ಬೆಂಗಳೂರು: ಆಹಾರ ವಿತರಣೆ ವೇಳೆ ಮುಸ್ಲಿಮರ ಮೇಲೆ ಸಂಘಪರಿವಾರದಿಂದ ಮಾರಣಾಂತಿಕ ಹಲ್ಲೆ; ಆರೋಪ

Update: 2020-04-06 16:03 GMT

ಬೆಂಗಳೂರು, ಎ.6: ಕೊರೋನ ವೈರಸ್ ಲಾಕ್‍ಡೌನ್ ಹಿನ್ನೆಲೆ ಬಡವರಿಗೆ ಉಚಿತ ಆಹಾರ ವಿತರಣೆ ಮಾಡುತ್ತಿದ್ದ ಗುಂಪಿನಲ್ಲಿ ಮುಸ್ಲಿಮರು ಇದ್ದಾರೆಂದು ಗುರಿಯಾಗಿಸಿಕೊಂಡು ಸಂಘಪರಿವಾರ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಸೋಮವಾರ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳ ತಂಡ, ನಾಲ್ವರು ಯುವಕರ ಮೇಲೆ ಗಂಭೀರ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ತದನಂತರ, ಗಾಯಾಳುಗಳನ್ನು ಅಂಬೇಡ್ಕರ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ಘಟನೆ ಕುರಿತು ವಿಡಿಯೊ ಬಿಡುಗಡೆ ಮಾಡಿರುವ ಸ್ವರಾಜ್ ಅಭಿಯಾನದ ಬೆಂಗಳೂರು ಜಿಲ್ಲಾ ಕಾರ್ಯದರ್ಶಿ ಝರೀನ್ ತಾಜ್, ಲಾಕ್‍ಡೌನ್ ಹಿನ್ನೆಲೆ ಇಲ್ಲಿನ ದಾಸರಹಳ್ಳಿ ವ್ಯಾಪ್ತಿಯಲ್ಲಿ ಬಡವರಿಗೆ ಉಚಿತ ಆಹಾರ ಧಾನ್ಯಗಳನ್ನು ವಿತರಣೆ ಮಾಡಲಾಗುತಿತ್ತು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸಂಘಪರಿವಾರದ ಕಾರ್ಯಕರ್ತರು, ಮುಸ್ಲಿಮರು ಆಹಾರ ವಿತರಣೆ ಮಾಡಬಾರದು ಎಂದು ಸೂಚಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ಯುವಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಘಟನೆ ಬಗ್ಗೆ ಈ ಮೊದಲು ಪೊಲೀಸರ ಗಮನಕ್ಕೂ ತರಲಾಗಿತ್ತು. ದುಷ್ಕರ್ಮಿಗಳ ಕೃತ್ಯದಿಂದ ಓರ್ವನ ಕೈ ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ. ಈ ಸಂಬಂಧ ಪೊಲೀಸರು ಸೂಕ್ತ ತನಿಖೆ ನಡೆಸಬೇಕೆಂದು ಝರೀನ್ ತಾಜ್ ಒತ್ತಾಯಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News