ಕೊರೋನ ತಾತ್ಕಾಲಿಕ, ಆದರೆ ಇವೆರಡರಿಂದ ಜಗತ್ತಿನಲ್ಲಿ ಕಂಡು ಕೇಳರಿಯದ ವಿನಾಶ

Update: 2020-04-02 16:25 GMT
Photo: wikipedia

ಕೊರೋನ ವೈರಸ್ ನಿಂದ ಗಂಭೀರ ಪರಿಣಾಮಗಳನ್ನು ಜಗತ್ತು ಎದುರಿಸಬೇಕಾಗಿದೆ. ಆದರೆ ಅದರಿಂದ ಉಂಟಾಗುವ ಸವಾಲು ಹಾಗು ಸಂಕಟ ತಾತ್ಕಾಲಿಕ. ಪರಮಾಣು ಯುದ್ಧ ಹಾಗು ಜಾಗತಿಕ ತಾಪಮಾನ ಏರಿಕೆ ಇಡೀ ಮನುಕುಲಕ್ಕೆ ಕೊರೋನಕ್ಕಿಂತಲೂ ಅತ್ಯಂತ ಹೆಚ್ಚು ಅಪಾಯಕಾರಿಯಾಗಲಿವೆ. ಕೊರೋನದ ಪರಿಣಾಮ ಭೀಕರವಾಗಲಿದೆ. ಆದರೆ ಅಲ್ಲಿಂದ ಮತ್ತೆ ಪರಿಸ್ಥಿತಿ ಸುಧಾರಿಸುತ್ತದೆ. ಆದರೆ ಇವೆರಡು ಅಪಾಯಗಳಿಂದ ಆಗುವ ವಿನಾಶ ತಾತ್ಕಾಲಿಕ ಅಲ್ಲ, ಬದಲಿಗೆ ಅದು ಅಂತ್ಯವಾಗಲಿದೆ ಎಂದು ಜಗದ್ವಿಖ್ಯಾತ ಚಿಂತಕ ನೋಮ್ ಚಾಮ್ಸ್ಕಿ ಜನರನ್ನು ಎಚ್ಚರಿಸಿದ್ದಾರೆ.

ಈ ಅಪಾಯಗಳು ಜಾಗತಿಕವಾಗಿ ಕಂಡುಬರುತ್ತಿರುವ ನವ ಉದಾರೀಕರಣ ನೀತಿಗಳಿಂದ ಇನ್ನಷ್ಟು ತೀವ್ರ ಸ್ವರೂಪ ಪಡೆದಿದ್ದು ಕೊರೋನ ಅಂತ್ಯವಾದ ಬಳಿಕ ಇನ್ನಷ್ಟು ಸರ್ವಾಧಿಕಾರಿ ಸ್ವರೂಪದ ಕಠಿಣ ಸರಕಾರಗಳು ಅಥವಾ ಮಾನವೀಯ ಸ್ಪರ್ಶದ ಮೂಲಕ ಸಮಾಜ ಕಟ್ಟುವ ಆಯ್ಕೆಗಳು ಜನರ ಮುಂದೆ ಇರಲಿವೆ. ಪರಮಾಣು ಯುದ್ಧ ಮತ್ತು ಜಾಗತಿಕ ತಾಪಮಾನ ಏರಿಕೆಗಳಿಂದ ಆಗುವ ವಿನಾಶ ಈ ಹಿಂದೆಂದೂ ಮನುಕುಲ ಕಂಡಿರದ ಪ್ರಮಾಣದಲ್ಲಿರಲಿದೆ ಎಂದು ಚಾಮ್ಸ್ಕಿ ಹೇಳಿದ್ದಾರೆ.

ಇರಾನ್ ಮತ್ತು ಕ್ಯೂಬಾದಂತಹ ದೇಶಗಳ ಮೇಲೆ ಅಮೆರಿಕ ಆರ್ಥಿಕ ನಿರ್ಬಂಧ ವಿಧಿಸಿದ ಕೂಡಲೇ ಯುರೋಪಿಯನ್ ದೇಶಗಳೂ ಅದನ್ನು ಅನುಸರಿಸುತ್ತವೆ. ಆದರೆ ಇಂದು ಕ್ಯೂಬಾ ಕೊರೋನ ಸವಾಲು ಎದುರಿಸಲು ಯುರೋಪಿಯನ್ ದೇಶಗಳಿಗೆ ಸಹಾಯ ಮಾಡುತ್ತಿದೆ. ಮೆಡಿಟರೇನಿಯನ್ ಪ್ರದೇಶಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಈಗ ವಲಸಿಗರು ಮತ್ತು ನಿರಾಶ್ರಿತರು ಸಾವಿಗೀಡಾಗುತ್ತಿರುವ ವಿದ್ಯಮಾನ ಪಾಶ್ಚಿಮಾತ್ಯ ನಾಗರೀಕತೆ ಪಾಲಿನ ಅತಿದೊಡ್ಡ ಬಿಕ್ಕಟ್ಟಾಗಲಿದೆ ಎಂದು ಎಚ್ಚರಿಸಿದ್ದಾರೆ.

ನವಉದಾರೀಕರಣ ನೀತಿಗಳಿಂದ ಸೃಷ್ಟಿಯಾಗುವ ಸಾಮಾಜಿಕ - ಆರ್ಥಿಕ ಸಮಸ್ಯೆಗಳು ಕೊರೋನದಂತಹ ಸಾಂಕ್ರಾಮಿಕಗಳ ಮೂಲದಲ್ಲಿವೆ. ಸಾರ್ಸ್ ಸೋಂಕು ಬಂದಂತೆಯೇ ಕೊರೋನ ಸೋಂಕು ಬರಬಹುದು ಎಂದು ಮೊದಲೇ ತಿಳಿದಿತ್ತು. ಆದರೆ ಅದಕ್ಕೆ ಸೂಕ್ತ ಲಸಿಕೆ ಕಂಡು ಹಿಡಿಯಲಿಲ್ಲ. ಏಕೆಂದರೆ ಇಂದಿನ ಖಾಸಗಿ ಹಿಡಿತದಲ್ಲಿರುವ ಫಾರ್ಮಾ ಕಂಪೆನಿಗಳಿಗೆ ಸೌಂದರ್ಯ ವರ್ಧಕ ಕ್ರೀಮ್ ಗಳನ್ನು ತಯಾರಿಸುವುದು ಇಂತಹ ಲಸಿಕೆಗಳನ್ನು ಕಂಡು ಹಿಡಿಯುವದಕ್ಕಿಂತ ಹೆಚ್ಚು ಲಾಭದಾಯಕ ಎಂದು ಗೊತ್ತಿದೆ. ಪೋಲಿಯೋ ನಿರ್ಮೂಲನ ಆಗಿದ್ದು ಸರಕಾರಿ ಸಂಸ್ಥೆ ಕಂಡು ಹಿಡಿದ ಯಾರಿಗೂ ಪೇಟೆಂಟ್ ಇಲ್ಲದ ಲಸಿಕೆಯಿಂದ. ಆದರೆ ಈಗ ಚಾಲ್ತಿಯಲ್ಲಿರುವ ನವಉದಾರೀಕರಣ ನೀತಿ ಪ್ಲೇಗ್ ಅಂತಹ ಲಸಿಕೆ ತಯಾರಿಗೆ ಬಹುದೊಡ್ಡ ತಡೆಯಾಗಿದೆ ಎಂದು ಚಾಮ್ಸ್ಕಿ ಹೇಳಿದ್ದಾರೆ.

ಇಂತಹ ಸವಾಲಿನ ಪರಿಸ್ಥಿತಿಯಲ್ಲಿ ಅಮೆರಿಕಾದಲ್ಲಿ ಟ್ರಂಪ್ ರಂತಹ ಸಮಾಜವಿರೋಧಿ ಮೂರ್ಖರು ಅಧಿಕಾರದಲ್ಲಿದ್ದಾರೆ. ಬಹಳ ಹಿಂದೆಯೇ ಕೊರೋನ ಕುರಿತ ಮುನ್ಸೂಚನೆ ಸಿಕ್ಕಿದ್ದರೂ ಇಂಗ್ಲೆಂಡ್ ಮತ್ತು ಅಮೆರಿಕಗಳು ಅದನ್ನು ಸಂಪೂರ್ಣ ಕಡೆಗಣಿಸಿಬಿಟ್ಟವು. ಅಮೆರಿಕ ಇಡೀ ವಿಶ್ವದಲ್ಲೇ ಈ ಕುರಿತು ಅತ್ಯಂತ ಘೋರ ನಿರ್ಲಕ್ಷ್ಯ ತಾಳಿತು ಎಂದು ಚಾಮ್ಸ್ಕಿ ದೂರಿದ್ದಾರೆ.

ಕೊರೋನ ಸವಾಲು ಜಗತ್ತಿಗೆ ಹೊಸ ಅವಕಾಶವೊಂದನ್ನು ಸೃಷ್ಟಿಸಿದ್ದು ಕೊರೋನ ಮುಗಿದ ಬಳಿಕ ಜನರು ಸಂಘಟಿತರಾಗಿ ರಚನಾತ್ಮಕವಾಗಿ ಕೆಲಸ ಮಾಡಿ ಮನುಕುಲ ಎದುರಿಸುತ್ತಿರುವಂತಹ ಪರಮಾಣು ಯುದ್ಧ, ಜಾಗತಿಕ ತಾಪಮಾನ ಇತ್ಯಾದಿ  ಗಂಭೀರ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಂತಹ ವ್ಯವಸ್ಥೆಯನ್ನು ರೂಪಿಸುವ ಅವಕಾಶ ಈಗ ನಮ್ಮ ಮುಂದಿದೆ. ಈಗ ಕಡ್ಡಾಯವಾಗಿರುವ ಸಾಮಾಜಿಕ ಅಂತರದಿಂದ ಉಂಟಾಗಿರುವ ಅಂತರವನ್ನು ಕಡಿಮೆ ಮಾಡಲು ಈ ಸಮಸ್ಯೆ ಮುಗಿದ ಕೂಡಲೇ ಜನರು ಒಂದುಗೂಡಿ ಸಂಘಟಿತರಾಗಬೇಕು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News