×
Ad

ಲಾಠಿ ಚಾರ್ಜ್, ಮಾರ್ಗಸೂಚಿ ರಚಿಸಿ ಸುತ್ತೋಲೆ ಹೊರಡಿಸಿ: ಐಜಿಪಿಗೆ ಹೈಕೋರ್ಟ್ ನಿರ್ದೇಶನ

Update: 2020-03-31 21:11 IST

ಬೆಂಗಳೂರು, ಮಾ.31: ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಸಲ್ಲಿಸಲಾಗಿರುವ ತುರ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಮೌಖಿಕವಾಗಿ ಹಲವು ನಿರ್ದೇಶನಗಳನ್ನು ನೀಡಿತು.

ಸಾರ್ವಜನಿಕರ ಮೇಲಿನ ಲಾಠಿಚಾರ್ಜ್, ಬಡವರಿಗೆ, ನಿರ್ಗತಿಕರಿಗೆ ಆಹಾರ ಸರಬರಾಜು, ಅಂಗನವಾಡಿ ಕೇಂದ್ರಗಳ ಸ್ಥಗಿತ, ಪೌರಕಾರ್ಮಿಕರ ಸುರಕ್ಷತೆ ಸೇರಿ ವಿವಿಧ ಸಾರ್ವಜನಿಕ ಮಹತ್ವದ ತುರ್ತು ವಿಚಾರಗಳ ಕುರಿತ ಅರ್ಜಿಗಳಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯುೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಶೇಷ ವಿಭಾಗೀಯ ನ್ಯಾಯಪೀಠ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತು.

ಲಾಠಿ ಚಾರ್ಜ್ ವಿಚಾರದಲ್ಲಿ ನಿಯಂತ್ರಣ ವಹಿಸಬೇಕಿದೆ. ಯಾವಾಗ ಲಾಠಿಚಾರ್ಜ್ ಮಾಡಬೇಕು ಎಂಬ ಬಗ್ಗೆ ರಾಜ್ಯವ್ಯಾಪಿ ಅನ್ವಯವಾಗುವಂತೆ ನಿರ್ದಿಷ್ಟ ಮಾರ್ಗಸೂಚಿ ರಚಿಸಿ ಸುತ್ತೋಲೆ ಹೊರಡಿಸಬೇಕು ಎಂದು ಪೊಲೀಸ್ ಮಹಾ ನಿರ್ದೇಶಕರಿಗ ಹೈಕೋರ್ಟ್ ಸೂಚಿಸಿದೆ. ಅಲ್ಲದೆ, ಅಂಗನವಾಡಿಯಿಂದ ಮಕ್ಕಳು ಮತ್ತು ಗರ್ಭಿಣಿಯರಿಗೆ ಬಿಸಿಯೂಟ ವಿತರಿಸಲು ಮತ್ತು ಲಸಿಕೆ ಹಾಕುವುದನ್ನು ಮುಂದುವರಿಸಬೇಕಿದೆ. ಇನ್ನು ಇಂದಿರಾ ಕ್ಯಾಂಟೀನ್ ಮುಂದೆ ಜನಸಂದಣಿ ತಗ್ಗಿಸಲು ಅನುಸರಿಸುವ ಪರ್ಯಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ವಿಭಾಗೀಯ ನ್ಯಾಯಪೀಠ ಸರಕಾರಕ್ಕೆ ಸೂಚಿಸಿತು.

ಇನ್ನೂ ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಆಹಾರ ಸರಬರಾಜು ಮಾಡುವ ಕುರಿತು ಗ್ರಾಪಂ ಕ್ರಮ ವಹಿಸಬೇಕು. ಬೀದಿ ನಾಯಿಗಳು ಹಾಗೂ ಪ್ರಾಣಿಗಳಿಗೂ ಆಹಾರ ಒದಗಿಸಬೇಕು. ಈ ವಿಚಾರದಲ್ಲಿ ಸ್ವಯಂಸೇವಾ ಸಂಘಗಳ ನೆರವು ಪಡೆಯಬಹುದೆಂದು ವಿಭಾಗೀಯ ಪೀಠ ಸೂಚಿಸಿದೆ. ರಾಜ್ಯದಲ್ಲಿರುವ ಕೊರೋನ ಪರೀಕ್ಷಾ ಲ್ಯಾಬ್‍ಗಳ ವಿವರ ನೀಡಬೇಕು ಎಂದು ಸೂಚಿಸಿದ ನ್ಯಾಯಪೀಠ, ಈ ಸೂಚನೆಗಳ ಪಾಲನೆಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಬೇಕು ಎಂದು ಸರಕಾರಕ್ಕೆ ಸೂಚಿಸಿ ವಿಚಾರಣೆ ಎ.3ರಂದು ಮುಂದೂಡಿತು.  

ವಿಚಾರಣೆಗೆ ಸರಕಾರದ ಪರ ರಾಜ್ಯ ಅಡ್ವೊಕೇಟ್ ಪ್ರಭುಲಿಂಗ್ ನಾವದಗಿ, ಅರ್ಜಿದಾರರ ಪರ ವಕೀಲರಾದ ರಹ್ಮತುಲ್ಲಾ ಕೊತ್ವಾಲ್, ಜಿ.ಆರ್.ಮೋಹನ್ ಮಾಹಿತಿ ಒದಗಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News