ವಲಸೆ ಕಾರ್ಮಿಕರಿಗೆ ಆಶ್ರಯ ನೀಡಲಾಗುವುದು: ಗೃಹ ಸಚಿವ ಬೊಮ್ಮಾಯಿ

Update: 2020-03-30 18:14 GMT

ಬೆಂಗಳೂರು, ಮಾ.30: ಕೊರೋನ ವೈರಸ್ ಹಿನ್ನೆಲೆ ವಲಸೆ ಹೊರಟಿರುವ ವಲಸೆ ಕಾರ್ಮಿಕರಿಗೆ ನಗರದಲ್ಲಿಯೇ ಆಶ್ರಯ ನೀಡಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಪ್ರತಿ ವಾರ್ಡ್‍ನಲ್ಲೂ ಕಲ್ಯಾಣ ಮಂಟಪಗಳಲ್ಲಿ ಕಾರ್ಮಿಕರಿಗೆ ಆಶ್ರಮ ಒದಗಿಸುವ ಜೊತೆಗೆ, ಊಟದ ವ್ಯವಸ್ಥೆ ಮಾಡಲಾಗುವುದು. ಬಿಬಿಎಂಪಿ ಜಂಟಿ ಆಯುಕ್ತ ಮತ್ತು ಪೊಲೀಸ್ ಉಪ ಆಯುಕ್ತರು ಇದರ ನೇತೃತ್ವ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ವಲಸೆ ಕಾರ್ಮಿಕರು ನಗರದಿಂದ ಹಳ್ಳಿಗಳ ಕಡೆ ಮುಖ ಮಾಡಿದರೆ, ಕೊರೋನ ಸೋಂಕು ಹೆಚ್ಚಾಗಿ ಹರಡುವ ಭೀತಿ ಇದೆ. ಈ ಬಗ್ಗೆ ಜಾಗೃತಿ ಮೂಡಿಸುವುದು ಮಾತ್ರವಲ್ಲದೆ, ಅವರ ಮನೆಗಳಲ್ಲಿಯೇ ಉಳಿಯುವಂತೆ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

ನಗರ ಪ್ರದೇಶದಲ್ಲಿರುವ ನಾಗರಿಕರು, ದಿನಸಿ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಅದಷ್ಟು ಕಾಲ್ನಡಿಗೆ ಮೂಲಕವೇ ಹೋಗಬೇಕು ಎಂದ ಅವರು, ಮನೆ ಬಾಡಿಗೆದಾರರು, ಪಿಜಿಯಲ್ಲಿರುವವರಿಂದ ಮಾಲಕರು ಬಾಡಿಗೆಯನ್ನು ಕೇಳುವಂತಿಲ್ಲ. ಒಂದು ವೇಳೆ, ಒತ್ತಡ ಹಾಕಿ ಕಿರುಕುಳ ನೀಡಿದರೆ, ಮೊಕದ್ದಮೆ ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News