ಲಾಕ್ ಡೌನ್ ಉಲ್ಲಂಘನೆ: ಬೆಂಗಳೂರಿನಲ್ಲಿ 5,678 ವಾಹನಗಳು ಜಪ್ತಿ

Update: 2020-04-01 18:29 GMT

ಬೆಂಗಳೂರು, ಎ.1: ಲಾಕ್‍ಡೌನ್ ಉಲ್ಲಂಘಿಸಿ, ಅನಗತ್ಯವಾಗಿ ಸಂಚರಿಸುವ ವಾಹನಗಳ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿರುವ ನಗರ ಪೊಲೀಸರು, ಬುಧವಾರ 5,678 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಲಿಯವರೆಗೆ ವಶಪಡಿಸಿಕೊಂಡ ವಾಹನಗಳನ್ನು ಠಾಣೆಗೆ ತೆಗೆದುಕೊಂಡು ಹೋಗಿ, ಮಾಲಕರನ್ನು ಕರೆಸಿ, ಎಚ್ಚರಿಕೆ ನೀಡಿ ವಾಪಸ್ಸು ನೀಡಲಾಗಿದೆ. ಆದರೆ, ಇಂದಿನಿಂದ ವಶಪಡಿಸಿಕೊಂಡ ವಾಹನಗಳನ್ನು ಲಾಕ್‍ಡೌನ್ ಮುಗಿಯುವವರೆಗೆ ವಾಪಸ್ ನೀಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ರಾತ್ರಿಯಿಂದ ಇಲ್ಲಿಯವರೆಗೆ 5,229 ದ್ವಿಚಕ್ರ ವಾಹನಗಳು 185 ಆಟೋಗಳು, 264 ಕಾರುಗಳು ಸೇರಿ 5,678 ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ನಗರದ ಎಲ್ಲ ವಿಭಾಗಗಳಲ್ಲಿ ವಾಹನ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಅನಗತ್ಯವಾಗಿ ರಸ್ತೆಗೆ ವಾಹನ ತೆಗೆದುಕೊಂಡು ಬರುವವರ ವಿಚಾರಣೆ ನಡೆಸಲಾಗುತ್ತಿದೆ. ಅಲ್ಲದೆ, ಸೂಕ್ತ ಕಾರಣ ನೀಡದೆ ಸಂಚರಿಸುವ ವಾಹನಗಳನ್ನು ಮುಲಾಜಿಲ್ಲದೆ ವಶಪಡಿಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಕೊರೋನ ಸೋಂಕು ಹರಡುವುದನ್ನು ತಡೆಯಲು ಜಾರಿಗೊಳಿಸಿರುವ ಲಾಕ್‍ಡೌನ್ ಉಲ್ಲಂಘಿಸಿ ವಾಹನಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳಲು ಬುಧವಾರ ನಗರದ ಪುರಭವನದ ಬಳಿ ಸಿಬ್ಬಂದಿ ಜೊತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಖುದ್ದು ವಾಹನ ತಪಾಸಣೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News