ರಾಜ್ಯದಲ್ಲಿ ಪೊಲೀಸ್ ಅತಿರೇಕ ಕೊನೆಯಾಗಲಿ: ಇಲ್ಯಾಸ್ ಮುಹಮ್ಮದ್ ತುಂಬೆ

Update: 2020-03-30 18:09 GMT

ಬೆಂಗಳೂರು, ಮಾ.30: ಲಾಕ್‍ಡೌನ್ ಸಂದರ್ಭದಲ್ಲಿ ಕೆಲವೊಂದು ಕಡೆ ಪೊಲೀಸರು ನಡೆಸುತ್ತಿರುವ ಅತಿರೇಕ ಹಾಗೂ ಕ್ರೌರ್ಯದ ಬಗ್ಗೆ ಈಗಾಗಲೆ ರಾಜ್ಯದ ಸಾಕ್ಷಿಯಾಗಿದ್ದು, ರಾಜ್ಯ ಸರಕಾರ ಮೂಕ ವೀಕ್ಷಕನಾಗಿರುವುದು ಖಂಡನೀಯ ಎಂದು ಎಸ್‍ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಇಂದು ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದಲ್ಲಿ ಪೊಲೀಸರ ಏಟಿನಿಂದ ಲಚ್ಚನಾಯಕ್ ಎಂಬವರು ಬಲಿಯಾಗಿರುವುದು ಶೋಚನೀಯ. ಬೆಂಗಳೂರಿನ ಭೂಪಸಂದ್ರದ ವ್ಯಕ್ತಿಯೋರ್ವನಿಗೆ ನಕಲಿ ಎನ್‍ಕೌಂಟರ್ ಮಾಡುವ ಮೂಲಕ ಪೊಲೀಸ್ ಅಧಿಕಾರಿ ಕಾನೂನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದ್ದಾರೆ.

ಅದೇ ಯುವಕನ ಮೇಲೆ ಸಾರ್ವಜನಿಕವಾಗಿ ದೌರ್ಜನ್ಯ ನಡೆಸಿದ ಇಬ್ಬರು ಪೊಲೀಸರ ಮೇಲೆ ಪ್ರಕರಣ ದಾಖಲಿಸದೆ ಬಿಟ್ಟಿರುವುದು ನ್ಯಾಯದ ಅಣಕವಾಗಿದೆ. ಹಾನಗಲ್‍ನಲ್ಲಿ ಹಿಟ್ಟಿಗಾಗಿ ಬಂದ ಹಿರಿಯ ವ್ಯಕ್ತಿಯ ಮೇಲೆ ಪೊಲೀಸರು ಮನಬಂದಂತೆ ಥಳಿಸಿದ್ದಾರೆ. ಯಾವುದೆ ಕಾರಣವನ್ನೂ ಕೇಳದೆ ಜನರಿಗೆ ಏಕಾಏಕಿ ಲಾಠಿಯಿಂದ ಥಳಿಸುವ ಹಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿವೆ ಎಂದು ಅವರು ಹೇಳಿದ್ದಾರೆ.

ಕೊರೋನ ಅಪಾಯದ ನಡುವೆಯೂ ಲಾಕ್‍ಡೌನ್ ನಿರ್ವಹಿಸಲು ಶ್ರಮಿಸುತ್ತಿರುವ ಪೊಲೀಸರ ತ್ಯಾಗ, ಶ್ರಮ ಖಂಡಿತವಾಗಿಯೂ ಶ್ಲಾಘನಿಯ ಹಾಗೂ ಗೌರವಾರ್ಹ. ಆದರೆ, ಅದೇ ಇಲಾಖೆಗೆ ಕೆಟ್ಟ ಹೆಸರು ತರುತ್ತಿರುವ ಕೆಲ ಪೊಲೀಸರ ವರ್ತನೆ ಅಮಾನವೀಯ. ಲಾಠಿಯನ್ನು ಬಿಟ್ಟು ಸಭ್ಯತೆಯಿಂದ ಕರ್ತವ್ಯ ನಿರ್ವಹಿಸುವಂತೆ ರಾಜ್ಯ ಸರಕಾರ ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು ಎಂದು ಇಲ್ಯಾಸ್ ಮುಹಮ್ಮದ್ ಆಗ್ರಹಿಸಿದ್ದಾರೆ.

ಅದೇ ರೀತಿ ಆಹಾರ ಪದಾರ್ಥಗಳು, ಔಷಧಿ, ಇತ್ಯಾದಿ ಅಗತ್ಯಗಳಿಗಾಗಿ ಹೊರ ಬರುವ ಜನರಿಗೆ ಲಾಕ್‍ಡೌನ್ ಶಿಸ್ತನ್ನು ಪಾಲಿಸಿಕೊಂಡು ಅವರ ಅವಶ್ಯಕತೆಗಳನ್ನು ಪೂರೈಸುವ ಅವಕಾಶಗಳನ್ನು ಒದಗಿಸಿ ಕೊಡಬೇಕು. ವಲಸೆ ಕಾರ್ಮಿಕರು, ವಸತಿ ರಹಿತರು ಮುಂತಾದವರಿಗೆ ಆಹಾರ ಒದಗಿಸುವ ವ್ಯವಸ್ಥೆಯನ್ನು ಸರಕಾರ ಮಾಡಬೇಕು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News