ಆಹಾರ ಧಾನ್ಯ ಕೊರತೆಯಾಗದಂತೆ ತಡೆಯಲು ಹರಸಾಹಸ

Update: 2020-04-02 04:33 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಎ.2: ಭಾರತದ ಆಹಾರ ನಿಗಮ ಸಾಮಾನ್ಯವಾಗಿ ಈ ಅವಧಿಯಲ್ಲಿ ಗೋಧಿ ಖರೀದಿಯಲ್ಲಿ ನಿರತವಾಗಿರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದ್ದು, ಆಹಾರಧಾನ್ಯ ಕೊರತೆ ಇರುವ ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಂಥ ರಾಜ್ಯಗಳಲ್ಲಿ ಲಾಕ್‌ಡೌನ್‌ನಿಂದಾಗಿ ಯಾವುದೇ ಆಹಾರ ಕೊರತೆಯಾಗದಂತೆ ತಡೆಯುವ ದೃಷ್ಟಿಯಿಂದ ಪೂರೈಕೆಗೆ ಒತ್ತು ನೀಡಿದೆ. ಮಾಮೂಲಿಯಾಗಿ ವಿತರಿಸುವ ದುಪ್ಪಟ್ಟು ಪ್ರಮಾಣದಲ್ಲಿ ಆಹಾರಧಾನ್ಯಗಳನ್ನು ವಿತರಿಸಲು ಈ ರಾಜ್ಯಗಳು ನಿರ್ಧರಿಸಿದ್ದು, ಲಾಕ್‌ಡೌನ್ ಅವಧಿಯಲ್ಲಿ 80 ಕೋಟಿ ಬಡವರಿಗೆ ಆಹಾರ ಕೊರತೆಯಾಗದಂತೆ ತಡೆಯಲು ಹರಸಾಹಸ ಮಾಡಲಾಗುತ್ತಿದೆ.

ಮಂಗಳವಾರ ಭಾರತದ ಆಹಾರ ನಿಗಮ ದಾಖಲೆ ಪ್ರಮಾಣದ ಅಂದರೆ 58 ರ್ಯಾಕ್ ಆಹಾರಧಾನ್ಯವನ್ನು ಭಾರತೀಯ ರೈಲ್ವೆ ಮೂಲಕ ಸಾಗಿಸಿದ್ದು, ಸಾಮಾನ್ಯವಾಗಿ 30-35 ರ್ಯಾಕ್‌ಗಳನ್ನು ಸಾಗಿಸಲಾಗುತ್ತದೆ. ಒಂದೇ ದಿನ ಸುಮಾರು 1.6 ಲಕ್ಷ ಟನ್ ಅಕ್ಕಿ ಹಾಗೂ ಗೋಧಿ ಸಾಗಿಸಲಾಗಿದೆ. ಅಂತೆಯೇ ಆಹಾರ ಧಾನ್ಯ ಅಧಿಕ ಇರುವ ಪಂಜಾಬ್, ಹರ್ಯಾಣ, ಆಂಧ್ರಪ್ರದೇಶ ಹಾಗೂ ತೆಲಂಗಾಣದಿಂದ 55 ರ್ಯಾಕ್ ಆಹಾರಧಾನ್ಯ ಸರಬರಾಜು ಆಗಿದೆ. ಪಂಜಾಬ್‌ನಲ್ಲಿ ಹೆಚ್ಚು ಉತ್ಪಾದನೆ ಹಾಗೂ ದಾಸ್ತಾನಿನ ಕಾರಣ ಶೇಕಡ 60ರಷ್ಟು ಆಹಾರಧಾನ್ಯವನ್ನು ರಾಜ್ಯದಿಂದ ಪೂರೈಸಲಾಗುತ್ತಿದೆ.

ಸದ್ಯ 5 ಕೆಜಿ ಆಹಾರಧಾನ್ಯವನ್ನು ಪಿಡಿಎಸ್ ವ್ಯವಸ್ಥೆಯಡಿ ಪಡೆಯುವ ಎಲ್ಲರಿಗೂ ಹೆಚ್ಚುವರಿಯಾಗಿ 5 ಕೆಜಿಯನ್ನು ಉಚಿತವಾಗಿ ವಿತರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮಾರ್ಚ್ 24ರಂದು ಪ್ರಕಟಿಸಿದ್ದು, ಈ ಹಿನ್ನೆಲೆಯಲ್ಲಿ ದಿನಕ್ಕೆ 40 ರ್ಯಾಕ್‌ಗಳಂತೆ 350ಕ್ಕೂ ಹೆಚ್ಚು ರ್ಯಾಕ್‌ಗಳಲ್ಲಿ ಹತ್ತು ಲಕ್ಷ ಟನ್ ಅಹಾರಧಾನ್ಯವನ್ನು ವಿವಿಧೆಡೆಗಳಿಗೆ ಸಾಗಿಸಿದೆ. ಎಪ್ರಿಲ್ 15ರ ವೇಳೆಗೆ ಈ ವ್ಯವಸ್ಥೆಯಡಿ ಉಚಿತ ಆಹಾರಧಾನ್ಯ ವಿತರಣೆ ಆರಂಭವಾಗಲಿದೆ.

ಎಪ್ರಿಲ್‌ನಲ್ಲಿ ಸುಮಾರು 50 ಲಕ್ಷ ಟನ್ ಆಹಾರಧಾನ್ಯ ಸಾಗಾಟಕ್ಕೆ ಉದ್ದೇಶಿಸಲಾಗಿದೆ ಎಂದು ಅಧ್ಯಕ್ಷ ಡಿ.ವಿ.ಪ್ರಸಾದ್ ಹೇಳಿದ್ದಾರೆ. ಎಫ್‌ಸಿಐ ಬಳಿ ಸಾಕಷ್ಟು ಅಕ್ಕಿ ಹಾಗೂ ಗೋಧಿ ದಾಸ್ತಾನು ಇದ್ದು, ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಘೋಷಿಸಿರುವ ಹಂಚಿಕೆ ಸೇರಿದಂತೆ ಎಲ್ಲ ರಾಜ್ಯಗಳ ಬೇಡಿಕೆ ಈಡೇರಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ರಯಾಣಿಕ ರೈಲುಗಳು ಇಲ್ಲದಿರುವುದರಿಂದ ಫುಡ್ ಟ್ರೈನ್‌ಗಳು ಪಂಜಾಬ್‌ನಿಂದ ಅಸ್ಸಾಂಗೆ 3-4 ದಿನಗಳಲ್ಲಿ ಸಂಚರಿಸುತ್ತವೆ. ಸಾಮಾನ್ಯವಾಗಿ ಈ ಸಂಚಾರಕ್ಕೆ 5-6 ದಿನ ಬೇಕಾಗಿತ್ತು. ಗೋದಾಮುಗಳು ಕ್ಷಿಪ್ರವಾಗಿ ಖಾಲಿ ಮಾಡಿದಷ್ಟೂ ಶೀಘ್ರವಾಗಿ ಹೊಸ ದಾಸ್ತಾನು ಪೂರೈಸಬಹುದಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News