ಬಡವರ ಹಸಿವು ನೀಗಿಸಲು ಸರಕಾರ ಸರ್ವ ಸನ್ನದ್ಧ: ಸಚಿವ ಅಶೋಕ್

Update: 2020-04-06 17:30 GMT

ನೆಲಮಂಗಲ, ಎ.6: ಅಸಂಘಟಿತ ವಲಯ, ಕಡು ಬಡವರು ಹಾಗೂ ನಿರಾಶ್ರಿತರ ಹಸಿವು ನೀಗಿಸಲು ಸರಕಾರ ಸರ್ವ ಸನ್ನದ್ಧವಾಗಿದ್ದು, ದಿನಸಿ ಹಾಗೂ ಸಿದ್ಧ ಆಹಾರ ಪೂರೈಕೆಗೆ ದಿಟ್ಟ ಕ್ರಮ ಕೈಗೊಂಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.

ನಗರದ ಹೊರವಲಯ ಟಿ. ದಾಸರಹಳ್ಳಿಯ ಮಲ್ಲಸಂದ್ರ ವಾರ್ಡಿನ ಸೆಲೆಕ್ಷನ್ ಕಾರ್ನರ್ ನಲ್ಲಿ ಯಡಿಯೂರಪ್ಪ ಕ್ಯಾಂಟೀನ್‍ಗೆ ಚಾಲನೆ ನೀಡಿ ಮಾತನಾಡಿದ ಅವರು, ಲಾಕ್‍ಡೌನ್ ತುರ್ತು ಪರಿಸ್ಥಿತಿಯನ್ನು ರಾಜ್ಯ ಸರಕಾರ ಸಮರ್ಥವಾಗಿ ನಿಭಾಯಿಸುತ್ತಿರುವುದರಿಂದ ಕೊರೋನ ವೈರಸ್ ಸೋಂಕು ಹತೋಟಿಯಲ್ಲಿದೆ. ಜನರ ಆರೋಗ್ಯದ ದೃಷ್ಟಿಯಿಂದ ಲಾಕ್‍ಡೌನ್ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುವವರಿಗೆ ಎಚ್ಚರಿಕೆ ನೀಡಲಾಗಿದೆ, ಜೊತೆಗೆ ಮುಲಾಜಿಲ್ಲದೆ ಅವರ ವಾಹನಗಳನ್ನು ವಶಪಡಿಸಿಕೊಳ್ಳಲು ಪೊಲೀಸರಿಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗಿದೆ ಎಂದರು.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಈಗಾಗಲೇ 20 ಕೋಟಿ ರೂ. ಹಣ ವ್ಯಯಿಸಲಾಗಿದೆ. ಇತ್ತ 395 ಕೋಟಿ ರೂ. ಕೇಂದ್ರ ಸರಕಾರದಿಂದ ಬಂದಿದ್ದು, ಕಡು ಬಡವರ ಊಟ ವಸತಿ ಸೇರಿದಂತೆ ತುರ್ತು ಕೆಲಸಗಳಿಗೆ ಹಣ ಬಿಡುಗಡೆ ಮಾಡಲು ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದು ತಿಳಿಸಿದರು.

ಅಸಂಘಟಿತ ವಲಯದ ಒಂದು ಲಕ್ಷ ಕಾರ್ಮಿಕರಿಗೆ 15 ಕೆ.ಜಿ ಆಹಾರ ಪದಾರ್ಥಗಳಿರುವ ಚೀಲವನ್ನು ಒದಗಿಸಲು ತೀರ್ಮಾನಿಸಲಾಗಿದ್ದು, ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ 20 ಸಾವಿರ ಫಲಾನುಭವಿಗಳಿಗೆ ಆಹಾರ ಸಾಮಗ್ರಿ ನೀಡಲಾಗಿದೆ. ಇನ್ನೂ 30 ಸಾವಿರ ಕಾರ್ಮಿಕರಿಗೆ ಸಾಮಗ್ರಿ ನೀಡಲಾಗುವುದು, ಅದನ್ನು ನಗರದ ವಿಧಾನಸಭಾ ಕ್ಷೇತ್ರಗಳಲ್ಲಿ ಜನಪ್ರತಿನಿಧಿಗಳ ಸಹಯೋಗದೊಂದಿಗೆ ವಿತರಿಸಲಾಗುವುದು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News