ್ಚೆಯಲ್ಲಿ ಮೀನು ಹಿಡಿಯುವ ಕೆಲಸ. ಸಮಾಜದ ಆರೋಗ್ಯ ಕಾಯುವ ಹೊಣೆಗಾರಿಕೆ ಇರುವ ಮಾಧ್ಯಮಗಳು ಎಂದೂ ಈ ಕೆಲಸವನ್ನು ಮಾಡಬಾರದು. ಕರ್ನಾಟಕದಲ್ಲಿರುವ ಕೊರೋನ ಸೋಂಕಿತರು ಯಾವ ಯಾವ ಧರ್ಮ/ಜಾತಿ/ಲಿಂಗಕ್ಕೆ ಸೇರಿದವರೆಂಬ ಪಟ್ಟಿ ಇವರ ಬಳಿ ಇದೆಯೇ? ದೇಶದಲ್ಲಿ ಕೊರೋನ ಸೋಂಕಿತರನ್ನು ಧರ್ಮದ ಆಧಾರದಲ್ಲಿ ಗುರುತಿಸುವ ಕಾರ್ಯವೇನಾದರೂ ನಡೆಯುತ್ತಿದೆಯೇ? ಹಾಗೇನಿಲ್ಲ. ಅಂತಹದ್ದು ಸಂಭವಿಸುತ್ತಿದ್ದರೆ ಸಮುದಾಯ ಆಧಾರಿತ ವಿವರಗಳನ್ನು ಪ್ರಕಟಿಸಬೇಕಿತ್ತು. ದೇಶದಲ್ಲಿ ಲಾಕ್‌ಡೌನ್ ಇದ್ದರೂ ಎಷ್ಟೋ ಕಡೆ ಅಜ್ಞಾನ ಮತ್ತು ಶಿಸ್ತು ಇಲ್ಲದ ಬದುಕಿನಿಂದಾಗಿ ಸಾಮೂಹಿಕವಾಗಿ ಒಟ್ಟುಗೂಡುವುದು ನಡೆದೇ ಇದೆ.

ಗಮನಿಸಬೇಕಾದ ಒಂದು ಸಂಗತಿ ಎಂದರೆ ಉಡಾಫೆಯಿಂದ ನಡೆಕೊಳ್ಳುವವರು ಒಂದು ಧರ್ಮಕ್ಕೆ ಸೀಮಿತವಾದವರಲ್ಲ. ರೋಗ ಹರಡಬಾರದು ಎಂದು ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಸಾಮೂಹಿಕ ಸೇರುವಿಕೆಯಂತಹ ಜಾತ್ರೆ, ಮದುವೆ, ಸಭೆ, ಸಮಾರಂಭಗಳನ್ನು ನಿಷೇಧಿಸಿದ್ದಾರೆ. ಆದರೆ ಅವರು ತಮ್ಮ ನಿಷೇಧದ ಆಜ್ಞೆಯನ್ನು ಉಲ್ಲಂಘನೆ ಮಾಡಿ ಬೆಳಗಾವಿಯಲ್ಲಿ ಮದುವೆಯೊಂದರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅದನ್ನು ಹೇಗೆ ನೋಡಬೇಕು? ಮುಖ್ಯಮಂತ್ರಿಯೊಬ್ಬರ ಬೇಜವಾಬ್ದಾರಿ ಅನ್ನಬೇಕಲ್ಲವೆ? ಅದನ್ನು ಧರ್ಮಕ್ಕೆ ತಂದು ಅಂಟಿಸಿದರೆ ಹೇಗೆ?. ಲಾಕ್‌ಡೌನ್ ಆದೇಶ ಆದ ಮೇಲೆ ಎಷ್ಟೊಂದು ಸಾಮೂಹಿಕ ಗುಂಪುಗೂಡುವಿಕೆ ನಡೆದಿದೆ ಈ ರಾಜ್ಯದಲ್ಲಿ? ಈ ದೇಶದಲ್ಲಿ? ಎಷ್ಟಾದವು ಜಾತ್ರೆ? ರಾಜ್ಯದಲ್ಲಿ ಕೊರೋನದಿಂದ ಮೊದಲ ಸಾವಾದ ಕಲಬುರಗಿಯಲ್ಲಿಯೇ ಆ ಸಾವಿನ ನಂತರ ಶರಣಬಸಪ್ಪ ಜಾತ್ರೆಗೆ ಜನ ನೆರೆದರಲ್ಲವೆ? ಎಷ್ಟೋ ಗುಡಿಗಳಲ್ಲಿ ಒಟ್ಟಾಗಿ ಪೂಜಿಸುವ ಕಾರ್ಯಗಳು ಸಾರಾಗವಾಗಿ ನಡೆದವು. ಚರಿತ್ರೆಯಲ್ಲಿಯೇ ಮೊದಲ ಸಲ ಸಾಮೂಹಿಕ ನಮಾಝ್ ಪ್ರಪಂಚದಲ್ಲಿ ನಿಲ್ಲುವಂತಾಗಿದೆ. ನಮ್ಮ ದೇಶವೂ ಹೊರತಾಗಿಲ್ಲ.

ಇದನ್ನು ಮೀರಿ ಕೆಲವೆಡೆ ಹಳ್ಳಿ ಮಸೀದಿಯಲ್ಲಿ ಪ್ರಾರ್ಥನೆ ನಡೆದಿರಬೇಕು. ಅದು ಅಜ್ಞಾನದಿಂದ ಆಗಿರುವಂತಹದ್ದು. ಇದನ್ನೆಲ್ಲ ಸಮುದಾಯಕ್ಕೆ ಇಡಿಯಾಗಿ ಅನ್ವಯಿಸದೇ ಜನರಲ್ಲಿರುವ ಅವಿವೇಕದ ಭಾಗವಾಗಿ ಬಿಡಿ ಬಿಡಿಯಾಗಿ ನೋಡಬೇಕು. ತಪ್ಪುಮಾಡುವವರ ತಪ್ಪನ್ನು ಅವರಿಗೆ ಸೀಮಿತಗೊಳಿಸಬೇಕು. ಅದನ್ನು ಸಮುದಾಯಕ್ಕೆ ಅನ್ವಯಿಸುವುದಲ್ಲ. ಇವತ್ತು ಮಂದಿರ, ಮಸೀದಿ, ಚರ್ಚ್‌ಗಳು ಬೀಗ ಜಡಿದುಕೊಂಡು ಕೂತಿವೆ. ಪೂಜಾರಿಗಳು, ಮೌಲ್ವಿಗಳು, ಫಾದರ್‌ಗಳು ಮನೆ ಹಿಡಿದಿದ್ದಾರೆ. ಪುಣ್ಯ ಸಂಪಾದಿಸಲೆಂದು ಹಜ್ ಯಾತ್ರೆ ಹೋದವರನ್ನು, ಮೂತ್ರ ಕುಡಿದು ಪವಿತ್ರ ನದಿಯಲ್ಲಿ ಮಿಂದೆದ್ದವರನ್ನು ಕೊರೋನ ಬಿಟ್ಟಿಲ್ಲ. ಮನೆಯಲ್ಲಿ ಕೂರುವಂತೆ ಮಾಡಿದೆ. ದೇವರು ಧರ್ಮದ ಎಲ್ಲೆಗಳ ನಶ್ವರತೆ ಸಾಬೀತು ಮಾಡಿದೆ. ಇದನ್ನು ನೋಡುವ ಕ್ರಮ ಯಾವುದಿರಬೇಕು? ಹಾಗೆ ನೋಡಿದರೆ ಕೊರೋನ ವೈರಸ್ ಹರಡುವಿಕೆಗೆ ಸಂಬಂಧಿಸಿದಂತೆ ಪತ್ರಿಕೆಗಳು ಗಮನಿಸಬೇಕಾದ ಎಷ್ಟೊಂದು ಸಂಗತಿಗಳಿವೆ. ಅವುಗಳು ಆ ಕಡೆ ಕಣ್ಮುಚ್ಚಿ ಕುಳಿತಿವೆ ಏಕೆ? ಕೊರೋನ ಮಾನವ ನಿರ್ಮಿತ ವೈರಸ್ ಅಲ್ಲವೆಂದು ಹೇಳಲಾಗುತ್ತದೆ. ಚೀನಾದ ವುಹಾನ್ ಅದರ ಉಗಮಸ್ಥಾನ ಎಂದು ಹೇಳುವ ಈ ವೈರಸ್ ಸೌದಿಯಿಂದ ಬಂದಿದ್ದೆಂಬುದನ್ನು ಕೆಲವು ಮೂಲಗಳು ಹೇಳುತ್ತವೆ. ಜೈವಿಕ ಯುದ್ಧಕ್ಕೆ ಸನ್ನದ್ಧವಾಗುತ್ತಿರುವ ಈ ಜಗತ್ತಿನಲ್ಲಿ ಯಾವ ಯಾವ ಅಸ್ತ್ರಗಳು ಯಾರ ಯಾರ ಬಳಿ ಇವೆ ಎಂದೂ ಗೊತ್ತಾಗಬೇಕಿದೆ. ಹಿಂದೆ ಅಮೆರಿಕ ಇರಾಕ್ ಮೇಲೆ ಅಂಥ ಅಸ್ತ್ರ ಉಪಯೋಗಿಸಿತ್ತು ಎಂಬುದನ್ನು ಹೇಗೆ ಮರೆಯಲಾದೀತು?. ಜೀವ ಹಾನಿ ಮಾಡುವ ವೈರಸ್‌ನ್ನು ಇದೊಂದು ದೇಶವೊಂದರಿಂದ ಹರಿಬಿಡುವ ಕಾರ್ಯಗಳು ನಡೆಯುತ್ತಿವೆ. ತನ್ನ ದೇಶದ ಮೇಲೆ ಅದು ತಿರುಗಿದಾಗಿ ದೊಡ್ಡ ಮಟ್ಟದ ಹಾನಿಯನ್ನು ಅನುಭವಿಸಿದೆ. ಇಂತಹ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ಕೆಲಸಗಳು ಮಾಧ್ಯಮಗಳಿಂದ ಆಗಬೇಕಾಗಿದೆ. ಅವುಗಳು ಆ ಕಡೆ ಗಮನ ಹರಿಸಿವೆಯೇ?.

  ಕೊರೋನ ವೈರಸ್ ತನ್ನ ರೂಪ ಪ್ರಕಟಿಸಿದ್ದು ಡಿಸೆಂಬರ್/ಜನೆವರಿ ತಿಂಗಳಲ್ಲಿ. ಈ ಸಾಂಕ್ರಾಮಿಕ ವೈರಸ್‌ನ ಮಹಾಮಾರಿತನ ಈ ದೇಶದ ಆಡಳಿತಕ್ಕೆ ಅರಿವಾಗಿದ್ದರೆ ನಾವಿಂದು ಲಾಕ್‌ಡೌನ್‌ಗೆ ಒಳಗಾಗುವ ಪ್ರಸಂಗ ಉದ್ಭವಿಸುತ್ತಿರಲಿಲ್ಲ. ಆಗಿನಿಂದಲೇ ಮುನ್ನೆಚ್ಚರಿಕೆ ವಹಿಸಬೇಕಿತ್ತು. ವಿದೇಶದಿಂದ ಬರುವ ಪ್ರಯಾಣಿಕ/ಪ್ರವಾಸಿಗ/ದೇಶವಾಸಿಗಳ ಆರೋಗ್ಯ ತಪಾಸಣೆ ನಡೆಸಬೇಕಿತ್ತು. ವೈರಸ್ ಲಕ್ಷಣಗಳಿದ್ದಲ್ಲಿ ಕ್ವಾರಂಟೈನ್ ಮಾಡಿ ಚಿಕಿತ್ಸೆ ಕೊಟ್ಟು ರೋಗ ಹರಡದಂತೆ ನೋಡಿಕೊಳ್ಳಬೇಕಿತ್ತು. ನೀವೇ ಯೋಚಿಸಿ ನಮ್ಮ ಆಡಳಿತ ಆ ಕಡೆ ಗಮನ ಹರಿಸಿದ್ದು ಯಾವಾಗ? ತೀರ ತಡವಾಗಿಯಲ್ಲವೆ? ಅದು ಮೊನ್ನೆ ಮೊನ್ನೆಯಷ್ಟೆ ವಿದೇಶದಿಂದ ಬರುವ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿ, ಕೆಲ ದಿನಗಳ ಹಿಂದಷ್ಟೇ ವಿಮಾನ ಸಂಚಾರಕ್ಕೆ ನಿರ್ಬಂಧ ವಿಧಿಸಿತು. ಅಷ್ಟೊತ್ತಿಗೆ ಸಮಯ ಮೀರಿ ವೈರಸ್ ದೇಶದೊಳಗಡೆ ಪ್ರವೇಶ ಮಾಡಿತ್ತು.

ಇದು ಕೇಂದ್ರ ಸರಕಾರದ ಮಹಾಲೋಪವಲ್ಲವೆ? ಈ ಲೋಪಕ್ಕಾಗಿ ಯಾಕೆ ಮಾಧ್ಯಮಗಳಲ್ಲಿ ಪ್ರಧಾನಿಯನ್ನು ಮತ್ತು ದೇಶದ ಆಡಳಿತವನ್ನು ಹೊಣೆ ಮಾಡುತ್ತಿಲ್ಲ? ಚರ್ಚಿಸುತ್ತಿಲ್ಲ? ಅವೆಲ್ಲ ಪ್ರಭುತ್ವದೆದುರು ನಡುಬಗ್ಗಿಸಿ ಯಾಕೆ ನಿಂತಿವೆ? ಉದ್ಭವಿಸಿದ ಈ ಪ್ರಶ್ನೆಗೆ ಯಾರು ಉತ್ತರಿಸಬೇಕು? ಮಿಗಿಲಾಗಿ ನಾವು ಕೂಡ ಇದನ್ನು ಆಡಳಿತದ ನಿರ್ಲಕ್ಷ/ಲೋಪವೆಂದು ನೋಡಬೇಕು ವಿನಹ ಪ್ರಧಾನಿಯೇ ರೋಗ ಹರಡಲೆಂದು ಸುಮ್ಮನಿದ್ದರೆಂದು ಹೇಳಲಾದೀತೆ?

ನಮ್ಮ ದೇಶದ ಮಾಧ್ಯಮಗಳಿಗೆ ದೇಶದ ಜನರನ್ನೆಲ್ಲ ಪ್ರಧಾನಿಯ ಭಜನಾ ಮಂಡಳಿಯ ಸದಸ್ಯರನ್ನಾಗಿ ಮಾಡುವ ಹುಕಿ ಹುಟ್ಟಿಬಿಟ್ಟಿದೆ. ಜನರ ಪರವಾಗಿ ನಿಂತು ಯೋಚಿಸುವ ಗುಣವೇ ಸದ್ಯಕ್ಕೆ ಅವುಗಳಿಗಿಲ್ಲ. ಪ್ರತಿದಿನ ಡೋಲಕ್ ಬಾರಿಸುವ ಕೆಲಸವೇ ಅವುಗಳಿಂದ ನಡೆಯುತ್ತಿದೆ. ಯಾವ ಸಿದ್ಧತೆಯಿಲ್ಲದೆ, ಮಂತ್ರಿ ಮಂಡಳದಲ್ಲಿ ಚರ್ಚೆಯನ್ನು ಮಾಡದೆ ಏಕಮುಖಿಯಾಗಿ ರೇಡಿಯೊ ಮಾತಿನಲ್ಲಿ ಲಾಕ್‌ಡೌನ್ ಮಾಡಿದ ಘೋಷಣೆಯಿಂದಾಗಿ ಏನಾಯಿತೆಂದು ಚರ್ಚಿಸಲಿಕ್ಕೆ ಅವು ಹೋಗುವುದಿಲ್ಲ. ದೇಶದ ಹಿತದೃಷ್ಟಿಯಿಂದ ಲಾಕ್‌ಡೌನ್ ಅನ್ನು ನಾವೆಲ್ಲ ಬೆಂಬಲಿಸುತ್ತಿದ್ದೇವೆ ಆ ಮಾತು ಬೇರೆ. ಒಬ್ಬ ಪ್ರಧಾನಿಯಾಗಿ ಪೂರ್ವ ಸಿದ್ಧತೆ ಮಾಡಿಕೊಂಡು ಲಾಕ್‌ಡೌನ್ ಘೋಷಿಸಿದ್ದರೆ ಜನ ಇಷ್ಟೊಂದು ತಾಪತ್ರಯಗಳಿಗೆ ಸಿಲುಕುತ್ತಿರಲಿಲ್ಲ. ದುಡಿದುಣ್ಣ್ಣುವ ಜನರ ಬದುಕು ಬಕಬಾರಲೇ ಬೀಳುತ್ತಿರಲಿಲ್ಲ. ಅವರ ಕಷ್ಟ, ಬವಣೆ ಹೇಳತೀರದಾಗಿದೆ. ಉದ್ಯೋಗ ಬಂಧ ಆಗಿವೆ. ಕಾರ್ಖಾನೆ, ಹೊಟೇಲ್, ಮಾಲ್ ಮುಚ್ಚಿವೆ. ಇಂತಹ ಸ್ಥಿತಿ ಎದುರಾದಾಗ ದುಡಿಮೆಗಾರರ ಗತಿ ಏನಾಗಬೇಕು? ಬೆಳೆದಿದ್ದನ್ನು ಮಾರುಕಟ್ಟೆಗೆ ತರಲಾಗದ ರೈತರು ಬಸವಳಿದು ಹೋಗಿದ್ದು ಸುಳ್ಳೇನು? ಜನರಿಗೆ ಗೋದಾಮುಗಳಲ್ಲಿ ಇರುವ ಆಹಾರ ಧಾನ್ಯ ತಲುಪಿಸುವ ಆಡಳಿತದ ಮಾತು ಮಾತಾಗಿಯೇ ಉಳಿದಿದೆಯಲ್ಲವೆ ಈ ತನಕ?. ಇವೆಲ್ಲ ಸಂಗತಿಗಳನ್ನು ಪ್ರಧಾನಿಯ ಪೂರ್ವ ಸಿದ್ಧತೆಯಿಲ್ಲದ ಮಾಡಿದ ಘೋಷಣೆಯನ್ನು ಚರ್ಚಿಸುತ್ತಲೇ ಬೆಂಬಲಿಸಬೇಕಾಗಿತ್ತು. ಆದರೆ ಮಾಧ್ಯಮಗಳಿಗೆ ಇದರ ನೆನಪೇ ಇಲ್ಲ.

ವಿದೇಶಗಳಲ್ಲಿ ಬಂಧಿಯಾದ ಜನರನ್ನು ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಲಾಯಿತು. ಆಡಳಿತದ ಜವಾಬ್ದಾರಿ ಹೊತ್ತವರು ಈ ಕೆಲಸವನ್ನು ಸರಿಯಾಗಿ ನಿಭಾಯಿಸಿದ್ದಾರೆ. ಅದನ್ನು ತಪ್ಪು ಎನ್ನುವಂತಿಲ್ಲ. ಆದರೆ ಅದೇ ಸಮಯಕ್ಕೆ ದೊಡ್ಡ ನಗರಗಳಿಗೆ ದುಡಿಯಲೆಂದು ಬಂದಿರುವ ಕೂಲಿಗಳು, ಬಡವರು ಈ ಲಾಕ್ ಡೌನ್ ನಿಂದ ಏನಾಗಿ ಹೋದರು? ಅವರಿಗೆ ಯಾವ ಸೌಲಭ್ಯ ಒದಗಿಸಿಕೊಟ್ಟರು? ಗದಗ, ಹಾವೇರಿ, ಧಾರವಾಡ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಂದ ದುಡಿಯಲೆಂದು ಗೋವಾಕ್ಕೆ ಹೋದವರು ಅಲ್ಲಿಯೇ ಬಂಧಿಯಾಗಿ ಪಡಬಾರದ ಪಾಡು ಪಡುತ್ತಿದ್ದಾರೆ. ಹೈದರಾಬಾದ್‌ಗೆ ಹೋಗಿದ್ದ ರಾಯಚೂರು ಜಿಲ್ಲೆ ಜನ ನೂರಾರು ಮೈಲು ನಡೆದುಕೊಂಡು ಊರಿಗೆ ಮರಳುವ ದಾರಿಯಲ್ಲಿ ಇನ್ನೂ ಇದ್ದಾರೆ. ಸಾವು ಅವರ ಬೆನ್ನು ಹತ್ತಿ ತಿರುಗುತ್ತಿದೆ. ದಿಲ್ಲಿಗೆ ಹೋಗಿದ್ದ ಉತ್ತರ ಪ್ರದೇಶದ ಜನಗಳ ಬವಣೆ ಇದಕ್ಕಿಂತ ಭಿನ್ನವಾಗಿಲ್ಲ. ದಿಲ್ಲಿಯಿಂದ ಮಧ್ಯಪ್ರದೇಶದ ತಮ್ಮ ಹಳ್ಳಿಗಳಿಗೆ ಹೊರಟವರು ದಾರಿಯಲ್ಲಿಯೇ ಸಾವು ಕಾಣುವಂತಾಗಿದೆ. ಇಂತಹ ಸ್ಥಿತಿಯಲ್ಲಿ ಮಧ್ಯಪ್ರದೇಶದಲ್ಲಿ ಶಾಸಕರ ಖರೀದಿ, ಸರಕಾರ ರಚನಾ ಕಾರ್ಯದ ರಾಜಕಾರಣವೇ ಮೇಲುಗೈ ಸಾಧಿಸಿದೆ. ಅವರಿಗೊಂದು ಊರು ತಲುಪಲು ವಾಹನ ವ್ಯವಸ್ಥೆ ಮಾಡಲಾಗದ ಸಂಗತಿಗಳು ಯಾಕೆ ಮಾಧ್ಯಮಗಳಿಗೆ ಕಾಣುವುದಿಲ್ಲ? ಈ ಆಡಳಿತಕ್ಕಿರುವುದು ಶ್ರೀಮಂತರ ಪರವಾದ ಕಣ್ಣೇ ಹೊರತು ಬಡವರನ್ನು ನೋಡುವ ಕಣ್ಣಿಲ್ಲ. ಇದನ್ನು ಯಾಕೆ ಹೇಳುತ್ತಿಲ್ಲ? ಯಾಕೆ ಸುದ್ದಿ ಮಾಡುತ್ತಿಲ್ಲ?

ದೇಶದ ಎಲ್ಲೆಡೆ ಈಗ ಸ್ವ ಧರ್ಮ ಪಕ್ಷಪಾತ ಎಗ್ಗಿಲ್ಲದೆ ನಡೆಯುತ್ತಿದೆ. ಜನಗಳನ್ನು ಧರ್ಮ, ಪಕ್ಷದ ಕನ್ನಡಕದಲ್ಲಿಯೇ ನೋಡಲಾಗುತ್ತದೆ. ಒಂದು ದೇಶ ಎಂಬ ಕಲ್ಪನೆ ಯಾರಲ್ಲಿದೆ ಇವತ್ತು? ಎಲ್ಲವನ್ನು ತನ್ನ ಮಾಪನದಲ್ಲಿ ಅಳತೆ ಮಾಡಲಾಗುವ ಕ್ರಿಯೆಗಳು ಇವೆ. ಕೊರೋನ ಟೆಸ್ಟ್ ಕಿಟ್ ತಯಾರಿಸಲು ತನ್ನ ಜನ ತನ್ನ ರಾಜ್ಯದವರೆ ಆಗಬೇಕು. ಈ ನಿಲುವು ದೇಶವನ್ನು ಯಾವ ಕಡೆ ಒಯ್ಯುತ್ತದೆ? ಏನು ಅಭಿವೃದ್ಧಿ ಆಗುತ್ತದೆ? ಈ ಸಂಗತಿಗಳು ಮಾಧ್ಯಮಗಳಿಗೆ ಮುಖ್ಯ ಆಗಬೇಕು. ಆಗುತ್ತಿದೆಯೇ ಎಂದು ನೋಡಿದಾಗ ಏಕಪಕ್ಷ ಕೂಗುಮಾರಿತನ ನಮ್ಮನ್ನು ನಿರಾಶೆಗೊಳಿಸುತ್ತದೆ. ಲಾಕ್ ಡೌನ್ ಸಂದರ್ಭದಲ್ಲಿ ದೇಶ ಪೋಲಿಸರ ರಾಜ್ಯವಾಗಿದೆ. ಹಿಂಸೆಯಿಂದ ಮಾತ್ರ ಜನರ ತಪ್ಪು ತಿದ್ದಬಹುದು ಎಂಬ ನೀತಿಯೇ ತಪ್ಪು. ಜನಾನುರಾಗಿ ಆಗಿ ಜನಗಳಿಗೆ ತಿಳಿ ಹೇಳಬೇಕು. ದಂಡ ಕೊನೆಯ ಅಸ್ತ್ರವಾಗಬೇಕು. ಆದರೆ ಇಲ್ಲಿ ದಂಡನೆಯೇ ಮೊದಲ ಮೆಟ್ಟಿಲಾಗಿದೆ. ಈ ವಿಷಯದಲ್ಲಿ ಮಾಧ್ಯಮಗಳು ಕಣ್ಣು ಮುಚ್ಚಿವೆ ಏಕೆ? ದಂಡನೆಯಿಂದ ಜನರ ಬಾಯಿ ಮುಚ್ಚಿಸುವ ಹುನ್ನಾರವೆ? ಭವಿಷ್ಯದಲ್ಲಿ ಇದು ಯಾವುದರ ಸೂಚನೆ?.

Writer - ಬಸವರಾಜ ಸೂಳಿಭಾವಿ

contributor

Editor - ಬಸವರಾಜ ಸೂಳಿಭಾವಿ

contributor

Similar News