ಲಾಕ್‍ಡೌನ್ ಎಫೆಕ್ಟ್: ಸಿಲಿಕಾನ್ ಸಿಟಿಯಲ್ಲಿ ಹಿಂದೆಂದೂ ಕಂಡರಿಯದ ರೀತಿ ಕುಗ್ಗಿದ ಮಾಲಿನ್ಯ ಪ್ರಮಾಣ

Update: 2020-04-02 18:23 GMT

ಬೆಂಗಳೂರು, ಎ.2: ದೇಶದಾದ್ಯಂತ ಕೊರೋನ ಭೀತಿಯಿಂದ ಲಾಕ್‍ಡೌನ್ ಘೋಷಣೆಯಾದ ಬೆನ್ನಲ್ಲೇ ಇಡೀ ಜನಜೀವನ ಅಸ್ತವ್ಯಸ್ಥವಾಗಿರುವುದೆಷ್ಟು ಸತ್ಯವೋ ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದು ಕೂಡಾ ಅಷ್ಟೇ ಸತ್ಯ.

ಲಾಕ್‍ಡೌನ್ ಘೋಷಣೆ ಆದ ಬಳಿಕ ರಾಜಧಾನಿ ಬೆಂಗಳೂರಿನಲ್ಲಿ ವಾಹನ ದಟ್ಟಣೆ-ಕೈಗಾರಿಕೆ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿರುವುದರಿಂದಾಗಿ ಮಾಲಿನ್ಯ ಪ್ರಮಾಣದಲ್ಲಿ ಸಂಪೂರ್ಣ ಕುಸಿತ ಕಂಡಿದ್ದು, ಆಮ್ಲಜನಕ ಉತ್ಪಾದನೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಬೆಂಗಳೂರು ಅನೇಕ ವಿಷಯಗಳಲ್ಲಿ ಕುಖ್ಯಾತಿ ಪಡೆದಂತೆ ಮಾಲಿನ್ಯದಲ್ಲೂ ದೇಶದ ಟಾಪ್ 10 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆದರೆ, ಲಾಕ್‍ಡೌನ್ ಆದ ದಿನದಿಂದಲೂ ಬೆಂಗಳೂರಿನಲ್ಲಿ ಮಾಲಿನ್ಯದ ಪ್ರಮಾಣ ಸಂಪೂರ್ಣ ತಗ್ಗಿದೆ. ಎಷ್ಟರವರೆಗೆ ಎಂದರೆ ಬೆಂಗಳೂರು ಇತಿಹಾಸದಲ್ಲಿಯೇ ಇಷ್ಟೊಂದು ಪ್ರಮಾಣದಲ್ಲಿ ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ತಗ್ಗಿದ ಉದಾಹರಣೆಗಳೇ ಇಲ್ಲ.

ಮಾಲಿನ್ಯವನ್ನು ಪ್ರಮಾಣೀಕರಿಸುವ ಡಿಸ್‍ಪ್ಲೇ ಬೋರ್ಡ್‍ಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ 7 ಕಡೆ ಅಳವಡಿಸಿದೆ. ಆಯಾ ಪ್ರದೇಶಗಳ ವ್ಯಾಪ್ತಿಯಲ್ಲಿ ನಿತ್ಯದ ಮಾಲಿನ್ಯದ ಪ್ರಮಾಣವನ್ನು ಅವು ಕ್ರೋಡೀಕರಿಸಿ ಬೋರ್ಡ್‍ಗಳ ಮೇಲೆ ಡಿಸ್‍ಪ್ಲೈ ಮಾಡುತ್ತವೆ. ವಾಯುಮಾಲಿನ್ಯವನ್ನು ಅಳೆಯಲು ಮಂಡಳಿ ಏರ್ ಕ್ವಾಲಿಟಿ ಇಂಡೆಕ್ಸ್ ಎನ್ನುವಂತಹ ಮಾಪನ ವ್ಯವಸ್ಥೆ ಹೊಂದಿದೆ. ಅದರ ಪ್ರಕಾರ ಎಕ್ಯೂಐ 00-50(ಉತ್ತಮ) ರಷ್ಟಿದ್ದು ಮಾಲಿನ್ಯದ ಪ್ರಮಾಣ ಸಂಪೂರ್ಣವಾಗಿ ತಗ್ಗಿದೆ.

ರಾಜಧಾನಿಯಲ್ಲಿರುವ ವಾಹನ, ಕೈಗಾರಿಕೆ ಹಾಗೂ ಕಟ್ಟಡ ನಿರ್ಮಾಣ ಪ್ರಕ್ರಿಯೆ ತಗ್ಗಿದೆ. ಆದರೆ, ಲಾಕ್‍ಡೌನ್ ಆದ ದಿನದಿಂದಲೂ ರಾಜಧಾನಿಯಲ್ಲಿ ಕಟ್ಟಡ ನಿರ್ಮಾಣ ಸ್ಥಗಿತದಿಂದ ಧೂಳಿನ ಸಮಸ್ಯೆ ಇಲ್ಲ. ವಾಹನಗಳ ಸಂಚಾರ ಸ್ಥಗಿತದಿಂದ ರಾಸಾಯನಿಕ ಉತ್ಪತ್ತಿಯಾಗುತ್ತಿಲ್ಲ. ಹಾಗೆಯೇ ಕೈಗಾರಿಕೆ ಸ್ಥಗಿತಗೊಂಡಿರುವುದರಿಂದ ವಿಷಕಾರಿ ಅನಿಲ ಉತ್ಪತ್ತಿಯಾಗುತ್ತಿಲ್ಲ ಎನ್ನುವುದು ಸಮಾಧಾನಕರ ಸಂಗತಿ.

ಮಂಡಳಿಯ ಸದಸ್ಯ ಕಾರ್ಯದರ್ಶಿ ಪಾಟೀಲ್ ಅವರೇ ಹೇಳುವಂತೆ, ಕೊರೋನ ಪ್ರಾರಂಭವಾದ ಮೇಲೆ ಮಾಲಿನ್ಯದ ಪ್ರಮಾಣ ಶೇ.15ರಷ್ಟು ಕಡಿಮೆಯಾಯಿತು. ಲಾಕ್‍ಡೌನ್ ಆದ ಮೇಲೆ ಶೇ.50ರಷ್ಟು ಮಾಲಿನ್ಯದ ಪ್ರಮಾಣ ಕಡಿಮೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News