ಕೊರೋನ ವಿಚಾರದಲ್ಲಿ ಒಂದು ಧರ್ಮವನ್ನು ಗುರಿಯಾಗಿಸುವುದು ಅಪಾಯಕಾರಿ: ಮೌಲಾನ ಸಗೀರ್ ಅಹ್ಮದ್ ರಶಾದಿ

Update: 2020-04-02 16:04 GMT

ಬೆಂಗಳೂರು. ಎ.2: ದಿಲ್ಲಿಯ ಮರ್ಕಝ್ ನಿಝಾಮುದ್ದೀನ್‍ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಮುಂದಿಟ್ಟುಕೊಂಡು ದೇಶದಲ್ಲಿ ‘ಕೊರೋನ ಸೋಂಕು’ ಹರಡುವ ವಿಚಾರದಲ್ಲಿ ಒಂದು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸಿಕೊಂಡು ಮಾಧ್ಯಮಗಳು ನಡೆದುಕೊಳ್ಳುತ್ತಿರುವ ರೀತಿ ಅಪಾಯಕಾರಿ ಎಂದು ಅಮೀರೆ ಶರೀಅತ್ ಕರ್ನಾಟಕ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿ ಕಳವಳ ವ್ಯಕ್ತಪಡಿಸಿದರು.

ಗುರುವಾರ ನಗರದ ಗೋವಿಂದಪುರದಲ್ಲಿರುವ ದಾರೂಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು)ನಲ್ಲಿ ನಡೆದ ಧಾರ್ಮಿಕ ಮುಖಂಡರು, ಸಂಘ ಸಂಸ್ಥೆಗಳ ಪ್ರತಿನಿಧಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.

ನಿಝಾಮುದ್ದೀನ್‍ನಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲೆ ದಿಲ್ಲಿ ಹಾಗೂ ದೇಶದ ವಿವಿಧ ರಾಜ್ಯಗಳಲ್ಲಿ ಸಾವಿರಾರು ಮಂದಿ ಒಂದೆಡೆ ಸೇರಿದಂತಹ ಹಲವಾರು ಕಾರ್ಯಕ್ರಮಗಳು ಜರುಗಿವೆ. ಆದರೆ, ಈ ಬಗ್ಗೆ ಮಾಧ್ಯಮಗಳಲ್ಲಿ ಯಾಕೆ ಚರ್ಚೆಯಾಗುತ್ತಿಲ್ಲ ಎಂದು ಅವರು ಪ್ರಶ್ನಿಸಿದರು.

ಮರ್ಕಝ್‍ನಲ್ಲಿ ಇದೆ ಮೊದಲ ಬಾರಿಗೆ ಸಾವಿರಾರು ಜನ ಸೇರಿದ್ದಲ್ಲ. ಸ್ವಾತಂತ್ರ್ಯ ಪೂರ್ವದಿಂದಲೂ ಅದು ಒಂದು ಧಾರ್ಮಿಕ ಕೇಂದ್ರವಾಗಿದೆ. ದೇಶ, ವಿದೇಶಗಳಿಂದ ಪ್ರತಿ ವರ್ಷ ಸಾವಿರಾರು ಜನ ಅಲ್ಲಿ ಸೇರುತ್ತಾರೆ. ಲಾಕ್‍ಡೌನ್ ಘೋಷಣೆಯಾಗುತ್ತಿದ್ದಂತೆ ಅಲ್ಲಿನ ಮುಖ್ಯಸ್ಥರು ದಿಲ್ಲಿ ಸರಕಾರಕ್ಕೆ, ಪೊಲೀಸರಿಗೆ ಮಾಹಿತಿ ನೀಡಿ, ಇಲ್ಲಿರುವ ಜನರನ್ನು ಅವರ ಸ್ಥಳಗಳಿಗೆ ತೆರಳಲು ಅನುಮತಿ ನೀಡುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅನಿವಾರ್ಯವಾಗಿ ಅವರು ಅಲ್ಲಿ ಉಳಿದುಕೊಳ್ಳಬೇಕಾಯಿತು ಎಂದು ಅವರು ಹೇಳಿದರು.

ಆದರೆ, ಈಗ ದಿಲ್ಲಿ ಪೊಲೀಸರು ಮರ್ಕಝ್‍ನ ಮುಖ್ಯಸ್ಥರ ವಿರುದ್ಧವೇ ಎಫ್‍ಐಆರ್ ದಾಖಲಿಸಿರುವುದು ಖಂಡನೀಯ. ಇಡೀ ದೇಶ ಕೊರೋನ ವೈರಸ್ ವಿರುದ್ಧ ಹೋರಾಡುತ್ತಿದೆ. ಈ ನಿಟ್ಟಿನಲ್ಲಿ ಸರಕಾರ ಕೈಗೊಳ್ಳುವ ಎಲ್ಲ ತೀರ್ಮಾನಗಳಿಗೆ ನಮ್ಮ ಸಂಪೂರ್ಣ ಬೆಂಬಲ ನೀಡಿದ್ದೇವೆ. ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ನಿಲ್ಲಿಸಲಾಗಿದೆ. ಶುಕ್ರವಾರದ ನಮಾಝ್ ಅನ್ನು ನಿರ್ಬಂಧಿಸಿದ್ದೇವೆ. ಅಲ್ಲದೆ, ತಮ್ಮ ಮನೆಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮನವಿಗಳನ್ನು ಸಲ್ಲಿಸಲಾಗಿದೆ ಎಂದು ಸಗೀರ್ ಅಹ್ಮದ್ ರಶಾದಿ ತಿಳಿಸಿದರು.

ಜಮಾತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಡಾ.ಬೆಳಗಾಮಿ ಮುಹಮ್ಮದ್ ಸಾದ್ ಮಾತನಾಡಿ, ಕೇಂದ್ರ ಸರಕಾರ ಪೂರ್ವಸಿದ್ಧತೆಗಳಿಲ್ಲದೆ ಏಕಾಏಕಿ ಲಾಕ್‍ಡೌನ್ ಘೋಷಿಸಿದ ಪರಿಣಾಮವಾಗಿ ದೇಶದ ವಿವಿಧ ಭಾಗಗಳಲ್ಲಿರುವ ವಲಸಿಗ ಕಾರ್ಮಿಕರು ದಿಕ್ಕು ತೋಚದೆ ಸಾವಿರಾರು ಸಂಖ್ಯೆಯಲ್ಲಿ ಗುಂಪು ಗುಂಪಾಗಿ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ ಎಂದರು.

ಮರ್ಕಝ್‍ನಲ್ಲಿ ಒಂದೆಡೆ ಸೇರಿದ್ದವರನ್ನೆಲ್ಲ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಕೆಲಸ ನಡೆಯುತ್ತಿದೆ. ಮರ್ಕಝ್‍ನಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರೂ ಸ್ವಯಂಪ್ರೇರಿತವಾಗಿ ಆರೋಗ್ಯ ತಪಾಸಣೆಗೊಳಪಡುತ್ತಿದ್ದಾರೆ. ಅಲ್ಲದೆ, ನಿಝಾಮುದ್ದೀನ್‍ನಲ್ಲಿಯೂ ಸರಕಾರ, ಪೊಲೀಸ್, ಆರೋಗ್ಯ ಸಿಬ್ಬಂದಿಗಳಿಗೆ ಸಹಕಾರ ನೀಡಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಿಟಿ ಮಾರುಕಟ್ಟೆ ಜಾಮಿಯಾ ಮಸೀದಿಯ ಖತೀಬ್ ಮೌಲಾನ ಮಖ್ಸೂದ್ ಇಮ್ರಾನ್ ರಶಾದಿ, ಮುಫ್ತಿ ಶಂಶುದ್ದೀನ್ ಬಜ್ಲಿ, ಮೌಲಾನ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಮೌಲಾನ ಸೈಯ್ಯದ್ ಶಬ್ಬೀರ್ ಅಹ್ಮದ್ ನದ್ವಿ, ಡಾ.ತಾಹಾ ಮತೀನ್, ಸೈಯ್ಯದ್ ಶಾಹೀದ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News