ಬೆಂಗಳೂರು: ಉಚಿತ ಹಾಲು ವಿತರಣೆ ವೇಳೆ ಲಾಠಿ ಚಾರ್ಜ್

Update: 2020-04-03 16:12 GMT

ಬೆಂಗಳೂರು, ಎ.3: ಲಾಕ್‍ಡೌನ್ ಹಿನ್ನೆಲೆಯಲ್ಲಿ ಬಿಬಿಎಂಪಿ ವತಿಯಿಂದ ಹಾಲು ವಿತರಣೆ ಮಾಡುವಾಗ ಸಾವಿರಾರು ಜನರು ಸೇರಿದ ಕಾರಣ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ಕಮಲಾನಗರದಲ್ಲಿ ನಡೆದಿದೆ.

ಕಮಲಾ ನಗರದಲ್ಲಿರುವ ಬಡವರಿಗೆ ಹಾಲು ವಿತರಿಸಲು ಬಿಬಿಎಂಪಿಯು ತೀರ್ಮಾನಿಸಿ ಶುಕ್ರವಾರ ಬೆಳಗ್ಗೆ ಇಲ್ಲಿಯ ಪಾಲಿಕೆ ಕಚೇರಿ ಮುಂದೆ ಕ್ಯಾಂಟರ್ ನ ಮೂಲಕ ಹಾಲು ವಿತರಣೆಗೆ ಮುಂದಾದಾಗ ವಿಷಯ ತಿಳಿದ ಸಾವಿರಾರು ಮಂದಿ ಅಲ್ಲಿ ಜಮಾಯಿಸಿದ್ದಾರೆ.

ಕೊರೋನ ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಲಾಕ್‍ಡೌನ್ ವಿಧಿಸಿ ಜನರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಮತ್ತು ಗುಂಪು ಸೇರದಂತೆ ಹೇಳಿದರೂ ಸಾವಿರಾರು ಮಂದಿ ಒಂದೆಡೆ ಸೇರಿದ್ದರು. ವಿಷಯ ತಿಳಿದು ಅಲ್ಲಿಗೆ ಬಂದ ಪೊಲೀಸರು ಜನರ ಗುಂಪು ಚದುರಿಸಲು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

ಅಲ್ಲಿ ಸೇರಿದ ಅನೇಕ ಜನರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರಲಿಲ್ಲ. ಅಲ್ಲದೆ ಅನೇಕರು ಮಾಸ್ಕ್ ಗಳನ್ನು ಧರಿಸಿರಲಿಲ್ಲ. ಸುಮಾರು ಅರ್ಧಗಂಟೆಯ ಪ್ರಯತ್ನದಿಂದ ಪೊಲೀಸರು ಜನರನ್ನು ತೆರವುಗೊಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ನಾವು ಬಿಬಿಎಂಪಿ ಕಚೇರಿಯ ಮುಂಭಾಗದಲ್ಲಿ ಜನಸಂದಣಿಯನ್ನು ತೆರವುಗೊಳಿಸಿದಾಗ ಅವರು ಪಕ್ಕದ ರಸ್ತೆಗಳಲ್ಲಿ ಸೇರಲು ಪ್ರಾರಂಭಿಸಿದರು. ನಾವು ಅವರನ್ನು ತೆರವುಗೊಳಿಸಲು ಮತ್ತು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವ ಮಹತ್ವವನ್ನು ಅವರಿಗೆ ಅರ್ಥಮಾಡಿಕೊಳ್ಳಲು ಲಾಠಿ ಚಾರ್ಜ್ ಮಾಡಿದೆವು ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News