90 ದಿನಗಳವರೆಗೆ ಕೆಡದ ನಂದಿನಿ ಹಾಲು ಮಾರುಕಟ್ಟೆಗೆ: ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ

Update: 2020-04-01 18:20 GMT

ಬೆಂಗಳೂರು, ಎ.1: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಆಗಿರುವುದರಿಂದ ಹಾಲು ಸಂಗ್ರಹಕ್ಕೆ ಸಮಸ್ಯೆಯಾಗುತ್ತಿದ್ದು, ಇದನ್ನು ನಿವಾರಿಸುವ ನಿಟ್ಟಿನಲ್ಲಿ 90 ದಿನಗಳವರೆಗೆ ಕೆಡದಂತಹ ನಂದಿನಿ ಹಾಲಿನ ಪ್ಯಾಕೆಟನ್ನು ತೃಪ್ತಿ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡಲಾಗುತ್ತಿದೆ ಎಂದು ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಬಮೂಲ್ ವತಿಯಿಂದ ಇಂದಿನಿಂದಲೇ(ಬುಧವಾರ) ತೃಪ್ತಿ ಹೆಸರಿನಲ್ಲಿ ನಂದಿನಿ ಹಾಲನ್ನು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಅರ್ಧ ಲೀಟರ್ ಫ್ಲೆಕ್ಸಿ ಪ್ಯಾಕಿನಲ್ಲಿ ಸಂಗ್ರಹಿಸಲಾದ ಹಾಲನ್ನು ಮಾರಾಟ ಮಾಡಲಾಗುತ್ತಿದೆ. ಇದರ ಬೆಲೆ 23ರೂ. ಆಗಿದ್ದು, ಮುಂದಿನ ದಿನಗಳಲ್ಲಿ ಒಂದು ಲೀಟರ್ ಪ್ಯಾಕ್‍ನಲ್ಲೂ ಹಾಲನ್ನು ಮಾರಾಟ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ತೃಪ್ತಿ ಹಾಲು ಹೆಚ್ಚಿನ ಪೋಷಕಾಂಶವನ್ನು ಹೊಂದಿದ್ದು, ಐದು ಪದರದ ಫ್ಲೆಕ್ಸಿ ಪ್ಯಾಕಿನಲ್ಲಿರುವ ಹಾಲನ್ನು 90 ದಿನಗಳವರೆಗೆ ಉಪಯೋಗಿಸಬಹುದಾಗಿದೆ. ಈ ಹಾಲಿನ ವಿಶೇಷ ಏನೆಂದರೆ, ಇದನ್ನು ಬ್ರಿಡ್ಜ್ ನಲ್ಲಿ ಇಡಲೇಬೇಕೆಂಬ ಅಗತ್ಯ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಹೈನುಗಾರರಿಂದ ಹಾಲು ಸಂಗ್ರಹ ನಿಲ್ಲಿಸಲ್ಲ: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಹೈನುಗಾರರಿಂದ ಹಾಲನ್ನು ಪಡೆಯುವುದನ್ನು ಬಮೂಲ್ ನಿಲ್ಲಿಸಲಿದೆ ಎಂಬ ವದಂತಿಗಳು ಹರಡಿತ್ತು. ಆದರೆ, ಇದು ಸತ್ಯಕ್ಕೆ ದೂರವಾಗಿದ್ದು, ಯಾವುದೇ ಕಾರಣಕ್ಕೂ ಹಾಲು ಉತ್ಪಾದರಿಂದ ಹಾಲು ಸಂಗ್ರಹಿಸುವುದು ನಿಲ್ಲಿಸಲ್ಲ. ಯಾರೂ ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲವೆಂದು ಅವರು ಹೇಳಿದರು.

ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರದಲ್ಲಿ ಬಮೂಲ್ ಕಾರ್ಯಾಚರಿಸುತ್ತಿದೆ. ಈ ವ್ಯಾಪ್ತಿಯಲ್ಲಿ ನಿತ್ಯ 14.5ಲಕ್ಷ ಲೀ.ಹಾಲನ್ನು ಸಂಗ್ರಹಿಸಲಾಗುತ್ತಿದೆ. ಈ ಪೈಕಿ 9 ಲಕ್ಷ ಹಾಲು ಬೆಂಗಳೂರಿನಲ್ಲಿ ಮಾರಾಟವಾಗುತ್ತಿದೆ. ಉಳಿದದ್ದನ್ನು ಹಾಲಿನ ಪುಡಿ ಹಾಗೂ ಇತರೆ ಉತ್ಪನ್ನಗಳಿಗೆ ಬಳಕೆಯಾಗುತ್ತಿದೆ. ಕನಕಪುರ ಘಟಕದಲ್ಲಿ 4 ಲಕ್ಷ ಲೀ. ಹಾಲನ್ನು ಪೌಡರ್, ಚೀಸ್ ಹಾಗೂ ಇತರ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News