ಬೆಂಗಳೂರು: ಲಾಠಿ ಬಿಟ್ಟು ಜನರಿಗೆ ಬುದ್ಧಿ ಹೇಳಿದ ಪೊಲೀಸರು

Update: 2020-03-30 17:07 GMT

ಬೆಂಗಳೂರು, ಮಾ.30: ಲಾಕ್‍ಡೌನ್ ಸಂದರ್ಭದಲ್ಲಿ ಜನರು ಮನೆಗಳಿಂದ ಹೊರಬಂದು ರಸ್ತೆಗಳಲ್ಲಿ ಅಡ್ಡಾದಿಡ್ಡಿ ಅಲೆದಾಡುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಬೀಸುವುದಕ್ಕೆ ತಡೆ ಹಾಕಿದ್ದು, ಮೃದುವಾಗಿ ಜನರಿಗೆ ಕೊರೋನ ವೈರಸ್‍ನ ಪರಿಣಾಮವನ್ನು ವಿವರಿಸುತ್ತಿದ್ದಾರೆ.

ನಗರದಲ್ಲಿ ರಸ್ತೆಗಿಳಿದು ಎಲ್ಲೆಂದರಲ್ಲಿ ಸುತ್ತಾಡುವವರಿಗೆ ಈ ಹಿಂದೆ ಲಾಠಿ ಬೀಸಿದ ಪ್ರಕರಣಗಳು ಅಧಿಕವಾಗಿ, ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಲಾಠಿ ಬೀಸುವುದನ್ನು ಕೈಬಿಟ್ಟಿದ್ದಾರೆ. 

ಪೊಲೀಸರು ಶಿಕ್ಷೆಯನ್ನು ಬದಲಿಸಿಕೊಂಡಿದ್ದಾರೆ. ಬದಲಿಗೆ, ರಸ್ತೆಗಳಲ್ಲಿ ಕಾಣಿಸಿಕೊಳ್ಳುವ ಜನರಿಗೆ ಕೊರೋನ ಮಹಾಮಾರಿಯ ಅನಾಹುತಗಳನ್ನು ವಿವರಿಸಿ, ಮನೆಯಲ್ಲಿಯೇ ಇರಿ, ಮನೆಯಿಂದ ಹೊರಬರಬೇಡಿ ಎನ್ನುತ್ತಿದ್ದಾರೆ.

ಲಾಕ್‍ಡೌನ್ ಸಂದರ್ಭದಲ್ಲಿ ನಗರದಾದ್ಯಂತ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುತುವರ್ಜಿ ವಹಿಸಿರುವ ಪೊಲೀಸರು ಎಲ್ಲರನ್ನು ವಾಪಸ್ ಮನೆಗಳಿಗೆ ಕಳುಹಿಸುತ್ತಿದ್ದಾರೆ. ಅಲ್ಲದೆ, ನಿಯಮ ಉಲ್ಲಂಘಿಸುವವರಿಗೆ ಮೆಡಿಕಲ್ ಶಾಪ್, ದಿನಸಿ ಅಂಗಡಿಗಳ ಎದುರು ಚೌಕ, ವೃತ್ತಗಳನ್ನು ಬರೆಯುವ ಶಿಕ್ಷೆ ನೀಡುತ್ತಿದ್ದಾರೆ. ಕೆಲ ಪೊಲೀಸರು ಸಿಟ್‍ಅಪ್ಸ್ ಶಿಕ್ಷೆಯನ್ನೂ ನೀಡುತ್ತಿದ್ದಾರೆ.

ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಜನರನ್ನು ಅನಗತ್ಯವಾಗಿ ಹೊಡೆಯಬಾರದು ಎಂದು ಹೇಳಿದ್ದಾರೆ. ಜನರನ್ನು ಚದುರಿಸುವ ವೇಳೆ ಲಾಠಿ ಬಳಸಬೇಡಿ ಎಂದು ಸ್ಪಷ್ಟವಾಗಿ ಸೂಚನೆ ನೀಡಿದ್ದೇನೆ ಎಂದು ಉಪ ಪೊಲೀಸ್ ಆಯುಕ್ತ(ಉತ್ತರ) ಎನ್.ಶಶಿಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News