'ಕೊರೋನ ಯುಗ'ದ ವಿವಾಹ ಹೇಗೆ ಗೊತ್ತೇ?

Update: 2020-04-01 04:13 GMT

ಇಂಧೋರ್, ಎ.1: ಕೊರೋನ ವೈರಸ್ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದರೂ, ಇಲ್ಲಿನ ಅಕ್ಷಯ್ ಜೈನ್ ಕುಟುಂಬಕ್ಕೆ ಅದರಿಂದ ಯಾವ ತೊಂದರೆಯೂ ಆಗಲಿಲ್ಲ. ಜೈನ್ ಅವರ ಪುತ್ರಿ ಕಿಂಜಲ್ ಸರಳ ಸಮಾರಂಭದಲ್ಲಿ ಮಂಗಳವಾರ ಹಸೆಮಣೆ ತುಳಿದರು. ಜೈನ್ ಅವರ ಮುಂದಿದ್ದುದು ಎರಡನೇ ಆಯ್ಕೆಗಳು. ಒಂದು ವಿವಾಹ ಮುಂದೂಡಿಕೆ; ಇನ್ನೊಂದು ಅದ್ದೂರಿ ಸಮಾರಂಭಕ್ಕೆ ಕಡಿವಾಣ ಹಾಕುವುದು. ಅಕ್ಷಯ್ ಜೈನ್ ಎರಡನೇ ಕ್ರಮಕ್ಕೆ ಮುಂದಾದರು.

ಎಲ್ಲ ವಿವಾಹಪೂರ್ವ ವಿಧಿವಿಧಾನ ರದ್ದುಪಡಿಸಲಾಯಿತು. ಆಹ್ವಾನಿತರ ಪಟ್ಟಿಗೆ ಗಣನೀಯ ಕಡಿವಾಣ ಬಿತ್ತು. ಎರಡೂ ಕುಟುಂಬಗಳ ನಿಕಟ ಬಂಧುಗಳನ್ನು ಮಾತ್ರ ಆಹ್ವಾನಿಸಲಾಯಿತು. ಅದು ಕೂಡಾ ಅಧಿಕಾರಿಗಳು ಸೂಚಿಸಿದ ಮುಂಜಾಗ್ರತಾ ಕ್ರಮಗಳ ಕಟ್ಟುನಿಟ್ಟಾಗಿ ಪಾಲನೆಯೊಂದಿಗೆ.

ಕಿಂಜಲ್ ಹಾಗೂ ಮುಂಬೈನಲ್ಲಿ ಕೇಂದ್ರ ಸರ್ಕಾರಿ ಉದ್ಯೋಗಿಯಾಗಿರುವ ವರ ಸರಳ ಉಡುಪು ಹಾಗೂ ಮಾಸ್ಕ್ ಧರಿಸಿದ್ದರು. ಎಲ್ಲ ಅತಿಥಿಗಳೂ ಮಾಸ್ಕ್ ಧರಿಸಿದ್ದರು. ನೂತನ ದಂಪತಿ ಹೊರಗಿನ ಹೂಮಾಲೆ ಬಳಸುವ ಬದಲು ಮುತ್ತಿನ ಹಾರ ಬದಲಿಸಿಕೊಂಡರು. ಬಂದಿದ್ದ ಎಲ್ಲರೂ ಮುಂಜಾಗ್ರತಾ ಕ್ರಮವಾಗಿ ಸ್ಯಾನಿಟೈಸರ್ ಬಳಸಿದ್ದಲ್ಲದೇ ಫೋಟೊಶೂಟ್‌ಗೆ ಕೂಡಾ ಸುರಕ್ಷಿತ ಅಂತರ ಕಾಯ್ದುಕೊಂಡರು. ಅವರ ಯೋಜನೆಯಂತೆ ವಿವಾಹ ನೆರವೇರದಿದ್ದರೂ, ಅದು ಅವರಿಗೆ ಜೀವನವಿಡೀ ನೆನಪಿನಲ್ಲಿಡುವ ಸ್ಮರಣೀಯ ಸಮಾರಂಭವಾಗಿ ಮಾರ್ಪಟ್ಟಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News