ಸಾದಿಕ್ ನಗರದಲ್ಲಿ ಹಲ್ಲೆ ಆರೋಪ: ಘಟನಾ ಸ್ಥಳದಲ್ಲಿ ಆಶಾ ಕಾರ್ಯಕರ್ತೆ ಇರಲಿಲ್ಲ; ಆರೋಗ್ಯ ಅಧಿಕಾರಿ

Update: 2020-04-06 16:23 GMT

ಬೆಂಗಳೂರು, ಎ.6: ಇಲ್ಲಿನ ಸಾರಾಯಿಪಾಳ್ಯ, ಸಾದಿಕ್ ಲೇಔಟ್‌ ನಲ್ಲಿ ಆಶಾ ಕಾರ್ಯಕರ್ತೆ ಮೇಲೆ ಹಲ್ಲೆ ಯತ್ನ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎನ್ನಲಾದ ಪ್ರಕರಣ ಹೊಸ ತಿರುವು ಪಡೆದಿದ್ದು, ಘಟನೆಯ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಸ್ಥಳದಲ್ಲಿ ಇರಲಿಲ್ಲ ಎನ್ನುವುದು ವೀಡಿಯೋ ದೃಶ್ಯಗಳಿಂದ ಬಯಲಾಗಿದೆ. ರಾಜ್ಯ ಆರೋಗ್ಯ ಸಹಾಯಕರು ಮತ್ತು ಮೇಲ್ವಿಚಾರಕರ ಕೇಂದ್ರ ಘಟಕದ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

"ಸಾರಾಯಿಪಾಳ್ಯದ ಸಾದಿಕ್ ಲೇಔಟ್ ಘಟನೆಯ ಬಗ್ಗೆ ನಾನೇ ಖುದ್ದು ಪರಿಶೀಲನೆ ನಡೆಸಿದ್ದು, ಇಡೀ ಘಟನೆಯನ್ನು ನಮ್ಮ ಆರೋಗ್ಯ ಸಹಾಯಕರು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಿದ್ದು, ಅತ್ಯಂತ ವಿವೇಚನೆಯಿಂದ ನಡೆದುಕೊಂಡಿದ್ದಾರೆ. ಘಟನೆಯ ವಿಡಿಯೋದಲ್ಲಿ ಎಲ್ಲಿಯೂ ಕಾಣಿಸದ ಆಶಾ ಕಾರ್ಯಕರ್ತೆ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆದುಕೊಂಡರು. ಆದರೆ, ದಿಗ್ಬಂಧನಕ್ಕೆ ಒಳಗಾಗಿದ್ದದ್ದು ಇಲಾಖೆ ಸಿಬ್ಬಂದಿ. ಸಮುದಾಯದ ಆರೋಗ್ಯ ರಕ್ಷಣೆಯಲ್ಲಿ ಅವರ ಪಾತ್ರ ಹಿರಿದು" ಎಂದು ಮಲ್ಲಿಕಾರ್ಜುನಗೌಡ ತಿಳಿಸಿದ್ದಾರೆ.

ಅಧಿಕಾರಿಯ ಹೇಳಿಕೆ, ಘಟನಾ ಸ್ಥಳದಲ್ಲೇ ಇಲ್ಲದ ಆಶಾ ಕಾರ್ಯಕರ್ತೆ ಇಡೀ ಘಟನೆಯನ್ನು ತನ್ನ ವೈಯಕ್ತಿಕ ಹಿತಾಸಕ್ತಿ ಮತ್ತು ಪ್ರಚಾರಕ್ಕಾಗಿ ಬಳಸಿಕೊಂಡರೇ ಎಂಬ ಸಂಶಯವನ್ನು ಹುಟ್ಟುಹಾಕಿದೆ.

ಆರೋಗ್ಯ ಸಹಾಯಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಸಂಬಂಧಿಸಿದ ವಿಡಿಯೋ ಆಧರಿಸಿ ಐದು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಆ ವಿಡಿಯೋ ದೃಶ್ಯಾವಳಿಯಲ್ಲಿ ಘಟನೆಯಲ್ಲಿನ ಉಲ್ಲೇಖಿತ ಆಶಾ ಕಾರ್ಯಕರ್ತೆ ಇಲ್ಲ ಎಂಬುದು ಆರೋಗ್ಯ ಇಲಾಖೆ ಕಿರಿಯ ಆರೋಗ್ಯ ಸಹಾಯಕರ ಹೇಳಿಕೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಆಶಾ ಕಾರ್ಯಕರ್ತೆ ಪೊಲೀಸರಿಗೆ ಯಾವುದೇ ಲಿಖಿತ ದೂರನ್ನು ನೀಡಿಲ್ಲ. ಆರೋಗ್ಯ ನಿರೀಕ್ಷಕ ಮುನಿರಾಜು ಎಂಬವರು ದೂರು ನೀಡಿದ್ದು ಆರೋಪಿಗಳನ್ನು ಬಂಧಿಸಲಾಗಿದೆ.

ರಾಜ್ಯದಲ್ಲಿ ಆರೋಗ್ಯ ಇಲಾಖೆ ಅಡಿಯಲ್ಲಿ ಬರುವ ಆರೋಗ್ಯಕ್ಕೆ ಸಂಬಂಧಿಸಿದ ಬಹುತೇಕ ಯೋಜನೆಗಳು ಹಾಗೂ ಲಸಿಕೆ ಆಂದೋಲನದಲ್ಲಿ ಕರ್ತವ್ಯ ನಿರ್ವಹಿಸುವವರು ಆರೋಗ್ಯ ಸಹಾಯಕರು. ಘಟನೆ ಸಂಭವಿಸಿದ ದಿನ ಆರೋಗ್ಯ ಇಲಾಖೆಯ ಐದು ಮಂದಿ ಪುರುಷ ಮತ್ತು ಐದು ಮಂದಿ ಮಹಿಳಾ ಸಿಬ್ಬಂದಿ ಸೇರಿ ಒಟ್ಟು ಹತ್ತು ಮಂದಿ ಕಿರಿಯ ಆರೋಗ್ಯ ಸಹಾಯಕರು ಆ ಪ್ರದೇಶದಲ್ಲಿದ್ದರು. ಐದು ತಂಡಗಳು ಕೊರೋನ ವೈರಸ್ ಸೋಂಕು ಸೇರಿದಂತೆ ಸಮುದಾಯ ಆರೋಗ್ಯ ಸಂಬಂಧ ಸರ್ವೆ ಕಾರ್ಯದಲ್ಲಿ ತೊಡಗಿದ್ದವು.

ಈ ಸಂದರ್ಭದಲ್ಲಿ ಕೆಲವರು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಸಂಬಂಧ ಮಾಹಿತಿ ಸಂಗ್ರಹಿಸುತ್ತಿದ್ದಾರೆಂದು ತಪ್ಪಾಗಿ ಭಾವಿಸಿ, ಸುಳ್ಳು ಸುದ್ದಿಯನ್ನು ನಂಬಿ ಆರೋಗ್ಯ ಸಹಾಯಕರಿಗೆ ಮುತ್ತಿಗೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಅಲ್ಲದೆ, ದಾಖಲೆಗಳನ್ನು ಕಸಿದುಕೊಂಡು ದಿಗ್ಬಂಧನ ವಿಧಿಸಿದ್ದರು. ಆದರೆ, ಈ ಘಟನೆಯಲ್ಲಿ ಆಶಾ ಕಾರ್ಯಕರ್ತೆ ಇರಲಿಲ್ಲ. ಇದೇ ವೇಳೆ ಅವರು ಪಕ್ಕದ ಪ್ರದೇಶದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿರಬಹುದಾದ ಸಾಧ್ಯತೆಯ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ, ಆ ಪ್ರದೇಶದಲ್ಲಿ ನಿರಂತರವಾಗಿ ಆರೋಗ್ಯ ಸಹಾಯಕರು ಕಾರ್ಯನಿರ್ವಹಿಸುತ್ತಿದ್ದು, ಸಿಬ್ಬಂದಿಯ ಕರ್ತವ್ಯಕ್ಕೆ ಯಾವುದೇ ಅಡ್ಡಿಯಾಗಿಲ್ಲ. ಕೆಲ ಸಂದರ್ಭಗಳಲ್ಲಿ ತಪ್ಪಾಗಿ ಭಾವಿಸಿ, ಇಂತಹ ಘಟನೆಗಳ ಸಂಭವಿಸುತ್ತವೆ. ಅವುಗಳನ್ನು ದೊಡ್ಡದು ಮಾಡುವ ಮೂಲಕ ಸಮುದಾಯಗಳಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸುವುದು ಸಲ್ಲ ಎಂಬ ಆಕ್ಷೇಪವೂ ಕೇಳಿಬಂದಿದೆ.

ಇಡೀ ಘಟನೆಯಲ್ಲಿದ್ದ ದಿಗ್ಬಂಧನಕ್ಕೆ ಒಳಗಾಗಿ ಸಂಕಷ್ಟ ಅನುಭವಿಸಿದ ಆರೋಗ್ಯ ಸಹಾಯಕರ ಬಗ್ಗೆ ಯಾವುದೇ ಪ್ರಸ್ತಾಪವೇ ಇಲ್ಲ. ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಆರೋಗ್ಯ ಸಹಾಯಕರು ಜೀವನ ಪಣಕ್ಕಿಟ್ಟು ಸಮುದಾಯದ ಆರೋಗ್ಯ ರಕ್ಷಣೆಗಾಗಿ ಶ್ರಮಿಸುತ್ತಾರೆ. ಆಶಾ ಕಾರ್ಯಕರ್ತೆಯರೂ ಇದೇ ಕಾರ್ಯ ನಿರ್ವಹಿಸುತ್ತಾರೆ. ಆದರೆ, ಅವರಿಗೆ ಕಡ್ಡಾಯ ಹಾಜರಾತಿ ಇಲ್ಲ. ಅವರಿಗೆ ನಿಗದಿತ ವೇಳಾಪಟ್ಟಿಯೂ ಇಲ್ಲ. ಅವರಿಗೆ ನೀಡಿದ ನಿಗದಿತ ಕರ್ತವ್ಯವನ್ನು ಪೂರ್ಣಗೊಳಿಸಬೇಕಿರುತ್ತದೆ, ಅಷ್ಟೇ.

ಆರೋಗ್ಯ ಇಲಾಖೆ ಸಹಾಯಕರು ಪ್ರತಿನಿತ್ಯ ತಮ್ಮ ಕರ್ತವ್ಯದ ವರದಿಯನ್ನು ನೀಡಬೇಕಿದೆ. ಅಲ್ಲದೆ, ತಮ್ಮ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಮುದಾಯದ ಆರೋಗ್ಯ ಮತ್ತು ಲಸಿಕೆ ಹಾಕಿಸಿದ ಸಂಬಂಧ ಸಂಪೂರ್ಣ ವರದಿ ನೀಡಬೇಕಿರುತ್ತದೆ. ಮಕ್ಕಳು, ಗರ್ಭಿಣಿಯರು ಸೇರಿದಂತೆ ಎಲ್ಲ ಮಾಹಿತಿ ಸಂಗ್ರಹಿಸಿ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುವವರು ಆರೋಗ್ಯ ಸಹಾಯಕರು ಎಂಬುದು ಗಮನಾರ್ಹವಾಗಿದೆ.

Full View

Writer - ಪ್ರಕಾಶ್ ರಾಮಜೋಗಿಹಳ್ಳಿ

contributor

Editor - ಪ್ರಕಾಶ್ ರಾಮಜೋಗಿಹಳ್ಳಿ

contributor

Similar News