ವಾಹನಗಳಲ್ಲಿ ಸಂಚರಿಸಲು ಅನುಮತಿಸಿರುವ ಬಗ್ಗೆ ಮಾಹಿತಿ ನೀಡಿ: ಡಿಜಿ-ಐಜಿಪಿಗೆ ಹೈಕೋರ್ಟ್ ಸೂಚನೆ

Update: 2020-04-03 17:47 GMT

ಬೆಂಗಳೂರು, ಎ.3: ಔಷಧಿ ಹಾಗೂ ದಿನ ಬಳಕೆ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರಿಗೆ ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರ ವಾಹನಗಳ ಸಂಚಾರಕ್ಕೆ ಅನುಮತಿಸಿರುವ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಔಷಧಿ, ದಿನ ಬಳಕೆ ವಸ್ತುಗಳನ್ನು ಖರೀದಿಸಲು ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನಗಳಲ್ಲಿ ಹೋಗುವಾಗ ಪೊಲೀಸರು ವಾಹನಗಳನ್ನು ವಶಪಡಿಸಿಕೊಳ್ಳುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಔಷಧಿ ಹಾಗೂ ದಿನ ಬಳಕೆ ವಸ್ತುಗಳನ್ನು ಖರೀದಿಸಲು, ಅಂಗಡಿಗಳು ದೂರವಿರುವ ಕಾರಣ ಸಾರ್ವಜನಿಕರು ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನಗಳಲ್ಲಿ ಹೋಗುತ್ತಾರೆ. ಆದರೆ, ಪೊಲೀಸರು ಈ ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ಅಡ್ವಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ಅವರು ವಾದಿಸಿ, ಔಷಧಿ ಖರೀದಿ ಹಾಗೂ ದಿನ ಬಳಕೆ ವಸ್ತುಗಳನ್ನು ಖರೀದಿಸಲು ವಾಹನಗಳಲ್ಲಿ ಹೋಗುತ್ತಿದ್ದೇವೆ ಎಂದು ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರೆ, ಯಾವುದೇ ವಾಹನಗಳನ್ನೂ ಪೊಲೀಸರು ವಶಕ್ಕೆ ಪಡೆಯುವುದಿಲ್ಲ. ಆದರೆ, ಕೆಲವರು ಸುಮ್ಮನೆ ರಸ್ತೆಗಳಲ್ಲಿ ವಾಹನಗಳಲ್ಲಿ ತಿರುಗಾಡುತ್ತಾರೆ. ಇಂತವರ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ಸಾರ್ವಜನಿಕರು ವಾಹನದಲ್ಲಿ ಸಂಚರಿಸುವಾಗ ನಿರ್ದಿಷ್ಟ ಕೆಲಸದ ಬಗ್ಗೆ ಮಾಹಿತಿ ನೀಡಬೇಕು. ಇದರಿಂದ, ಪೊಲೀಸರಿಗೂ ಅನುಕೂಲವಾಗುತ್ತದೆ. ಅಲ್ಲದೆ, ಸಾರ್ವಜನಿಕರು ಅನಗತ್ಯವಾಗಿ ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನದಲ್ಲಿ ಸಂಚರಿಸದೆ ಪೊಲೀಸರಿಗೆ ಹಾಗೂ ರಾಜ್ಯ ಸರಕಾರದೊಂದಿಗೆ ಸಹಕರಿಸಬೇಕೆಂದು ಮೌಖಿಕ ಆದೇಶ ನೀಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News