ಕಟ್ಟಡ ಕಾರ್ಮಿಕರು, ಮಕ್ಕಳು ಅನ್ನ, ನೀರಿಲ್ಲದೆ ಪರದಾಟ

Update: 2020-03-30 18:08 GMT

ಔರಾದ್, ಮಾ.30: ಕೊರೋನ ಸೋಂಕು ಹರಡದಂತೆ ದೇಶದಾದ್ಯಂತ `ಕಫ್ರ್ಯೂ ಮಾದರಿ ನಿರ್ಬಂಧ' ವಿಧಿಸಿರುವ ಹಿನ್ನೆಲೆಯಲ್ಲಿ ಕಾರ್ಮಿಕರು, ನಿರ್ಗತಿಕರು, ಭಿಕ್ಷುಕರು ಅತಂತ್ರ ಸ್ಥಿತಿಗೆ ಸಿಲುಕಿದ್ದಾರೆ.

ಔರಾದ್ ಪಟ್ಟಣವೊಂದರಲ್ಲೇ ಇಂಥ 50 ಕುಟುಂಬಗಳಿವೆ. ಇರುವ ಆಹಾರಧಾನ್ಯ ಮುಗಿದು ಹೋಗಿದೆ. ಊಟಕ್ಕೆ ಏನು ಮಾಡಬೇಕು ಎಂಬ ಚಿಂತೆಯಲ್ಲಿವೆ.

ಕಳೆದ ಮೂರು ದಶಕಗಳಿಂದ ಪಟ್ಟಣದಲ್ಲಿ ವಾಸವಾಗಿರುವ ಇವರು ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಿಕೊಂಡು ಉಪ ಜೀವನ ನಡೆಸುತ್ತಿದ್ದಾರೆ. ಆದರೆ ಈಗ ಮಾಲಕರು ಕೆಲಸಕ್ಕೆ ಬರಬೇಡಿ ಎಂದು ಹೇಳುತ್ತಿದ್ದಾರೆ. ಹೀಗಿರುವಾಗ ನಾವು ಉಪಜೀವನ ಮಾಡುವುದಾದರೋ ಹೇಗೆ ಎಂದು ಗುಡಿಸಲು ವಾಸಿ ಶಾದುಲ್ಲಾ ಪ್ರಶ್ನಿಸುತ್ತಾರೆ.

ನಮ್ಮ ಹೆಣ್ಣು ಮಕ್ಕಳನ್ನು ಮನೆ ಕೆಲಸಕ್ಕೂ ಕರೆಯುತ್ತಿಲ್ಲ. ಎರಡು ತಿಂಗಳಿನಿಂದ ಪಡಿತರ ಆಹಾರ ಧಾನ್ಯವೂ ಸಿಕ್ಕಿಲ್ಲ. ಇಂಥ ಸ್ಥಿತಿಯಲ್ಲಿ ನಮ್ಮ ಮಕ್ಕಳಿಗೆ ತಿನ್ನಲು ಏನು ಕೊಡಬೇಕು ಎಂದು ಅವರು ದುಃಖದಿಂದ ಪ್ರಶ್ನಿಸುತ್ತಾರೆ.

ಮೊದಲು ಗುಡಿಸಲು ಅಕ್ಕ-ಪಕ್ಕದ ಮನೆಯವರು ನೀರು ಕೊಡುತ್ತಿದ್ದರು. ಈಗ ಅವರೂ ಬರಬೇಡಿ ಎಂದು ಹೇಳುತ್ತಿದ್ದಾರೆ. ಕುಡಿಯಲು ನೀರಿಗೂ ಪರಿತಪಿಸಬೇಕಾಗಿದೆ. ಚುನಾವಣೆ ವೇಳೆ ನಮ್ಮ ಮನೆತನಕ ಬಂದು ಬೇಡ ಎಂದರೂ ದವಸ ಧಾನ್ಯ ಕೊಟ್ಟು ಹೋಗುತ್ತಾರೆ. ಆದರೆ ಸಂಕಷ್ಟದ ಸಮಯದಲ್ಲಿ ನಮ್ಮ ಕಡೆ ಯಾರು ನೋಡುತ್ತಿಲ್ಲ ಎಂದು ಮಹಿಳೆಯರು ಅಳಲು ತೋಡಿಕೊಂಡರು.

ಜನಪ್ರತಿನಿಧಿಗಳು, ಉಳ್ಳವರು ಇಂಥ ಸಂಕಷ್ಟದ ಸಮಯದಲ್ಲಿ ಜನರ ನೆರವಿಗೆ ಬರಬೇಕು. ಈ ನಿಟ್ಟಿನಲ್ಲಿ ಸಹಾಯ ಮಾಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಅನೀಲ ಜಿರೋಬೆ, ವಿದ್ಯಾರ್ಥಿ ಮುಖಂಡ ಅಂಬಾದಾಸ ನೇಳಗೆ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News