ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಕೊರೋನ ಚಿಕಿತ್ಸೆಗೆ 200 ಹಾಸಿಗೆಗಳ ವ್ಯವಸ್ಥೆ: ಡಿಸಿಎಂ ಡಾ.ಅಶ್ವಥ್ ನಾರಾಯಣ್

Update: 2020-04-01 17:50 GMT

ಬೆಂಗಳೂರು, ಏ.1: ನಗರದ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಕೊವಿಡ್-19 ಸಂಬಂಧಿಸಿದ ಚಿಕಿತ್ಸೆಗಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ 200 ಹಾಸಿಗೆಗಳನ್ನು ಮೀಸಲಿರಿಸಿದ್ದು, ಅದರ ಪತ್ರವನ್ನು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವಥ್ ನಾರಾಯಣ್ ಸ್ವೀಕರಿಸಿದರು.

ನಂತರ ಮಾತನಾಡಿದ ಅವರು, ಕೊರೋನ ವೈರೆಸ್ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯ ಸರಕಾರ ಹಾಗೂ ಬಿಬಿಎಂಪಿ ವತಿಯಿಂದ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾದಲ್ಲಿ ಸಾಮರ್ಥ್ಯ ನಿಭಾಯಿಸಲು ಎಲ್ಲಾ ರೀತಿಯ ಪೂರ್ವಸಿದ್ದತೆಗಳನ್ನು ಮಾಡಿಕೊಂಡಿದೆ. ಈ ನಿಟ್ಟಿನಲ್ಲಿ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಕೊವಿಡ್-19 ಸಂಬಂಧಿಸಿದ ಚಿಕಿತ್ಸೆಗಾಗಿ ಅತ್ಯಾಧುನಿಕ ಸೌಲಭ್ಯಗಳುಳ್ಳ 200 ಆಸನಗಳನ್ನು ಮೀಸಲಿರಿದೆ ಎಂದು ತಿಳಿಸಿದರು.

ಕೋವಿಡ್-19 ಚಿಕಿತ್ಸೆಗಾಗಿ ಮೀಸಲಿರಿಸಿರುವ ಬ್ಲಾಕ್‍ನಲ್ಲಿ 200 ಆಸನಗಳ ವ್ಯವಸ್ಥೆ, ಅವಶ್ಯಕ ವೆಂಟಿಲೇಟರ್ಸ್, ಐಸೋಲೇಷನ್ ಕೊಠಡಿ, ಐಸಿಯು ಕೊಠಡಿ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸಿಕೊಂಡಿದ್ದಾರೆ. ಸರಕಾರ ಹಾಗೂ ಬಿಬಿಎಂಪಿ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಟೆಲಿ ಕನ್ಸಲ್ಟೇಷನ್ ಸೇವೆ ಜಾರಿ: ಕೊರೋನ ವೈರೆಸ್ ಸೋಂಕಿನ ಲಕ್ಷಣಗಳು, ಸಂಬಂಧಿತ ಆರೋಗ್ಯ ಸಮಸ್ಯೆಗಳು ಹಾಗೂ ಈ ಕುರಿತ ಯಾವುದೇ ಸಂದೇಹಗಳನ್ನು ಪರಿಹರಿಸಿಕೊಳ್ಳಲು ಸಾರ್ವಜನಿಕರು ನುರಿತ ವೈದ್ಯರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಲು ಫೋರ್ಟಿಯಾ ಮೆಡಿಕಲ್ ಸಂಸ್ಥೆ ವತಿಯಿಂದ ‘ಟೆಲಿ ಕನ್ಸಲ್ಟೇಷನ್' ಸೇವೆ ಜಾರಿಗೊಳಿಸಿದ್ದು, ಉಚಿತ ಸಹಾಯವಾಣಿ 080-66744788ಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆಯಬಹುದಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವಥ್ ನಾರಾಯಣ್ ತಿಳಿಸಿದರು.

ಕೊರೋನ ಮಾತ್ರವಲ್ಲದೆ ಇನ್ನಿತ ಆರೋಗ್ಯ ಸಮಸ್ಯೆ ಬಗ್ಗೆಯೂ ಮಾಹಿತಿ ಪಡೆಯಬಹುದಾಗಿದೆ. ವೈದ್ಯರ ತಂಡ ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ 8ರವರೆಗೆ ಹಾಗೂ ಭಾನುವಾರ ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಸಾರ್ವಜನಿಕರಿಂದ ಕರೆ ಸ್ವೀಕರಿಸಿ ಸೂಕ್ತ ಮಾರ್ಗದರ್ಶನ ನೀಡಲಿದೆ. ಅಲ್ಲದೆ, ವೆಬ್‍ಸೈಟ್ ಲಿಂಕ್: https://t.co/LqPmTkiEnY ಗೆ ಭೇಟಿ ನೀಡಿ ಅಲ್ಲಿಂದಲೂ ವೈದ್ಯರ ಸಲಹೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಈ ವೇಳೆ ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಆಸ್ಪತ್ರೆ ನಿರ್ದೇಶಕ ಡಾ. ಪಾಲ್ ಪಾರ್ಥಜಾಮ್, ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್, ಸಾರ್ವಜನಿಕ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ ರಾಜು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News