ಸಿಖ್ ಆಧ್ಯಾತ್ಮಿಕ ಗಾಯಕ, ಪದ್ಮಶ್ರೀ ವಿಜೇತ ನಿರ್ಮಲ್ ಸಿಂಗ್ ಕೊರೋನಗೆ ಬಲಿ

Update: 2020-04-02 10:53 GMT

ಅಮೃತಸರ್ : ಪದ್ಮಶ್ರೀ ಪ್ರಶಸ್ತಿ ವಿಜೇತ ಸಿಖ್ ಆಧ್ಯಾತ್ಮಿಕ ಗಾಯಕ, 62 ವರ್ಷದ ನಿರ್ಮಲ್ ಸಿಂಗ್ ಇಂದು ಬೆಳಗ್ಗೆ ಅಮೃತಸರ್ ನಗರದಲ್ಲಿನ ಆಸ್ಪತ್ರೆಯೊಂದರಲ್ಲಿ ಕೊರೋನ ಸೋಂಕಿನಿಂದ ನಿಧನರಾಗಿದ್ದಾರೆ.

ಅಮೃತಸರ್‍ನ ಸ್ವರ್ಣ ಮಂದಿರದಲ್ಲಿನ ಮಾಜಿ ಹಝೂರಿ  ಆಗಿದ್ದ ನಿರ್ಮಲ್ ಸಿಂಗ್ ಅವರನ್ನು ನಿನ್ನೆ ವೆಂಟಿಲೇಟರ್‍ ನಲ್ಲಿರಿಸಲಾಗಿತ್ತು. ಅವರಿಗೆ ಅಸ್ತಮಾ ಸಮಸ್ಯೆಯೂ ಇದ್ದುದರಿಂದ ಕೊರೋನ ಸೋಂಕಿನಿಂದ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು ಎಂದು ಪಂಜಾಬ್ ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆಗಾಗಿ ನೇಮಕಗೊಂಡಿರುವ ಹಿರಿಯ ಅಧಿಕಾರಿ ಕೆ ಬಿ ಎಸ್ ಸಿದ್ದು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ವಿದೇಶ ಪ್ರವಾಸದಿಂದ ವಾಪಸಾಗಿದ್ದ ಅವರು ನಂತರ ದಿಲ್ಲಿ, ಚಂಡೀಗಢ ಹಾಗೂ ಇತರ ಪ್ರದೇಶಗಳಲ್ಲಿ ದೊಡ್ಡ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದ್ದರು. ಮಾರ್ಚ್ 19ರಂದು ಚಂಡೀಗಢದ ಮನೆಯೊಂದರಲ್ಲಿ ಕೀರ್ತನ್ ಕಾರ್ಯಕ್ರಮವನ್ನೂ ತಮ್ಮ ಕುಟುಂಬ ಸದಸ್ಯರು ಹಾಗೂ ಸಂಬಂಧಿಗಳೊಂದಿಗೆ ಅವರು ಆಯೋಜಿಸಿದ್ದರು. ಅವರ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ, ಚಾಲಕ ಹಾಗೂ ಆರು ಮಂದಿ ಇತರರನ್ನು ಈಗಾಗಲೇ ಆಸ್ಪತ್ರೆಯ ಐಸೊಲೇಶನ್ ವಾರ್ಡ್‍ನಲ್ಲಿರಿಸಲಾಗಿದೆ.

ಪಂಜಾಬ್‍ ನಲ್ಲಿ ಕೊರೋನ ಸೋಂಕಿಗೆ ಬಲಿಯಾದ ಐದನೇ ವ್ಯಕ್ತಿಯಾಗಿರುವ ನಿರ್ಮಲ್ ಸಿಂಗ್ 2009ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು.  ಸಿಖರ ಪವಿತ್ರ ಗುರು ಗ್ರಂಥ್ ಸಾಹೀಬ್‍ನಲ್ಲಿನ ಗುರ್ಬಾನಿಯ ಎಲ್ಲಾ 31 `ರಾಗ್' ಕುರಿತು ಜ್ಞಾನ ಹೊಂದಿದವರೆಂದು ಅವರು ಖ್ಯಾತಿಗೊಳಗಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News