ಕೊರೋನ ಭೀತಿ ನಡುವೆಯೂ ಬಿಬಿಎಂಪಿಯ ಪೌರ ಕಾರ್ಮಿಕರಿಗಿಲ್ಲ ಆರೋಗ್ಯ ಭದ್ರತೆ !

Update: 2020-04-01 17:40 GMT

ಬೆಂಗಳೂರು, ಎ.1: ಕೊರೋನ ವೈರಸ್ ಜೀವ ಭಯದ ವಾತಾವರಣ ಸೃಷ್ಟಿ ಮಾಡಿದ್ದು, ಎಲ್ಲೆಡೆ ಲಾಕ್‍ಡೌನ್ ಆದೇಶ ಪಾಲನೆ ಆಗುತ್ತಿದೆ. ಅದರ ನಡುವೆಯೂ ಕೊರೋನ ಸೈನಿಕರೆಂದೇ ಪಾತ್ರರಾಗಿರುವ ಬಿಬಿಎಂಪಿಯ ಪೌರ ಕಾರ್ಮಿಕರು ಮಾತ್ರ ಸ್ವಚ್ಛತೆಯೇ ನಮ್ಮ ಉಸಿರು ಎಂಬ ಉದ್ದೇಶದಡಿ ಎಂದಿನಂತೆ ವಿವಿಧೆಡೆ ತೆರಳಿ ಕಸ, ತ್ಯಾಜ್ಯವನ್ನು ಸಂಗ್ರಹಿಸುವ ಮೂಲಕ ಮಾದರಿಯಾದರೂ, ಅವರಿಗೆ ಸೂಕ್ತ ರಕ್ಷಣೆ ಇಲ್ಲದೆ, ಅನಾರೋಗ್ಯಕರ ವಾತಾವರಣಕ್ಕೆ ನೂಕುವಂತೆ ಮಾಡಲಾಗಿದೆ.

ನಿತ್ಯ ಸ್ವಚ್ಛತಾ ಕಾರ್ಯಕ್ಕೆ ತೆರಳುವ ಮುನ್ನ ಕಾರ್ಮಿಕರ ಆರೋಗ್ಯದ ದೃಷ್ಟಿಯಿಂದ ಕೊಡಬೇಕಾದ ಆರೋಗ್ಯ ಕವಚ ಇತರ ಅವಶ್ಯಕ ವಸ್ತು ಸಲಕರಣೆಗಳನ್ನು ಅವರಿಗೆ ಕೊಡುತ್ತಿಲ್ಲ. ಹೀಗಾಗಿ ಇಲ್ಲಿನ ಬಿಬಿಎಂಪಿ ಪೌರ ಕಾರ್ಮಿಕರ ಆರೋಗ್ಯಕ್ಕೆ ಯಾವುದೇ ಭದ್ರತೆ ಇಲ್ಲದಂತಾಗಿದೆ. ನಿಯಮದ ಪ್ರಕಾರ ಎಲ್ಲ ಕಾರ್ಮಿಕರಿಗೆ ಬೂಟು, ಕೈ ಕವಸುಗಳು ಮತ್ತು ಮಾಸ್ಕ್ ಗಳು ಕಡ್ಡಾಯವಾಗಿ ನೀಡುವುದು ಬಿಬಿಎಂಪಿಯ ಕರ್ತವ್ಯ. ಅಷ್ಟೇ ಅಲ್ಲದೆ, ಕೊರೋನ ವೈರಸ್‍ನಿಂದ ಮತ್ತಷ್ಟು ಭದ್ರತೆ ನೀಡುವುದು ಪ್ರಮುಖವಾಗಿದೆ. ಆದರೆ ಇವೆಲ್ಲ ನಿಯಮಗಳು ಗಾಳಿಗೆ ತೂರಿ ರಕ್ಷಣಾ ಕವಚಗಳು ನೀಡದೆ ಪೌರ ಕಾರ್ಮಿಕರನ್ನು ದುಡಿಸಿಕೊಳ್ಳುತ್ತಾರೆ ಎಂದು ಪೌರ ಕಾರ್ಮಿಕರ ಮುಖಂಡರು ಆರೋಪಿಸಿದ್ದಾರೆ.

ಮಾಸ್ಕ್ ಬೇಕು: ನಗರದಲ್ಲಿ ಇದೀಗ ಹೆಚ್ಚಾಗಿ ಬಿಸಿಲು ಇದೆ. ಇದರಿಂದ ಧೂಳು ಹೆಚ್ಚಾಗಿದ್ದು, ಪ್ರತಿಯೊಬ್ಬರಿಗೂ ಕಡ್ಡಾಯವಾಗಿ ಎನ್-95 ಮಾಸ್ಕ್ ನೀಡಬೇಕು ಎನ್ನುವುದು ನಮ್ಮ ಮೊದಲ ಬೇಡಿಕೆ. ಆದರೆ, ಸಾಮಾನ್ಯ ಮಾಸ್ಕ್ ಕೆಲವರಿಗೆ ಮಾತ್ರ ಧಕ್ಕಿದ್ದು, ಉಳಿದವರು ಬಟ್ಟೆಯನ್ನೇ ಮುಖಕ್ಕೆ ಕಟ್ಟಿಕೊಂಡು ಕೆಲಸ ಮಾಡುತ್ತಿದ್ದಾರೆ ಎಂದು ಹೆಸರು ಹೇಳಲು ಇಚ್ಛಿಸದ ಪೌರ ಕಾರ್ಮಿಕರೊಬ್ಬರು ಅಳಲು ತೊಡಿಕೊಂಡರು.

ರಾಜ್ಯದೆಲ್ಲೆಡೆಯೂ ಸೌಲಭ್ಯ ಕಗ್ಗಂಟು: ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ಕಡೆಗಳಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಒಂದೊಂದು ಕಡೆಯೂ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಲೇ ಇದೆ. ಬಳ್ಳಾರಿ, ಕಲಬುರ್ಗಿ, ಶಿವಮೊಗ್ಗ, ವಿಜಯಪುರ, ತುಮಕೂರು, ಬೆಳಗಾವಿ, ಮೈಸೂರು, ದಾವಣಗೆರೆಗಳಲ್ಲಿಯೂ ಪೌರ ಕಾರ್ಮಿಕರ ಸಮಸ್ಯೆ ಜೀವಂತವಾಗಿದೆ.

ಇನ್ನು ಕೊರೋನ ವೈರಸ್ ಹರಡುತ್ತಿದ್ದು, ಪೌರ ಕಾರ್ಮಿಕರಲ್ಲೂ ಮತ್ತಷ್ಟು ಆತಂಕ ಮನೆ ಮಾಡಿದೆ. ಆದರೆ, ಸರಕಾರ ಮತ್ತು ಬಿಬಿಎಂಪಿ ಮಾತ್ರ ಪೌರ ಕಾರ್ಮಿಕರ ತುರ್ತು ಅಗತ್ಯಗಳತ್ತ ಗಮನ ಹರಿಸುತ್ತಿಲ್ಲ. ಸೂಕ್ತ ರಕ್ಷಣೆಯನ್ನೂ ನೀಡುತ್ತಿಲ್ಲ. ಸ್ವಲ್ಪ ದನಿ ಎತ್ತರಿಸಿ ಮಾತನಾಡಿದರೆ ಕೆಲಸಕ್ಕೇ ಸಂಚಕಾರ ಎಂದು ಪೌರಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.

ಸೌಲಭ್ಯ ಕಡ್ಡಾಯ ?

ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಪೌರಕಾರ್ಮಿಕರಿಗೆ ಸುಮಾರು 22 ಸೌಲಭ್ಯಗಳನ್ನು ಒದಗಿಸಬೇಕು. ವಿಶ್ರಾಂತಿ ಗೃಹ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಪ್ರಥಮ ಚಿಕಿತ್ಸಾ ಸೌಲಭ್ಯ, ಶುಚಿತ್ವ ಸೌಲಭ್ಯ, ಸಮವಸ್ತ್ರ, ಹ್ಯಾಂಡ್ ಗ್ಲೋವ್ಸ್, ಟೋಪಿ, ರಬ್ಬರ್ ಬೂಟುಗಳು, ಚಪ್ಪಲಿ, ಫಿನೈಲ್ ಮತ್ತು ಬ್ಲೀಚಿಂಗ್ ಪೌಡರನ್ನು ಪಾಲಿಕೆಯಿಂದ ಒದಗಿಸಬೇಕು.

ನಮಗೂ ಭಯ ಇದೆ

ಕೊರೋನ ಸೋಂಕು ಸಂಬಂಧ ನಮ್ಮ ಬಡಾವಣೆ ಮತ್ತು ಮನೆಗಳಲ್ಲೂ ಆತಂಕ ಇದೆ. ಅನೇಕರು ತಾವು ಕೆಲಸಕ್ಕೆ ಹೋಗಬೇಡಿ ಎಂದು ಹೇಳುತ್ತಾರೆ. ಆದರೆ, ಸ್ವಚ್ಛತೆ ದೃಷ್ಟಿಯಿಂದ ನಾವು ಬೀದಿಗೆ ಬರುತ್ತೇವೆ. ಸರಕಾರ ನಮಗೆ ರಕ್ಷಣೆ ನೀಡಬೇಕು. ಜೊತೆಗೆ ಆರೋಗ್ಯ ವಿಮೆ ಘೋಷಿಸಬೇಕು ಎಂದು ಹೆಸರು ಹೇಳು ಇಚ್ಛಿಸದ ಪೌರ ಕಾರ್ಮಿಕರು ಆಗ್ರಹಿಸಿದ್ದಾರೆ.

Writer - -ಸಮೀರ್ ದಳಸನೂರು

contributor

Editor - -ಸಮೀರ್ ದಳಸನೂರು

contributor

Similar News