ಜಲಮಂಡಳಿಯ ಹೊರ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕದಂತೆ ಸಿಎಂಗೆ ದಿನೇಶ್ ಗುಂಡೂರಾವ್ ಮನವಿ

Update: 2020-04-03 16:39 GMT

ಬೆಂಗಳೂರು, ಎ.3: ಬೆಂಗಳೂರು ಜಲಮಂಡಳಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸುಮಾರು 350 ನೌಕರರನ್ನು ವಿನಾಕಾರಣ ಸರಕಾರದ ಆದೇಶದನ್ವಯ ಕೆಲಸದಿಂದ ತೆಗೆಯುತ್ತಿರುವುದು ನನ್ನ ಗಮನಕ್ಕೆ ಬಂದಿದೆ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದಿರುವ ಅವರು, ನನ್ನ ಮತಕ್ಷೇತ್ರ ವ್ಯಾಪ್ತಿಯಲ್ಲೆ ಕಾರ್ಯನಿರ್ವಹಿಸುತ್ತಿರುವ 50 ಹೊರ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆದು ಹಾಕುತ್ತಿದ್ದಾರೆಂದು ಈ ದಿನ ನನ್ನ ಬಳಿ ಖುದ್ದಾಗಿ ಭೇಟಿ ಮಾಡಿ ಅವಲತ್ತುಕೊಂಡಿದ್ದಾರೆಂದು ತಿಳಿಸಿದ್ದಾರೆ.

ಸರಕಾರದ ಆದೇಶಗಳು ಸ್ಪಷ್ಟವಾಗಿದ್ದರೂ ಬೆಂಗಳೂರು ಜಲಮಂಡಳಿ ತನ್ನಲ್ಲಿ ಕೆಲಸ ನಿರ್ವಹಿಸುತ್ತಿರುವ ಈ ಹೊರಗುತ್ತಿಗೆ ನೌಕರರನ್ನು ಬೇಸಿಗೆ ಕಾಲ ಹಾಗೂ ಕೊರೋನ ಮಹಾಮಾರಿ ಎಲ್ಲ ಕಡೆ ಹರಡಿರುವ ಇಂತಹ ಸಮಯದಲ್ಲಿ ತೆಗೆದು ಹಾಕಿರುವ ಕ್ರಮವು ಸಮರ್ಥನೀಯವಲ್ಲ ಎಂದು ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಆದುದರಿಂದ, ದಯಮಾಡಿ ತಾವು ಬೆಂಗಳೂರು ಜಲಮಂಡಳಿಯ ಆಡಳಿತ ವರ್ಗಕ್ಕೆ ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಯಾವ ಗುತ್ತಿಗೆ, ಹೊರಗುತ್ತಿಗೆ ನೌಕರರನ್ನು ತೆಗೆದು ಹಾಕದೆ ಸದರಿ ನೌಕರರನ್ನು ಮುಂದುವರೆಸಲು ಸರಕಾರದ ಅನುಮೋದನೆಯನ್ನು ಶೀಘ್ರವಾಗಿ ನೀಡಬೇಕೆಂದು ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News