ಇನ್ನೆರಡು ದಿನಗಳಲ್ಲಿ ಬೆಂಗಳೂರಿನಲ್ಲಿ ದಿನಸಿ ಕೊರತೆ ಸಾಧ್ಯತೆ: ಆಮ್ ಆದ್ಮಿ ಪಕ್ಷ ಆತಂಕ

Update: 2020-04-05 16:06 GMT

ಬೆಂಗಳೂರು, ಎ. 5: ಕೊರೋನ ವೈರಸ್ ಸೋಂಕಿನಿಂದ ಆಗಿರುವ ಲಾಕ್‍ಡೌನ್‍ನಿಂದ ಇನ್ನು ಎರಡು ದಿನಗಳಲ್ಲಿ ಬೆಂಗಳೂರಿನಲ್ಲಿರುವ ಸ್ಥಳೀಯ ಕಿರಾಣಿ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಅಗತ್ಯ ವಸ್ತುಗಳಾದ ದಿನಸಿ ಕೊರತೆ ಉಂಟಾಗುವ ಸಾಧ್ಯತೆಗಳಿವೆ ಎಂದು ಆಮ್ ಆದ್ಮಿ ಪಕ್ಷ ಆತಂಕ ವ್ಯಕ್ತಪಡಿಸಿದೆ.

ನಗರದ ಅಂಗಡಿಗಳಲ್ಲಿ ಇದುವರೆಗೂ ದೊರೆಯುತ್ತಿದ್ದ ದಿನಸಿ ವಸ್ತುಗಳು ಮುಗಿಯುತ್ತಿದ್ದು, ಎರಡು ದಿನಗಳಲ್ಲಿ ವಸ್ತುಗಳ ಅಭಾವ ಸಂಭವವಿದೆ. ಈ ಸಂಬಂಧ ಪಕ್ಷದ ಕಾರ್ಯಕರ್ತರು ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಖುದ್ದು ಪರಿಶೀಲನೆ ನಡೆಸಿದ್ದು, ಮೇಲ್ಕಂಡ ಅಂಶ ಬೆಳಕಿಗೆ ಬಂದಿದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಸಾಕಷ್ಟು ದಿನಗಳಿಗೆ ಆಗುವಷ್ಟು ದಿನಸಿ ಲಭ್ಯವಿದ್ದರೂ, ಅಲ್ಲಿಂದ ಸ್ಥಳೀಯ ಪ್ರದೇಶದ ಅಂಗಡಿಗಳಿಗೆ ತಲುಪಿಸುವ ವ್ಯವಸ್ಥೆಯೂ ತುಂಡಾಗಿರುವುದು ಇದಕ್ಕೆ ಕಾರಣ ಎಂದು ತಿಳಿಸಲಾಗಿದೆ.

ಸ್ಥಳೀಯ ಅಂಗಡಿಗಳಲ್ಲಿ ದಿನಸಿ ಕೊರತೆಗೆ ಮೂಲ ಕಾರಣ ಕೂಲಿ ಕಾರ್ಮಿಕರ ಅಭಾವ. ಪ್ರತಿನಿತ್ಯ ಸ್ಥಳೀಯ ಅಂಗಡಿಗಳಿಗೆ ಹಾಗೂ ಎಪಿಎಂಸಿ ಮಾರುಕಟ್ಟೆಗಳಿಗೆ ಸಂಪರ್ಕ ಸೇತುವೆಯಂತೆ ಕೆಲಸ ನಿರ್ವಹಿಸುತ್ತಿದ್ದ ಕೂಲಿ ಕಾರ್ಮಿಕರು ಏಕಾಏಕಿ ಲಾಕ್‍ಡೌನ್‍ನಿಂದ ಕೆಲಸಕ್ಕೆ ಹಾಜರಾಗುತ್ತಿಲ್ಲ ಎಂದು ಪಕ್ಷ ವಿಶ್ಲೇಷಿಸಿದೆ.

ಕೂಲಿ ಕಾರ್ಮಿಕರು ಪ್ರತಿನಿತ್ಯದ ಕಷ್ಟ ಸುಖಗಳನ್ನು ಸರಕಾರ ಅಥವಾ ಅಧಿಕಾರಿಗಳು, ಸಚಿವ-ಶಾಸಕರು ಕೇಳಿಲ್ಲ. ದೈನಂದಿನ ಕೂಲಿ ಮಾಡಿಕೊಂಡು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಈ ಅಸಂಘಟಿತ ಕೂಲಿಕಾರರು ತಮ್ಮ ದೈನಂದಿನ ಕಾರ್ಯ ನಿರ್ವಹಣೆ ಮಾಡಲು ಮನಸ್ಸು ಮಾಡುತ್ತಿಲ್ಲ. ಇದರಿಂದಾಗಿ ಎಪಿಎಂಸಿ ಮಾರುಕಟ್ಟೆಯಿಂದ ಸ್ಥಳೀಯ ಅಂಗಡಿಗಳಿಗೆ ತಲುಪಿಸುವ ಸಂಪರ್ಕ ಕೊಂಡಿ ಕಳಚಿದಂತಾಗಿದೆ ಎಂದು ಪಕ್ಷ ಹೇಳಿದೆ.

ಇದರಿಂದ ಇನ್ನೆರಡು ದಿನಗಳಲ್ಲಿ ದಿನ ವಸ್ತುಗಳ ಕೃತಕ ಅಭಾವ ಸೃಷ್ಟಿಯಾಗಿ ಬೆಂಗಳೂರಿನ ಜನತೆ ಸಂಕಷ್ಟಕ್ಕೆ ಅನುಭವಿಸಬೇಕಾಗುತ್ತದೆ. ಆದುದರಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಕಾರ್ಮಿಕ ಸಚಿವರು, ಅಧಿಕಾರಿಗಳ ಕೂಡಲೇ ಕೂಲಿ ಕಾರ್ಮಿಕರ ಸಂಘಟನೆಗಳೊಂದಿಗೆ ಚರ್ಚಿಸಿ ಅವರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಮೂಲಕ ನಗರದ ಎಲ್ಲ ಪ್ರದೇಶಗಳಲ್ಲಿ ದಿನ ಕೊರತೆ ಉಂಟಾಗದಂತೆ ಕ್ರಮ ವಹಿಸಬೇಕು ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News