ಲಾಕ್‍ಡೌನ್ ನಿಯಮ ಉಲ್ಲಂಘನೆ ಆರೋಪ: 2 ಸಾವಿರಕ್ಕೂ ಅಧಿಕ ವಾಹನ ಜಪ್ತಿ

Update: 2020-03-30 18:02 GMT

ಬೆಂಗಳೂರು, ಮಾ.30: ಕೊರೋನ ವೈರಸ್ ಹಿನ್ನೆಲೆ ಲಾಕ್‍ಡೌನ್ ಉಲ್ಲಂಘಿಸಿ ಸಂಚರಿಸುವ ವಾಹನಗಳ ಮೇಲೆ ನಿಗಾವಹಿಸಿರುವ ನಗರ  ಪೊಲೀಸರು ಇಲ್ಲಿಯವರಿಗೆ ಎರಡು ಸಾವಿರಕ್ಕೂ ಹೆಚ್ಚು  ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಇದುವರೆಗೂ ವಶಪಡಿಸಿಕೊಂಡಿರುವ ವಾಹನಗಳ ಮಾಲಕರನ್ನು ಕರೆಯಿಸಿ, ಮತ್ತೆ ರಸ್ತೆಗೆ ವಾಹನಗಳನ್ನು ತರದಂತೆ ಎಚ್ಚರಿಕೆ ಕೊಟ್ಟು ಕಳುಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಪದೇಪದೇ ಮಾಡಿದ ಮನವಿಯನ್ನು ಉಲ್ಲಂಘಿಸಿ ಅನಗತ್ಯ ಹಾಗೂ ಅನಾವಶ್ಯಕವಾಗಿ ರಸ್ತೆಯಲ್ಲಿ ವಾಹನ ಚಲಾಯಿಸುವ ಚಾಲಕರು ಹಾಗೂ ಸವಾರರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದಲ್ಲದೆ, ಇಂದಿನಿಂದ ವಶಪಡಿಸಿಕೊಳ್ಳುವ ವಾಹನಗಳನ್ನು ಲಾಕ್ ಡೌನ್ ಅವಧಿ ಮುಗಿಯುವವರೆಗೆ ವಾಪಾಸ್ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ನಗರದ ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ, ಆಗ್ನೇಯ, ಈಶಾನ್ಯ, ವೈಟ್ ಫೀಲ್ಡ್ ವಿಭಾಗಗಳಲ್ಲಿ ವಾಹನ ಚಲಾಯಿಸುವವರ ಮೇಲೆ ಹದ್ದಿನ ಕಣ್ಣಿಡಲಾಗಿದ್ದು, ಅಗತ್ಯ ಸೇವೆಗಳನ್ನು ಹೊರತುಪಡಿಸಿ, ರಸ್ತೆಗೆ ವಾಹನಗಳನ್ನು ತಂದರೆ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News