ವೈದ್ಯಕೀಯ ಸೇವೆಗೆ ಸಿಬ್ಬಂದಿ ನೇಮಕ: ಜಿಲ್ಲಾಧಿಕಾರಿ ಕಚೇರಿಯಲ್ಲಿ ಎ.4ರಂದು ನೇರ ಸಂದರ್ಶನ

Update: 2020-04-03 17:31 GMT

ಬೆಂಗಳೂರು, ಎ.3: ಕೊರೋನ ಪ್ರಕರಣಗಳ ಪರೀಕ್ಷೆ ಮತ್ತು ಚಿಕಿತ್ಸೆಗಾಗಿ ಬೆಂಗಳೂರು ನಗರ ಜಿಲ್ಲಾ ಆಸ್ಪತ್ರೆಗಳಲ್ಲಿ ಸಮರ್ಪಕ ವೈದ್ಯಕೀಯ ಸೇವೆ ಒದಗಿಸಲು ವಿವಿಧ ಹುದ್ದೆಗಳಿಗೆ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ (ಎ. 4) ನೇಮಕ ಪ್ರಕ್ರಿಯೆ ನಡೆಯಲಿದೆ.

ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ ಮತ್ತು ಸರ್ ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆಗಳಿಗೆ ತಲಾ 10 ವೈದ್ಯರು ಅಥವಾ ತಜ್ಞರನ್ನು ನೇಮಿಸಲಾಗುತ್ತಿದೆ. ಎಂಬಿಬಿಎಸ್ ಉತ್ತೀರ್ಣರಾಗಿ, ಕಡ್ಡಾಯವಾಗಿ ಇಂಟರ್ನ್ಶಿಪ್ ಪೂರೈಸಿ, ಕೆಎಂಸಿ ನೋಂದಣಿ ಹೊಂದಿದವರು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಮಾಸಿಕ 60 ಸಾವಿರ ರೂ. ವೇತನ ನೀಡಲಾಗುತ್ತದೆ.

ಪ್ರತಿ ಆಸ್ಪತ್ರೆಗೆ ತಲಾ 20 ಶುಶ್ರೂಷಕರಂತೆ ಒಟ್ಟು 60 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ. ಅಭ್ಯರ್ಥಿಗಳು ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಬಿಎಸ್ಸಿ ಅಥವಾ ಜಿಎಸ್ಎಂ ತರಬೇತಿ ಹಾಗೂ ಕೆಎಂಸಿ ನೋಂದಣಿ ಹೊಂದಿರಬೇಕಿದೆ. ಮಾಸಿಕ 20 ಸಾವಿರ ರೂ. ವೇತನ ನೀಡಲು ನಿರ್ಧರಿಸಲಾಗಿದೆ.

ತಲಾ 5 ಪ್ರಯೋಗಶಾಲಾ ತಂತ್ರಜ್ಞರಂತೆ 15 ಸಿಬ್ಬಂದಿ ಅಗತ್ಯವಿದ್ದು, ಡಿಎಂಎಲ್ಟಿ ಪದವಿಯೊಂದಿಗೆ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿ ಹೊಂದಿದ ಮತ್ತು ಸೂಕ್ಷ್ಮ ಜೀವ ವಿಜ್ಞಾನ ಪರೀಕ್ಷೆಯಲ್ಲಿ ಅನುಭವ ಹೊಂದಿರುವವರು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಮಾಸಿಕ 15 ಸಾವಿರ ರೂ. ವೇತನ ನೀಡಲಾಗುತ್ತದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿರುವ 30 ಮಂದಿಯನ್ನು ಗ್ರೂಪ್ ಡಿ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಮಾಸಿಕ 12 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ.

ಆಸಕ್ತ, ಅರ್ಹ ಅಭ್ಯರ್ಥಿಗಳು ಎ. 4ರ ಬೆಳಗ್ಗೆ 10ರಿಂದ ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಯಲಿರುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News